ಟಿಕೆಟ್‍ಗಾಗಿ ಜೆಡಿಎಸ್‍ನಲ್ಲಿ ಹಾಲಿ ಮತ್ತು ಮಾಜಿ ಬಿಬಿಎಂಪಿ ಸದಸ್ಯರ ನಡುವೆ ಪೈಪೋಟಿ

ಈ ಸುದ್ದಿಯನ್ನು ಶೇರ್ ಮಾಡಿ

JDS--01

ಬೆಂಗಳೂರು, ಜ.4- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಪಡೆಯಲು ಬಿಬಿಎಂಪಿಯ ಹಾಲಿ ಮತ್ತು ಮಾಜಿ ಸದಸ್ಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಮೂರು ಮಂದಿ ಬಿಬಿಎಂಪಿ ಸದಸ್ಯರು, ಇಬ್ಬರು ಮಾಜಿ ಸದಸ್ಯರು ಸೇರಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಬಿಬಿಎಂಪಿ ಸದಸ್ಯರು ಟಿಕೆಟ್ ಅಪೇಕ್ಷಿತರಾಗಿದ್ದಾರೆ.

ಜೆಡಿಎಸ್‍ನ ಬೆಂಗಳೂರು ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷರಾಗಿರುವ ಬಿಬಿಎಂಪಿಯ ಮಾಜಿ ಸದಸ್ಯ ಆರ್.ಪ್ರಕಾಶ್, ಹಾಲಿ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ, ವಿ.ಕೃಷ್ಣಮೂರ್ತಿ ಅವರು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ನಾರಾಯಣಸ್ವಾಮಿ ಕೂಡ ಟಿಕೆಟ್ ಬಯಸಿದ್ದಾರೆ. ಅಲ್ಲದೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಮತ್ತು ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರ ಹೆಸರು ಕೂಡ ಕೇಳಿಬಂದಿದೆ.

ಆದರೆ, ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಯನ್ನು ಅಲ್ಲಗಳೆದಿದ್ದಾರೆ. ಅಲ್ಲದೆ ಪ್ರಜ್ವಲ್ ಅವರು ಟಿಕೆಟ್ ಕೋರಿ ಅರ್ಜಿ ಕೂಡ ಸಲ್ಲಿಸಿಲ್ಲ. ಕೊನೆಗಳಿಗೆಯಲ್ಲಿ ಜೆಡಿಎಸ್ ವರಿಷ್ಠರು ಯಾರ ಕಡೆ ಒಲವು ತೋರಿ ಚುನಾವಣಾ ಕಣಕ್ಕಿಳಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಸಿ.ವಿ.ರಾಮನ್‍ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿಯ ಮಾಜಿ ಸದಸ್ಯ ಟಿ.ಮಲ್ಲೇಶ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದೇ ಕ್ಷೇತ್ರದಲ್ಲಿ ಆರ್.ಲಕ್ಷ್ಮಿಮೂರ್ತಿ ಅವರು ಕೂಡ ಟಿಕೆಟ್ ಆಪೇಕ್ಷಿತರಾಗಿದ್ದಾರೆ.

ಅದೇ ರೀತಿ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಸದಸ್ಯರಾದ ಕೆ.ದೇವದಾಸ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್‍ಗಾಗಿ ಹೆಚ್ಚಿನ ಮಂದಿ ಆಕಾಂಕ್ಷಿಗಳು ಸದ್ಯಕ್ಕೆ ಕಂಡು ಬರುತ್ತಿಲ್ಲ. ದೇವದಾಸ್ ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ. ಇದಲ್ಲದೆ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಬಿಬಿಎಂಪಿ ಸದಸ್ಯರು ಜೆಡಿಎಸ್ ಟಿಕೆಟ್ ಬಯಸುತ್ತಿದ್ದು, ಅವರಿನ್ನೂ ಟಿಕೆಟ್ ಕೋರಿ ಜೆಡಿಎಸ್‍ಗೆ ಅರ್ಜಿ ಸಲ್ಲಿಸಿಲ್ಲ. ಸಂಕ್ರಾಂತಿ ನಂತರ ಜೆಡಿಎಸ್‍ನ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿದ್ದು, ಆ ಸಂದರ್ಭದಲ್ಲಿ ಬೆಂಗಳೂರಿನ ಬಹಳಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ.

ಪ್ರತಿ ವಿಧಾನಸಭಾ ಕ್ಷೇತ್ರವಾರು ಟಿಕೆಟ್ ಆಕಾಂಕ್ಷಿಗಳ ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ ಅವರು ಈಗಾಗಲೇ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಪ್ರಕಟಣೆ ಮಾತ್ರ ಬಾಕಿ ಉಳಿದಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Facebook Comments

Sri Raghav

Admin