ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಜ.12ರ ವರೆಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Fake-Voters--01

ಬೆಂಗಳೂರು,ಜ.4-ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇದ್ದರೆ ಮತದಾನ ಮಾಡಬಹುದು ಎಂಬ ಉಡಾಫೆ ಬೇಡ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕು. ಇತರೆ ದಾಖಲೆಗಳೂ ಕಡ್ಡಾಯ ಇರುತ್ತದೆ. ಹಾಗಾಗಿ ಮೈಮರೆಯಬೇಡಿ. ಮತದಾರರ ಕರಡು ಪ್ರತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಆಯಾ ಪೊಲಿಂಗ್ ಕೇಂದ್ರ ಮತ್ತು ನಿಗದಿತ ಸ್ಥಳಗಳಲ್ಲಿ ಪ್ರಕಟ ಮಾಡಲಾಗಿದೆ. ಮೊದಲು ನಿಮ್ಮ ಹೆಸರು ಇದೆಯೇ ಎಂಬುದನ್ನು ತಿಳಿದುಕೊಳ್ಳಿ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಥ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

18 ವರ್ಷ ತುಂಬಿದ ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ದಿನಾಂಕವನ್ನು ಜ.12ರವರೆಗೂ ವಿಸ್ತರಿಸಲಾಗಿದೆ. ಇದನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ವಿಶೇಷ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಮನೆಗಳಿಗೆ ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ಹೊಸ ಹೆಸರು ಸೇರ್ಪಡೆ, ಹೆಸರು ತೆಗೆಸುವುದು ಇತರೆ ಏನಾದರೂ ಇದ್ದರೆ ಅರ್ಜಿ ಸಲ್ಲಿಸಬಹುದು. ಮತದಾರರ ನೋಂದಾಣಾಧಿಕಾರಿಗಳ ಕಚೇರಿ, ಸಲಹಾ ಕೇಂದ್ರಗಳು, 198 ವಾರ್ಡ್ ಕಚೇರಿಗಳು, 101 ಬೆಂಗಳೂರು ಒನ್ ಕೇಂದ್ರದ ಸಕಾಲ ಕೇಂದ್ರಗಳಲ್ಲೂ ಹೆಸರು ನೋಂದಾಯಿಸಬಹುದು.

ನೋಂದಾಯಿಸಿದ ಕೂಡಲೇ ಹೆಸರು ಪ್ರಕಟವಾಗುವುದಿಲ್ಲ. ಇಆರ್‍ಎಂಎಸ್ ಸಾಫ್ಟ್‍ವೇರ್ ಮಾಡಿದೆ ಇದರಲ್ಲಿ ಹೆಸರು ಅಪ್‍ಡೇಟ್ ಮಾಡಲಾಗುತ್ತದೆ. ಇದರಲ್ಲಿನ ಲಿಸ್ಟ್ ನೋಡಿ ಅಧಿಕಾರಿಗಳು ಮನೆಗೆ ಬಂದು ಕೇಳಿದಾಗ ನಿಮ್ಮ ದಾಖಲೆ ಒದಗಿಸಬೇಕು. ಇದಕ್ಕೆ ಒಂದು ವಾರ ಗಡುವು ಇರುತ್ತದೆ. ಫೆ.15ರವರೆಗೆ ಸಮಯಾವಶಕಾಶ ಇರುತ್ತದೆ. ಎಲ್ಲವನ್ನೂ ಪರಿಶೀಲಿಸಿ ಫೆ.20ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ ಮಾಡುತ್ತೇವೆ ಎಂದು ಹೇಳಿದರು.
ಫೆ.20ರ ನಂತರವೂ ಹೆಸರು ನೋಂದಾಯಿಸಬಹುದು. ಆದರೆ ಅಂಥವರ ಹೆಸರು ಇದ್ದರೂ ಮತ ಚಲಾಯಿಸಲು ಅವಕಾಶ ಸಿಗಲಾರದು. ಈ ಹಿಂದೆ 7712 ಮತಗಟ್ಟೆಗಳಿದ್ದವು. ಈಗ 8284 ಮತಗಟ್ಟೆಗಳನ್ನು ರಚನೆ ಮಾಡಿದ್ದೇವೆ. ಇದಕ್ಕೆ ಕನಿಷ್ಟ 4 ಜನರಂತೆ ಸಿಬ್ಬಂದಿ ಬೇಕು. ಇವರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಗೆ ಬರದಿದ್ದರೆ ಕ್ರಮ ಕೈಗೊಳ್ಳಲಾಗುವುದು ಹಾಗಾಗಿ ಎಲ್ಲರೂ ಬರುತ್ತಿದ್ದಾರೆ. ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 8592815 ಮತದಾರರಿದ್ದಾರೆ. ಮೃತಪಟ್ಟಿರುವವರು, ಬೇರೆಡೆ ಮನೆ ಬದಲಾಯಿಸಿರುವವರು ಹೆಸರು ಬದಲಿಸಲು ಸುಮೊಟು ಮೂಲಕ ಕ್ರಮ ಕೈಗೊಳ್ಳುತ್ತೇವೆ.   ಸಮರ್ಪಕ ಮಾಹಿತಿ ನೀಡದಿದ್ದರೆ ಮುಲಾಜಿಲ್ಲದೆ ಹೆಸರು ಡಿಲೀಟ್ ಮಾಡಲಾಗುತ್ತದೆ. ಆದ್ದರಿಂದ ಮತದಾರರು ಸರಿಯಾದ ಮಾಹಿತಿ ನೀಡುವ ಮೂಲಕ ಹೆಸರು ನೋಂದಾಯಿಸಿಕೊಂಡು ನಿಮ್ಮ ಹಕ್ಕು ಚಲಾಯಿಸಿ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Facebook Comments

Sri Raghav

Admin