(Live) ದೀಪಕ್‍ ರಾವ್ ಹತ್ಯೆಯಿಂದ ಮಂಗಳೂರು ಮತ್ತೊಮ್ಮೆ ಉದ್ವಿಗ್ನ : 5 ಲಕ್ಷ ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Deepak--Roa-01

ಬೆಂಗಳೂರು, ಜ.4- ಮಂಗಳೂರಿನ ಪರಿಸ್ಥಿತಿ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ನಿನ್ನೆ ನಡೆದ ಬಿಜೆಪಿ ಕಾರ್ಯಕರ್ತನ ಹತ್ಯೆ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಆಕ್ರೋಶ ತೀವ್ರಗೊಂಡಿದೆ. ನಿನ್ನೆ ಹತ್ಯೆಗೀಡಾದ ದೀಪಕ್‍ ರಾವ್ ಶವಯಾತ್ರೆಗೆ ಅವಕಾಶ ನೀಡದ  ಪೊಲೀಸರ ವಿರುದ್ಧ ಹಿಂದೂಪರ ಸಂಘಟನೆಗಳು, ಕಾಟಿಪಳ್ಳ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆಯಾದ ದೀಪಕ್‍ರಾವ್ ಮೃತದೇಹದ ಮೆರವಣಿಗೆ ಮಾಡಲು ಹಿಂದೂಪರ ಸಂಘಟನೆಗಳ ಅನುಮತಿ ನಿರಾಕರಿಸಿದ  ಪೊಲೀಸರು ಆಸ್ಪತ್ರೆಯಿಂದ ನೇರವಾಗಿ ಶವವನ್ನು ಮನೆಗೆ ರವಾನಿಸಿದ್ದ ಹಿನ್ನೆಲೆಯಲ್ಲಿ ಕಾಟಿಪಳ್ಳ ಗ್ರಾಮಸ್ಥರು ಶವವನ್ನು ಸ್ವೀಕರಿಸಲು ನಿರಾಕರಿಸಿ  ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Deepak--01

ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ  ಪೊಲೀಸರನ್ನು ನಿಯೋಜಿಸಲಾಗಿದೆ. ಕಾಟಿಪಾಳ್ಯದ ದೀಪಕ್‍ರಾವ್ ನಿವಾಸದ ಬಳಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಮೆರವಣಿಗೆಗೆ ಅವಕಾಶ ನೀಡುವವರೆಗೂ ಶವವನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಶವವನ್ನು ಆಸ್ಪತ್ರೆಗೆ ತಿರುಗಿ ಕೊಂಡೊಯ್ಯಿರಿ. ಅಲ್ಲಿಂದ ನಾವು ಮೆರವಣಿಗೆಯಲ್ಲಿ ತರುತ್ತೇವೆ. ಜನಸಾಮಾನ್ಯರಿಗೆ ರಕ್ಷಣೆ ಇಲ್ಲ ಎಂಬುದು ಗೊತ್ತಾಗಲಿ ಎಂದು ಹಲವು ಸಂಘಟನೆಗಳ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Deepak--07

ಹಿರಿಯ  ಪೊಲೀಸ್ ಅಧಿಕಾರಿಗಳು ಕುಟುಂಬದವರ ಮನವೊಲಿಸುವ ಪ್ರಯತ್ನ ನಡೆಸಿದರು. ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರಿಂದ ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿದರಾದರೂ ಆಕ್ರೋಶಭರಿತ ಪ್ರತಿಭಟನಾನಿರತರು ಇದಾವುದನ್ನೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಶವಯಾತ್ರೆಗೆ ಅನುಮತಿ ಕೊಡಬೇಕು. ಗೃಹ ಸಚಿವರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಅಲ್ಲದೆ, ಸ್ಥಳದಲ್ಲಿ ಮೃತರ ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಅಲ್ಲಿಯವರೆಗೆ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಆಗ್ರಹಿಸಿದರು.

Deepak-Rao--007

ಎಡಿಜಿಪಿ ಕಮಲ್‍ಪಂಥ್,  ಪೊಲೀಸ್ ಆಯುಕ್ತ ಸುರೇಶ್, ಎಸ್‍ಪಿ ಸುಧೀರ್‍ಕುಮಾರ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ದೀಪಕ್ ಮನೆಯವರ ಮನವೊಲಿಸುವ ಪ್ರಯತ್ನ ನಡೆಸಿದರು. ಕಳೆದ ನಾಲ್ಕೈದು ಗಂಟೆಯಿಂದ ಶವ ಆ್ಯಂಬುಲೆನ್ಸ್‍ನಲ್ಲೇ ಇದ್ದು, ಹಿಂದೂಪರ ಸಂಘಟನೆಗಳವರು ಪ್ರತಿಭಟನೆ ಮುಂದುವರಿಸಿದ್ದರು.

Protest

ದೀಪಕ್‍ರಾವ್ ಕೊಲೆ ಪ್ರಕರಣವನ್ನುಸಿಬಿಐಗೆ ಒಪ್ಪಿಸುವಂತೆ ದೆಹಲಿಯಲ್ಲಿ ಸಂಸದರ ಪ್ರತಿಭಟನೆ

ನವದೆಹಲಿ,ಜ.4- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತ ದೀಪಕ್‍ರಾವ್ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ತಕ್ಷಣವೇ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಸಂಸದರು ಇಂದು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಇಂದು ಬೆಳಗ್ಗೆ ಸಂಸತ್‍ನ ಕಲಾಪ ಆರಂಭಕ್ಕೂ ಮುನ್ನ ಗಾಂಧಿ ಪ್ರತಿಮೆ ಮುಂದೆ ರಾಜ್ಯ ಸಂಸದರಾದ ಪ್ರಹ್ಲಾದ್ ಜೋಷಿ, ಶೋಭ ಕರಂದ್ಲಾಜೆ, ಸುರೇಶ್ ಅಂಗಡಿ, ಪಿ.ಸಿ.ಮೋಹನ್, ಪ್ರತಾಪ್ ಸಿಂಹ, ಗದ್ದಿಗೌಡರು, ಭಗವಂತ ಕೂಬ, ಶಿವಕುಮಾರ್ ಉದಾಸೀ, ಕರಡಿ ಸಂಗಣ್ಣ , ರಾಜ್ಯಸಭಾ ಸದಸ್ಯರಾದ ಪ್ರಭಾಕರ್ ಕೋರೆ, ಬಸವರಾಜ್ ಪಾಟೀಲ್ ಸೇಡಂ ಮತ್ತಿತರರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.

Deepak--08

ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಫಲಕ ಹಿಡಿದು ಕೆಲಕಾಲ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಒಂದು ಸಮುದಾಯವನ್ನು ಓಲೈಸುವ ನೆಪದಲ್ಲಿ ಹಿಂದುಗಳ ಮೇಲೆ ನಿರಂತರ ದಬ್ಬಾಳಿಕೆ, ಕೊಲೆ, ಸುಲಿಗೆ ನಡೆಯುತ್ತಿದ್ದರೂ ಎಚ್ಚೆತ್ತುಕೊಂಡಿಲ್ಲ. ನಿನ್ನೆ ಮಂಗಳೂರಿನ ಹೊರವಲಯದಲ್ಲಿ ದೀಪಕ್ ರಾವ್‍ನನ್ನು ಹಾಡುಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಗ್ಗೊಲೆ ಮಾಡಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಪ್ರಹ್ಲಾದ್ ಜೋಷಿ ಆರೋಪಿಸಿದರು.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತಿತರ ಭಾಗಗಳಲ್ಲಿ ಕೆಲ ಮೂಲಭೂತ ಸಂಘಟನೆಗಳು ಹಿಂದು ಮತ್ತು ಸಂಘಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಪದೇ ಪದೇ ಕೊಲೆ, ಹಲ್ಲೆ ನಡೆಸುವಂತ ಕೃತ್ಯಗಳನ್ನು ನಿರಂತರವಾಗಿ ನಡೆಸುತ್ತಲೇ ಇದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂಥ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿದರು. ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ , ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಾಮನಾಥ್ ರೈ ನೇರ ಕಾರಣ. ನೈತಿಕ ಹೊಣೆಯನ್ನು ಈ ಮೂವರು ಹೊರಬೇಕೆಂದು ಒತ್ತಾಯಿಸಿದರು.

> ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ : ರಮಾನಾಥ ರೈ

ಬೆಂಗಳೂರು, ಜ.4- ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಶಾಂತಿ-ಸುವ್ಯವಸ್ಥೆಗೆ ಭಂಗ ಬರಬಾರದು ಎಂಬ ಕಾರಣದಿಂದ ಶವದ ಮೆರವಣಿಗೆಗೆ ಅವಕಾಶ ನೀಡಿಲ್ಲ ಎಂದು ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ. ದೀಪಕ್‍ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ನಡೆದ ಮೇಲೆ ಸತ್ಯಾಂಶ ಹೊರಬೀಳಲಿದೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳು ನಮ್ಮ ರಾಜ್ಯದಲ್ಲಿ ಮಾತ್ರ ಇಲ್ಲ, ದೇಶದ ಹಲವೆಡೆ ಇವೆ. ಕೇಂದ್ರ ಸರ್ಕಾರವೇ ಆ ಸಂಘಟನೆಗಳನ್ನು ನಿಷೇಧಿಸಲಿ ಎಂದು ಸಂಸದೆ ಶೋಭಾ ಹೇಳಿಕೆಗೆ ತಿರುಗೇಟು ನೀಡಿದರು.

> ದೀಪಕ್‍ ರಾವ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕುಮ್ಮಕ್ಕಿದೆ : ಬಿಎಸ್‍ವೈ

ದಾವಣಗೆರೆ, ಜ.4- ಮಂಗಳೂರಿನಲ್ಲಿ ಹಿಂದೂ ಯುವಕ ದೀಪಕ್‍ರಾವ್ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕುಮ್ಮಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪರೇಶ್ ಮೇಸ್ತ ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಿದ್ದರೆ ಮತ್ತೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂದ ಕಿಡಿಕಾರಿದರು. ಕೊಲೆಗಡುಕರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ದಕ್ಷಿಣ ಕನ್ನಡದಲ್ಲಿ ಈವರೆಗೆ 24 ಕೊಲೆಗಳು ನಡೆದಿವೆ. ಇಷ್ಟಾದರೂ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಇನ್ನೆಷ್ಟು ಮಂದಿಯ ನೆತ್ತರು ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ದೀಪಕ್‍ರಾವ್ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಬಿಎಸ್‍ವೈ ಸರ್ಕಾರದ ನಿರ್ಲಕ್ಷ್ಯದಿಂದ ಕೊಲೆಗಡುಕರು ವಿಜೃಂಭಿಸಿದ್ದಾರೆ. ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಇನ್ನೇನು ಅನಾಹುತಗಳು ನಡೆಯುತ್ತವೆಯೋ ಎಂದು ಆತಂಕ ವ್ಯಕ್ತಪಡಿಸಿದರು.

> ಹಿಂದೂಗಳನ್ನು ಕಗ್ಗೊಲೆ ಮಾಡುತ್ತಿರುವ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸಿ : ಶೋಭಾ
ಬೆಂಗಳೂರು, ಜ.4- ಕರಾವಳಿಯಲ್ಲಿ ಹಿಂದೂಗಳ ನಿರಂತರ ಕಗ್ಗೊಲೆಗಳ ಹಿಂದೆ ಪಿಎಫ್‍ಐ, ಎಸ್‍ಡಿಪಿಐ ಹೆಸರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು. ನವದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತ ದೀಪಕ್‍ರಾವ್ ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.

ಹಿಂದೂಗಳ ರಕ್ಷಣೆ ಬಗ್ಗೆ ಈ ಸರ್ಕಾರಕ್ಕೆ ಜವಾಬ್ದಾರಿ ಇಲ್ಲ. ಮುಸ್ಲಿಮರ ಕೊಲೆಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಳಜಿ ವಹಿಸುತ್ತಾರೆ. ಶಾಂತಿಯುತವಾಗಿ ಶವದ ಮೆರವಣಿಗೆ ನಡೆಸಲು ಅವಕಾಶ ಕೂಡ ನೀಡಲಿಲ್ಲ ಎಂದು ಆರೋಪಿಸಿದರು. ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳನ್ನು ರಾಜ್ಯ ಸರ್ಕಾರ ನಿಷೇಧಿಸಬೇಕು ಎಂದು ನಾವು ಒತ್ತಾಯಿಸುತ್ತಲೇ ಬಂದಿದ್ದೇವೆ. ಸರ್ಕಾರದ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಮುಂದುವರಿಯುತ್ತಿವೆ ಎಂದು ಹೇಳಿದರು. ಈ ಘಟನೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮುಖ್ಯಮಂತ್ರಿಗಳಿದ್ದಾರೆ. ಮುಸ್ಲಿಮರ ಹತ್ಯೆಯಾದಾಗ ಸ್ಪಂದಿಸುತ್ತಾರೆ. ಅವರು ಮಾತ್ರ ಅವರಿಗೆ ಕಾಣುತ್ತಾರೆ. ಹಿಂದೂಗಳು ಕಾಣುವುದಿಲ್ಲ ಎಂದು ದೂರಿದರು.

>  ಪರಿಹಾರ ಘೋಷಣೆ:
ಹತ್ಯೆಯಾದ ದೀಪಕ್‍ರಾವ್ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಪರಿಹಾರವನ್ನು ಇನ್ನಷ್ಟು ಹೆಚ್ಚಿಸುವುದಾಗಿಯೂ ಭರವಸೆ ನೀಡಿದ್ದಾರೆ. ಅದೇ ರೀತಿ ಹಿಂದೆ ಹತ್ಯೆಯಾದ ಶರತ್ ಮಡಿವಾಳ, ರಾಜುಮಗೇರ ಅವರ ಕುಟುಂಬಕ್ಕೂ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದರು. ಕರಾವಳಿಯಲ್ಲಿ 21 ಕೊಲೆಗಳಾಗಿವೆ ಎಂದು ಲೆಕ್ಕ ಹೇಳುವ ಬಿಜೆಪಿಯವರು ಅಶ್ರಫ್, ವಿನಾಯಕ್‍ಬಾಳಿಗ, ಹರೀಶ್‍ಪೂಜಾರಿ ಅವರಂಥ ಕೊಲೆಗಳನ್ನು ಮರೆತಿರುವುದೇಕೆ ಎಂದು ಖಾದರ್ ಪ್ರಶ್ನಿಸಿದರು.

> ಗಲಾಟೆಗೆ ಕುಮ್ಮಕ್ಕು ಕೊಡುವವರ ವಿರುದ್ಧ ನಿರ್ಧಾಕ್ಷಿಣ್ಯಕ್ರಮ ಕ್ರಮಕ್ಕೆ ಸಿಎಂ ಸೂಚನೆ 
ಬೆಂಗಳೂರು, ಜ.4- ಮಂಗಳೂರು ದೀಪಕ್‍ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿರಾಜು ಅವರಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಲಾಟೆಗೆ ಕುಮ್ಮಕ್ಕು ಕೊಡುವವರ ವಿರುದ್ಧ ನಿರ್ಧಾಕ್ಷಿಣ್ಯಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ರಸ್ತೆಗಿಳಿದು ಗಲಾಟೆ ಮಾಡುವವರನ್ನು ಬಂಧಿಸಿ ದೂರು ದಾಖಲಿಸಿ ಯಾವುದೇ ರೀತಿ ಮುಲಾಜು ನೋಡಬೇಡಿ. ಅನಗತ್ಯವಾಗಿ ಕಾನೂನು ಸುವ್ಯವಸ್ಥೆ ಹಾಳುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಸಾರ್ವಜನಿಕರು ಕೂಡ ಸಹಕರಿಸುವಂತೆ ಮನವಿ ಮಾಡಿದ ಅವರು, ಇಂತ ಘಟನೆಗಳು ಪದೇ ಪದೇ ಮರುಕಳಿಸಲು ಕಾರಣವೇನು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಡಿಜಿಪಿ ಕಮಲ್‍ಪಂಥ್ ಅವರಿಗೂ ದೂರವಾಣಿ ಕರೆ ಮಾಡಿ ಮಾತನಾಡಿದ ಸಿಎಂ, ಮಂಗಳೂರಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರವನ್ನು ಪಡೆದರು. ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳಬೇಕು. ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಹಿಸಬೇಕು ಎಂಬ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

>  ಕರಾವಳಿ ಭಾಗದ ಜನಪ್ರತಿನಿಧಿಗಳ ಜತೆ ಸಿಎಂ ಸಿದ್ದರಾಮಯ್ಯ ತುರ್ತು ಸಭೆ
ಬೆಂಗಳೂರು, ಜ.4- ಮಂಗಳೂರಿನಲ್ಲಿ ನಡೆದ ದೀಪಕ್‍ರಾವ್ ಹತ್ಯೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಭಾಗದ ಜನಪ್ರತಿನಿಧಿಗಳ ಜತೆ ಇಂದು ತುರ್ತು ಸಭೆ ನಡೆಸಿದರು. ಸಚಿವ ಯು.ಟಿ.ಖಾದರ್, ಶಾಸಕ ಮಾಂಕಳ್‍ವೈದ್ಯ ಸೇರಿದಂತೆ ಹಲವರ ಜತೆ ಸಭೆ ನಡೆಸಿದ ಸಿಎಂ, ಬಿಜೆಪಿ ಕಾರ್ಯಕರ್ತ ದೀಪಕ್‍ರಾವ್ ಹತ್ಯೆ ಘಟನೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂಬಂಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು.

ಇತ್ತೀಚೆಗೆ ಹಲವು ಘಟನೆಗಳು ನಡೆಯುತ್ತಿದ್ದು, ಈ ಪರಿಸ್ಥಿತಿಯ ಲಾಭವನ್ನು ಕೋಮು ಶಕ್ತಿಗಳು ಪಡೆಯುತ್ತಿವೆ. ಈ ಬಗ್ಗೆ ಎಚ್ಚರದಿಂದ ಇರಬೇಕು. ಯಾವುದೇ ಅಪರಾಧ ಪ್ರಕರಣಗಳು ನಡೆದರೂ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ, ಪ್ರತೀ ಘಟನೆಗಳೂ ರಾಜಕೀಕರಣವಾಗುತ್ತಿವೆ. ನಮ್ಮ ಜನಪ್ರತಿನಿಧಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

Facebook Comments

Sri Raghav

Admin