ಅಡೆ ತಡೆ ಪರಿಹರಿಸಿಕೊಂಡು ಯಶಸ್ಸಿನತ್ತ ‘ಅಂಜನಿಪುತ್ರ’

ಈ ಸುದ್ದಿಯನ್ನು ಶೇರ್ ಮಾಡಿ

anja-1

ಪವರ್‍ಸ್ಟಾರ್ ಪುನೀತ್ ಅಭಿನಯದ ಅಂಜನಿಪುತ್ರ ಬಿಡುಗಡೆಯಾದಂತಹ ಎಲ್ಲಾ ಕೇಂದ್ರಗಳಲ್ಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಇದರ ನಡುವೆ ಕೆಲವೊಂದು ಸಮಸ್ಯೆ ಎದುರಾಗಿ ಅವೆಲ್ಲವೂ ಈಗ ಪರಿಹಾರಗೊಂಡು ಚಿತ್ರ ಮುಂದೆ ಸಾಗುತ್ತಿದೆ. ಈ ಕುರಿತು ಚಿತ್ರ ತಂಡ ಇತ್ತೀಚೆಗೆ ಪತ್ರಿಕಾಗೋಷ್ಟಿ ನಡೆಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿತು. ಮೊದಲು ನಿರ್ಮಾಪಕ ಎನ್. ಕುಮಾರ್ ಮಾತನಾಡಿ, ಚಿತ್ರದಲ್ಲಿ ಸಣ್ಣ ಲೋಪವಿದೆ ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 17 ಸೆಕೆಂಡ್‍ನಷ್ಟು ಭಾಗವನ್ನು ಈಗ ಟ್ರಿಮ್ ಮಾಡಿದ್ದೇವೆ. ಶನಿವಾರದಿಂದ ಎಲ್ಲಾ ಚಿತ್ರಮಂದಿರಗಳಲ್ಲಿ ಅಂಜನಿಪುತ್ರ ಸಿನಿಮಾ ಪ್ರದರ್ಶನವಾಗುತ್ತಿದೆ. ಒಬ್ಬ ಮನುಷ್ಯ ತೊಂದರೆಯಲ್ಲಿದ್ದಾಗ ಬಂದು ನೆರವಾಗುವುದು ಸ್ನೇಹಿತರ ಧರ್ಮ. ನಾನು ಸಾಕಷ್ಟು ಜನರಿಗೆ ತೊಂದರೆಯಲ್ಲಿದ್ದಾಗ ಸಹಾಯಕ್ಕೆ ನಿಂತಿದ್ದೆ, ಹಾಗಂತ ನಾನು ಯಾರಮೇಲೂ ಆರೋಪ ಮಾಡಲ್ಲ. ಜನ ಖಂಡಿತ ಚಿತ್ರವನ್ನು ಮುಂದುವರೆಸಿಕೊಂಡು ಹೋಗ್ತಾರೆ ಎನ್ನುವ ನಂಬಿಕೆಯಿದೆ ಎಂದು ಹೇಳಿದರು.

ನಂತರ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ ಸೆನ್ಸಾರಾದ ಮೇಲೆ ಏನಾದರೂ ಲೋಪದೋಷಗಳಿದ್ದರೆ ಕೋರ್ಟ್‍ಗೆ ಹೋಗುವುದಕ್ಕೆ ಮುಂಚೆ ನಮ್ಮ ಬಳಿ ಬಂದಿದ್ದರೆ ಮಾತುಕತೆಯ ಮೂಲಕವೇ ಮುಗಿಸಬಹುದಿತ್ತು. ನಾವೆಲ್ಲ ಪುನೀತ್ ಅಭಿಮಾನಿಗಳು ಎಂದು ವಕೀಲರು ಮೊನ್ನೆ ಬಂದಾಗ ಹೇಳಿದರು. ಏಕಾಏಕಿ ಕೋರ್ಟಿಗೆ ಹೋಗುವುದು ತಪ್ಪು. ಅದರಿಂದ ನಿರ್ಮಾಪಕನಿಗೆ ಎಷ್ಟು ನಷ್ಟವುಂಟಾಗುತ್ತದೆ ಎನ್ನುವುದನ್ನು ಎಲ್ಲರೂ ಯೋಚಿಸಬೇಕು. ಈಗ ಎಲ್ಲವೂ ಸರಿಯಾಗಿದೆ. ಮುಂದೆ ಈರೀತಿ ಆಗದಂತೆ ಎಲ್ಲರೂ ಸೇರಿ ಜಾಗ್ರತೆ ವಹಿಸುತ್ತೇವೆ ಎಂದು ಹೇಳಿದರು.  ನಟ ಪುನೀತ್ ಮಾತನಾಡಿ, ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದು ಹೇಳ್ತಾ ಬಂದರೂ ಕೆಲಕಾರಣಗಳಿಂದ ಸಿನಿಮಾ ಸ್ಟಾಪ್ ಆಗಬೇಕಾಯಿತು. ಒಂದು ದಿನ ಅದರ ಎಫೆಕ್ಟ್ ಆಯಿತು. ಸಿನಿಮಾನ ಜನ ಇಷ್ಟ ಪಟ್ಟು ನೋಡ್ತಾರೆ. ಎಲ್ಲಾ ಅಭಿಮಾನಿ ದೇವರುಗಳು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಇಚ್ಛೆಯನ್ನು ನಿರ್ಮಾಪಕರು ಹೊಂದಿದ್ದಾರೆ. ನನ್ನ ಸಹಕಾರ ತಂಡಕ್ಕೆ ಸದಾ ಇದ್ದೇ ಇರುತ್ತದೆ ಎಂದರು. ಅದೇ ರೀತಿ ನಾಯಕಿ ರಶ್ಮಿಕಾ ಕೂಡ ಚಿತ್ರ ಉತ್ತಮ ಪ್ರದರ್ಶನ ಪಡೆಯುತ್ತಿದ್ದು, ಸ್ನೇಹಿತರಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ ಎಂದರು. ನಿರ್ದೇಶಕ ಹರ್ಷ ಮಾತನಾಡಿ, ಒಂದೊಳ್ಳೆ ತಂಡದೊಂದಿಗೆ ಉತ್ತಮ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದೇನೆ. ನೀವೆಲ್ಲರೂ ನೋಡಿ ಹರಸಬೇಕು ಎಂದು ಕೇಳಿಕೊಂಡರು.

Facebook Comments

Sri Raghav

Admin