ಈಗಿರುವ ಕೆಂಪು-ಹಳದಿ ಬಾವುಟ ನಾಡ ಧ್ವಜವಾಗಲಿ : ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

Kannada--02

ಬೆಂಗಳೂರು, ಜ.5- ಪ್ರಸ್ತುತ ಇರುವ ಹಳದಿ-ಕೆಂಪು ಬಣ್ಣದ ಧ್ವಜವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೆ ನಾಡಧ್ವಜವಾಗಿ ಮುಂದುವರೆಸುವಂತೆ ವಾಟಾಳ್ ನಾಗರಾಜ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಧ್ವಜ ಮಾನ್ಯತೆ ನೆಪದಲ್ಲಿ ಪ್ರಸ್ತುತ ಇರುವ ಧ್ವಜವನ್ನು ವಿನ್ಯಾಸ ಮಾಡಲು ಹೊರಟಿರುವ ಕ್ರಮ ಖಂಡನೀಯ. ಹಾಲಿ ಇರುವ ನಾಡಧ್ವಜವನ್ನೇ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು, ಬದಲಾವಣೆ ಮಾಡಲು ಮುಂದಾದರೆ ನಾಡಿನಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಳದಿ-ಕೆಂಪು ಬಣ್ಣದ ಧ್ವಜಕ್ಕೆ ತನ್ನದೇ ಆದ ಮಹತ್ವವಿದೆ. ಕನ್ನಡಿಗರ ಧೀಶಕ್ತಿಯಾಗಿರುವ ಈ ಧ್ವಜಕ್ಕೆ ಮಾನ್ಯತೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಯಾವುದೇ ಕಾರಣಕ್ಕೂ ಬಾವುಟ ವಿನ್ಯಾಸ ಬದಲಾವಣೆ ಮಾಡುವುದಕ್ಕೆ ಕೈ ಹಾಕಬಾರದು ಎಂದು ಎಚ್ಚರಿಸಿದರು. ಕಳೆದ 5 ದಶಕಗಳ ಹಿಂದೆ ನಾನು ಮತ್ತು ಕನ್ನಡ ಹೋರಾಟಗಾರರಾದ ರಾಮಮೂರ್ತಿ ಅವರು ಈ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದೇವೆ. ಅದಕ್ಕೊಂದು ವಿಶಿಷ್ಟ ಶಕ್ತಿ ಇದೆ. ಇಡೀ ರಾಜ್ಯದ ಜನರು ಆ ಬಾವುಟದ ಬಣ್ಣ ಮತ್ತು ವಿನ್ಯಾಸವನ್ನು ಒಪ್ಪಿದ್ದಾರೆ. ಜನರೇ ನ್ಯಾಯಾಲಯವಿದ್ದಂತೆ. ಅವರ ತೀರ್ಪೇ ಅಂತಿಮವಾಗಿರುವಾಗ ರಾಜ್ಯಸರ್ಕಾರ ಧ್ವಜ ವಿನ್ಯಾಸಕ್ಕೆ ಸಮಿತಿ ನೇಮಿಸಿರುವುದು ತಪ್ಪು. ಈ ಸಮಿತಿಯನ್ನು ಕೂಡಲೇ ರದ್ದು ಮಾಡಬೇಕೆಂದು ವಾಟಾಳ್ ಆಗ್ರಹಿಸಿದರು.
ಕನ್ನಡ ರಾಜ್ಯೋತ್ಸವದಂದು ಈ ಧ್ವಜವನ್ನು ಪೂಜ್ಯನೀಯ ಭಾವದಿಂದ ಹಾರಿಸುತ್ತೇವೆ. ಸಿನಿಮಾ, ಸಾಹಿತ್ಯ, ಕ್ರೀಡೆ, ಎಲ್ಲ ರಂಗದವರು ಈ ಧ್ವಜಕ್ಕೆ ಗೌರವ ನೀಡುತ್ತಾರೆ ಎಂದರು.

ಹಳದಿ-ಕೆಂಪು ಬಣ್ಣ ಹೊಂದಿರುವ ಕರ್ನಾಟಕದ ಬಾವುಟವನ್ನು ಬದಲಾಯಿಸುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ಕ್ರಮದಿಂದ ಸರ್ಕಾರ ಹಿಂದೆ ಸರಿಯದಿದ್ದರೆ ನಾವು ಆಂದೋಲನ ಮಾಡಬೇಕಾಗುತ್ತದೆ ಎಂದು ಹೇಳಿದರು. ಕಳಸಾ ಬಂಡೂರಿ, ಮಹದಾಯಿ, ಮೇಕೆದಾಟು ಯೋಜನೆಗೆ ಆಗ್ರಹಿಸಿ ನಾಳೆ ರಾಮನಗರದಲ್ಲಿ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಮಹದಾಯಿ ಯೋಜನೆಯಲ್ಲಿ ರಾಜಕೀಯ ಪಕ್ಷಗಳು ಕೆಸರೆರಚಾಟ ನಡೆಸುತ್ತಿವೆ. ಪಕ್ಷ ರಾಜಕಾರಣದಿಂದ ಅಮಾಯಕ ಜನರಿಗೆ ಕುಡಿಯುವ ನೀರಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಪ್ರಾರಂಭಿಸದೆ ಅನಗತ್ಯ ವಿಳಂಬ ಮಾಡುತ್ತಿದೆ. ಈ ಎಲ್ಲಾ ನಿರ್ಲಕ್ಷ್ಯಗಳನ್ನು ನೋಡಿಕೊಂಡು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin