ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಕೇಂದ್ರದಿಂದ ತಾರತಮ್ಯ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು, ಜ.5- ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ರಾಜ್ಯ ಸರ್ಕಾರದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು ಗಣಿ ಹಂಚಿಕೆ ಕುರಿತಂತೆ ಕೇಂದ್ರ ಇಂಧನ ಸಚಿವ ಪೀಯುಷ್ ಗೋಯಲ್ ಸಹ ಸುಳ್ಳು ಆರೋಪ ಮಾಡಿದ್ದಾರೆ. ಪ್ರತಿ ಹಂತದಲ್ಲೂ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಬಾರಿ ಕೇಂದ್ರ ಇಂಧನ ಸಚಿವರ ಭೇಟಿಗೆ ಯತ್ನಿಸಿದ್ದೆವು. ಪತ್ರವನ್ನೂ ಸಹ ಬರೆದಿದ್ದೇವೆ. ಇಲಾಖೆ ವತಿಯಿಂದ 55 ಬಾರಿ ಸಂಪರ್ಕಿಸುವ ಪ್ರಯತ್ನ ನಡೆದಿದೆ. ಆದರೆ, ಯಾವುದಕ್ಕೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ಕಲ್ಲಿದ್ದಲು ಸಚಿವರನ್ನು ಒಮ್ಮೆ ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಂಡು ಹೋಗಿ ಒಂದೂವರೆ ಗಂಟೆ ಕಾಲ ಕಾದರೂ ಭೇಟಿಯಾಗಲಿಲ್ಲ. ಅಲ್ಲಿಂದ ನಿರಾಶರಾಗಿ ಹಿಂದಿರುಗಬೇಕಾಯಿತು ಎಂದು ವಿವರಿಸಿದರು. ಮಹಾರಾಷ್ಟ್ರ , ರಾಜ್ಯಕ್ಕೆ ಹಂಚಿಕೆ ಮಾಡಲಿರುವ ಕಲ್ಲಿದ್ದಲನ್ನು ಸಂಧಾನ ಅಥವಾ ಟೆಂಡರ್ ಮೂಲಕ ಪಡೆಯಬೇಕೆ ಎಂಬ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ವಿವಾದವಿದೆ. ಇದು ಅಂತಿಮವಾಗುವವರೆಗೂ ಖರೀದಿಗೆ ತೊಂದರೆಯಾಗಲಿದೆ. ಇದರ ನಡುವೆ ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿ ರದ್ದು ಮಾಡುವ ಬಗ್ಗೆ ನೋಟಿಸ್ ನೀಡಿದೆ ಎಂದು ಹೇಳಿದರು. ಕರ್ನಾಟಕಕ್ಕೆ 119.57 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಮಂಜೂರಾಗಿದ್ದರೂ ಇದುವರೆಗೂ 63.9 ಲಕ್ಷ ಮೆಟ್ರಿಕ್ ಟನ್ ಮಾತ್ರ ಕಲ್ಲಿದ್ದಲು ಪೂರೈಸಲಾಗಿದೆ. ಉಳಿದ 53.1 ಲಕ್ಷ ಮೆಟ್ರಿಕ್ ಟನ್ ನಮಗೆ ಸರಬರಾಜು ಮಾಡಿಲ್ಲ.

ಜನವರಿಯಿಂದ ಮಾರ್ಚ್‍ವರೆಗೆ 55.7 ಲಕ್ಷ ವÉುಟ್ರಿಕ್ ಟನ್ ಬೇಡಿಕೆ ಇದ್ದು, ಇದರಲ್ಲಿ 45.22 ಲಕ್ಷ ಮೆಟ್ರಿಕ್ ಟನ್ ಮಾತ್ರ ಪೂರೈಸಲಾಗಿದೆ. ಉಳಿದ ಕಲ್ಲಿದ್ದಲು ಪೂರೈಕೆಯಾಗಿಲ್ಲ ಎಂದು ಮಾಹಿತಿ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2.50ರೂ.ಗೆ 1 ಯುನಿಟ್ ಕರೆಂಟ್ ಕೊಡಿಸುತ್ತೇನೆ ಎನ್ನುತ್ತಾರೆ. ಆದರೆ, ನಾನು ಅಖಿಲ ಭಾರತ ಇಂಧನ ಸಚಿವರ ಸಮಾವೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಯಾರೊಬ್ಬರಿಂದಲೂ ಪ್ರತಿಕ್ರಿಯೆ ಬರಲಿಲ್ಲ ಎಂದು ನುಡಿದರು.

ವಿದೇಶಿ ಕಲ್ಲಿದ್ದಲು ಖರೀದಿಗೆ ಚಿಂತನೆ:

ಕಲ್ಲಿದ್ದಲು ಹಂಚಿಕೆಯಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡಲಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಸಚಿವರನ್ನು ನಾವು ಈಗಾಗಲೇ ಭೇಟಿ ಮಾಡಿದ್ದೇವೆ. ಆದರೂ ಯಾವುದೇ ಪರಿಹಾರ ದೊರೆತಿಲ್ಲ. ರಾಜ್ಯದಲ್ಲಿರುವ ಕಲ್ಲಿದ್ದಲು ಕೊರತೆ ನಿಭಾಯಿಸಲು ವಿದೇಶಿ ಕಲ್ಲಿದ್ದಲು ಖರೀದಿಗೆ ಮುಂದಾಗಿದ್ದೇವೆ. ರಾಜ್ಯ ಸರ್ಕಾರ ನೇರವಾಗಿ ಶೇ.35ರಷ್ಟು ವಿದೇಶಿ ಕಲ್ಲಿದ್ದಲನ್ನು ಖರೀದಿ ಮಾಡಬಹುದಾಗಿದ್ದು, ಅದರಂತೆ ಟೆಂಡರ್ ಕರೆಯಲಾಗಿದೆ. ಕೇಂದ್ರದ ಸ್ವಾಯತ್ತ ಸಂಸ್ಥೆ ಎಂಎಸ್‍ಟಿಸಿ ಮುಂದೆ ಬಂದಿದೆ ಎಂದು ತಿಳಿಸಿದರು.

ನಿನ್ನೆ ರಾತ್ರಿಯೂ ಸಹ ಕರ್ನಾಟಕ ವಿದ್ಯುತ್ ನಿಗಮದ ಸಭೆ ನಡೆದಿದೆ. ಅಲ್ಲಿಯೂ ಸಾಧಕ-ಬಾಧಕಗಳ ಚರ್ಚೆ ನಡೆಸಿದ್ದೇವೆ. ನಾಲ್ಕೈದು ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ವಿದೇಶಿ ಕಲ್ಲಿದ್ದಲು ಬಳಸುವ ಸಾಮಥ್ರ್ಯ ನಮ್ಮ ಯಂತ್ರೋಪಕರಣಗಳಿಗೂ ಇದೆ ಎಂದು ವಿವರಿಸಿದರು. ಬಳ್ಳಾರಿಯಲ್ಲಿ ಏಳು ದಿನಗಳಿಗಾಗುವಷ್ಟು , ರಾಯಚೂರಿನಲ್ಲಿ ಒಂದು ದಿನಕ್ಕಾಗುವಷ್ಟು ಮಾತ್ರ ಕಲ್ಲಿದ್ದಲಿದೆ. ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ, ರಾಯಚೂರಿನ ತಲಾ ಎರಡು ವಿದ್ಯುತ್ ಘಟಕಗಳನ್ನು ಸ್ಥಗಿತಗೊಳಿಸಿ ಕಲ್ಲಿದ್ದಲನ್ನು ಉಳಿತಾಯ ಮಾಡಲಾಗಿದೆ. ಈಗಾಗಲೇ ಗುಜರಾತ್ 25 ಲಕ್ಷ ಟನ್ ವಿದೇಶಿ ಕಲ್ಲಿದ್ದಲನ್ನು ಖರೀದಿಸಿದೆ. ಆದರೆ, ನಮಗ್ಯಾಕೆ ಈ ಅಧಿಕಾರವಿಲ್ಲ ಎಂದು ಪ್ರಶ್ನಿಸಿದರು.

ಬೇಸಿಗೆಯಲ್ಲಿ ಎದುರಾಗಬಹುದಾದ ವಿದ್ಯುತ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಜಲಾಶಯಗಳಲ್ಲಿ ನೀರನ್ನು ಉಳಿಸಿಕೊಳ್ಳಲಾಗಿದೆ. ವಿದೇಶಿ ಕಲ್ಲಿದ್ದಲು ಖರೀದಿಗೂ ಚಿಂತನೆ ನಡೆದಿದೆ. ಇಂತಹ ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕತ್ತಲಲ್ಲಿ ಕರ್ನಾಟಕ ಎಂಬುದನ್ನು ದೂರ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಲು ಮುಂದಾಗಿದ್ದೇವೆ ಎಂದರು. ಇಂದು ಬೆಳಗ್ಗೆ 133 ದಶಲಕ್ಷ ಯುನಿಟ್ ವಿದ್ಯುತ್ ಬೇಡಿಕೆ ಇದ್ದು, ಅಷ್ಟನ್ನು ಪೂರೈಸಿ 284 ಮೆ.ವ್ಯಾ. ವಾಪಸ್ ಕೊಟ್ಟಿದ್ದೇವೆ. ಬೇಡಿಕೆ ಹಾಗೂ ಪೂರೈಕೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಕೇಂದ್ರದಿಂದ 4837 ದಶಲಕ್ಷ ಯುನಿಟ್ , ರಾಜ್ಯ ಸರ್ಕಾರದಿಂದ 3734 ದಶಲಕ್ಷ ಯುನಿಟ್, ಎನ್‍ಟಿಪಿಯಿಂದ 1568 ದಶಲಕ್ಷ ಯುನಿಟ್, ಖಾಸಗಿಯವರಿಂದ 900 ದಶಲಕ್ಷ ಯುನಿಟ್, ಪಾವಗಡದಿಂದ 172 ದಶಲಕ್ಷ ಯುನಿಟ್ ಖರೀದಿ ಮಾಡಲಾಗಿದೆ ಎಂದು ವಿವರಣೆ ನೀಡಿದರು.

Facebook Comments

Sri Raghav

Admin