ಜೆಡಿಎಸ್-ಬಿಜೆಪಿಯವರ ಕನಸು ನನಸಾಗಲ್ಲ : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೇಲೂರು, ಜ.5- ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿವೆ. ಆದರೆ, ನಮ್ಮ ಪಕ್ಷವೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ತಾಲ್ಲೂಕಿನ ವಿವಿಧ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡ ದಿಟ್ಟ ಸರ್ಕಾರವೆನಿಸಿದೆ ಬರಗಾಲದ ಸ್ಥಿತಿಯಲ್ಲಿ ಸಹಕಾರ ಸಂಘದಲ್ಲಿದ್ದ ರೈತರ ಸಾಲಮನ್ನಾ ಮಾಡಿದ್ದೇವೆ. ಆದರೆ, ಪ್ರಧಾನಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿರುವ ರೈತರ ಸಾಲಮನ್ನಾ ಮಾಡಬೇಕು ಎಂದು ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‍ನವರು ಅವಕಾಶವಾದಿ ರಾಜಕಾರಣ ಮಾಡಿಕೊಂಡು ಚುನಾವಣೆ ಸಂದರ್ಭದಲ್ಲಿ ಮಾತ್ರ ಕಿಂಗ್ ಮೇಕರ್ ಎನ್ನುತ್ತಾರೆ. ಜೆಡಿಎಸ್‍ನವರು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಅದೇ ರೀತಿ ಬಿಜೆಪಿಯ ಮಿಷನ್-120 ಈಡೇರುವುದಿಲ್ಲ ಎಂದು ಹೇಳಿದರು. ಬೇಲೂರು ತಾಲ್ಲೂಕಿನ ಬಹುದಿನಗಳ ಬೇಡಿಕೆಯಂತೆ ಎತ್ತಿನಹೊಳೆ ಯೋಜನೆ ಮೂಲಕ ಮಾದೀಹಳ್ಳಿ ಹಾಗೂ ಹಳೆಬೀಡು ಹೋಬಳಿಗೆ ಕುಡಿಯಲು 0.129 ಟಿಎಂಸಿ ನೀರು ಹಂಚಿಕೆಯಾಗಿದೆ ಹಾಗೂ ಯಗಚಿ ಏತ ನೀರಾವರಿ ಯೋಜನೆಗೆ ತೊಡಕಾಗಿದ್ದ ಅರಣ್ಯ ಪ್ರದೇಶವನ್ನು ತಕ್ಷಣ ತೆರವುಗೊಳಿಸಿ ಇದೆ ಫೆಬ್ರವರಿ ಕೊನೆಯೊಳಗೆ ಕಾಮಗಾರಿ ಮುಕ್ತಾಯವಾಗಬೇಕು ಎಂದು ಸಂಬಂಧಿಸಿದವರಿಗೆ ತಿಳಿಸಲಾಗಿದೆ. ಹಾಗೂ ವಿಶ್ವ ವಿಖ್ಯಾತ ಚನ್ನಕೇಶವ ದೇವಾಲಯಕ್ಕೆ 900 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮ ಮಾಡಲು 3 ಕೋಟಿ ರೂ.ಗಳನ್ನು ಕೊಡಲಾಗುವುದು. ಶಾಸಕ ರುದ್ರೇಶ್‍ಗೌಡ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ವೈ.ಎನ್.ರುದ್ರೇಶ್‍ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮಾತನಾಡಿದರು. ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಮಲೆನಾಡು ಅಭಿವೃದ್ಧಿ ಮಂಡಳಿ ಮೋಹನ್, ತಾಪಂ ಅಧ್ಯಕ್ಷ ಹರೀಶ್, ಪುರಸಭೆ ಅಧ್ಯಕ್ಷೆ ಭಾರತೀ ಅರಣ್‍ಕುಮಾರ್, ಪ್ರಾಧಿಕಾರ ಅಧ್ಯಕ್ಷ ಜಮಾಲ್, ಎಪಿಎಂಸಿ ಅಧ್ಯಕ್ಷ ವಿಷ್ಣುಕುಮಾರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್‍ಪಿ ರಾಹುಲ್‍ಕುಮಾರ್, ತಹಸೀಲ್ದಾರ್ ಪರಮೇಶ್ ಸೇರಿದಂತೆ ಇನ್ನಿತರರಿದ್ದರು. ಮುಖ್ಯಮಂತ್ರಿಗಳಿಗೆ ಪುರಸಭೆಯಿಂದ ಪೌರ ಸನ್ಮಾನ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಸವಲತ್ತುಗಳನ್ನು ವಿತರಿಸಿದರು.

Facebook Comments

Sri Raghav

Admin