ಪರಿಶಿಷ್ಟ ಜಾತಿಯ 40 ಉಪಜಾತಿಯವರಿಗೆ 10 ಲಕ್ಷ ರೂ. ಸಾಲ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

H-Anjaneya

ಬೆಂಗಳೂರು,ಜ.5-ಪರಿಶಿಷ್ಟ ಜಾತಿಯ 40 ವಿವಿಧ ಉಪಜಾತಿಯವರಿಗೆ ನಂಬಿಕೆ ಆಧಾರದ ಮೇಲೆ ಇದೇ ಮೊದಲ ಬಾರಿಗೆ ನೇರ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು , ಗರಿಷ್ಠ 10 ಲಕ್ಷ ರೂ. ಸಾಲವನ್ನು ಶೇ.50ರಷ್ಟು ಸಹಾಯಧನದೊಂದಿಗೆ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಘೋಷಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಸೌಲಭ್ಯ ವಂಚಿತ ಸುಡುಗಾಡು ಸಿದ್ಧರು ಸೇರಿದಂತೆ ಇನ್ನು 40 ಉಪಜಾತಿಯವರು ತಲಾ ಒಂದೊಂದು ಜಾತಿಯಲ್ಲಿ ಒಂದು ಲಕ್ಷ ಜನರಿದ್ದಾರೆ. 10ರಿಂದ 15 ಸಾವಿರ ಕುಟುಂಬಗಳಿವೆ. ಆದರೆ ಪರಿಶಿಷ್ಟ ಜಾತಿಗೆ ಸಿಗುವ ಸೌಲಭ್ಯಗಳನ್ನು ಪಡೆಯುತ್ತಿಲ್ಲ. ಕೆಲವರಿಗೆ ಮೀಸಲಾತಿ ಇದೆ ಎಂಬುದೇ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಇವರೆಲ್ಲರ ಅಭಿವೃದ್ದಿಗೆ ಈ ಯೋಜನೆ ಜಾರಿಗೊಳಿಸುತ್ತಿದ್ದು, ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಿವೆ. ಅದರಲ್ಲಿ ಈ 40 ಉಪಜಾತಿಯವರು ಯಾವುದೇ ಸೌಲಭ್ಯವನ್ನು ಬಳಸಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುವುದು. ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ 25 ಕೋಟಿ ರೂ.ಗಳನ್ನು ಈ ಯೋಜನೆಗೆ ಒದಗಿಸಲಾಗುತ್ತಿದೆ. 100 ಕೋಟಿ ರೂ.ವರೆಗೂ ಈ ಯೋಜನೆಗೆ ವ್ಯಯಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು. ಈ ಉಪಜಾತಿಗಳವರು ನೆಲೆಸಿರುವ ಪ್ರದೇಶದಲ್ಲಿ ಮೂಲ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಜಮೀನು ಖರೀದಿ ಮಾಡಿಕೊಡಲು ಯೋಜನೆಯಲ್ಲಿ ಅವಕಾಶವಿದೆ. ಆಯಾ ಸ್ಥಳದ ಜಮೀನಿನ ಮಾರ್ಗಸೂಚಿ ದರದ ಮೂರು ಪಟ್ಟು ಹೆಚ್ಚಿನ ಹಣ ನೀಡಿ ಭೂಮಿ ಖರೀದಿಸಿ ಫಲಾನುಭವಿಗಳಿಗೆ ನೀಡಲಾಗುವುದು. ಇದಕ್ಕೆ ಪ್ರತಿಯೊಬ್ಬರಿಗೆ ಗರಿಷ್ಠ 15 ಲಕ್ಷದವರೆಗೂ ಸೌಲಭ್ಯ ದೊರೆಯಲಿದ್ದು , ಆಯಾ ಪ್ರದೇಶದ ಭೂಮಿ ಬೆಲೆ ಆಧರಿಸಿ ಒಂದರಿಂದ 5 ಎಕರೆವರೆಗೂ ಭೂಮಿ ಸಿಗಲಿದೆ ಎಂದು ತಿಳಿಸಿದರು.

ಕೆಲವೆಡೆ ಬುಡುಕಟ್ಟು ಜನಾಂಗದವರಿಗೂ ಸೌಲಭ್ಯ ಸಿಗುತ್ತಿಲ್ಲ. ಅವರಿಗೂ ಸಹ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಇದೇ ರೀತಿಯ ಸೌಲಭ್ಯ ಕಲ್ಪಿಸಲಿದ್ದೇವೆ ಎಂದ ಅವರು, ಪರಿಶಿಷ್ಟ ಜಾತಿಯವರು ಉದ್ಯಮಿಗಳಾಗಲು ಶೇ.50ರಷ್ಟು ಸಹಾಯಧನದೊಂದಿಗೆ ಶೆಡ್ ನಿರ್ಮಾಣ, ಯಂತ್ರೋಪಕರಣಗಳ ಖರೀದಿ ಜೊತೆಗೆ ಮೂಲಬಂಡವಾಳಕ್ಕೆ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಪರಿಶಿಷ್ಟ ಜಾತಿ/ವರ್ಗಗಳ ಉಪಯೋಜನೆಯಡಿ ಹಣ ಖರ್ಚು ಮಾಡದೆ ಇರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಿದ್ಯಾಸಿರಿ ಯೋಜನೆಯಡಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin