ಮಹದಾಯಿ ವಿಚಾರದಲ್ಲಿ ಸೂಕ್ತ ಉತ್ತರ ನೀಡದ ಪರಿಕ್ಕರ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

CM

ಚಿಕ್ಕಮಗಳೂರು,ಜ.5- ಮಹದಾಯಿ ನೀರು ಹಂಚಿಕೆ ಸಂಬಂಧ ಪರಿಕ್ಕರ್ ಅವರು ಸುತ್ತಿ ಬಳಸಿ ಮಾತನಾಡುತ್ತಿದ್ದಾರೆಯೇ ವಿನಃ ಯಾವುದೇ ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೂಡಿಗೆರೆ ಹೊಯ್ಸಳ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಅವರಿಗೆ ಪತ್ರ ಬರೆದು ಬಹಳಷ್ಟು ದಿನವಾಯಿತು. ಹಾಗಿದ್ದರೂ ಏನೂ ಉತ್ತರ ಕೊಟ್ಟಿಲ್ಲ. ಈಗ ತಮ್ಮ ರಾಜ್ಯದ ಹಿತವನ್ನು ಕಾಪಾಡಿಕೊಂಡು ನ್ಯಾಯಾಧೀಕರಣದಲ್ಲಿ ಸೂಚನೆಯನ್ನು ಪಾಲಿಸಿ ನೀರು ಬಿಡಲಿದ್ದೇವೆ ಎನ್ನುತ್ತಿದ್ದಾರೆ. ಆದರೆ ಇದು ನೇರವಾಗಿ ಹೇಳುವ ಬದಲಿಗೆ ಸುತ್ತಿ ಬಳಸಿ ಆಡುತ್ತಿರುವ ನಾಟಕ ಎಂದು ಆಕ್ರೋಶ ವ್ಯಕ್ತಪಡಿಸಿದರು.   ಮಂಗಳೂರಿನ ಕರಾವಳಿಯಲ್ಲಿ ನಡೆಯುತ್ತಿರುವ ಗಲಾಟೆ ಸಂಬಂಧ ಬಿಜೆಪಿಯವರೊಂದಿಗೆ ಮಾತುಕತೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿದ್ದೆ ಮಾಡುವವರನ್ನು ಎಬ್ಬಿಸಬಹುದು. ನಿದ್ದೆ ಮಾಡುವಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಇವರಿಗೆ ಅಲ್ಲಿ ಹೋಗಿ ಗಲಾಟೆ ಮಾಡು ಎಂದವರು ಯಾರು? ಯಾವುದೇ ಕುಕೃತ್ಯಗಳು ನಡೆದಾಗ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕ್ರಮ ವಹಿಸುತ್ತೇವೆ. ಅದೇ ರೀತಿ ಸಂತ್ರಸ್ತ ಬಗ್ಗೆ ಕನಿಕರವೂ ಇದೆ. ಇವರಿಗೆ ಗಲಾಟೆ ಮಾಡಲು ಹೇಳಿದವರು ಯಾರು ಎಂದು ಪ್ರಶ್ನಿಸಿದರು.
ನಾವು ಹಿಂದೂಗಳೇ ಆದರೆ ಈ ರೀತಿಯ ವರ್ತನೆ ಸರಿಯಲ್ಲ ಎಂದು ಗುಡುಗಿದರು.

ಕೋಮುವಾದಿ ಸಂಘಟನೆಗಳು ಯಾವುದೇ ಧರ್ಮಕ್ಕೆ ಸೇರಿರಲಿ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೋಮು ಭಾವನೆಗಳನ್ನು ಕೆರಳಿಸುವುದನ್ನು ನಾವು ಸಹಿಸುವುದಿಲ್ಲ. ಎಲ್ಲಾ ರೀತಿಯಲೂ ಪರಿಶೀಲನೆ ನಡೆಸಿ ಅದರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ. ಅಂತಹ ಸಂಘಟನೆಗಳ ನಿಷೇಧಕ್ಕೆ ಶಿಫಾರಸು ಸಹ ಒಂದು ಕ್ರಮವೇ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ರಾಜ್ಯಾದ್ಯಂತ ನಡೆಸುತ್ತಿರುವ ಶಂಕುಸ್ಥಾಪನೆಗೆ ಕಾರ್ಯಕ್ರಮಗಳೆಂದರೆ ಈಗಾಗಲೇ ಆ ಕಾಮಗಾರಿಗಳಿ ಸರ್ಕಾರದ ಮಟ್ಟದಲ್ಲಿ ಅನುಮತಿ ದೊರೆತು, ಹಣಕಾಸು ಇಲಾಖೆಯಿಂದಲೂ ಗ್ರೀನ್ ಸಿಗ್ನಲ್ ಪಡೆದು ಟೆಂಡರ್ ಪ್ರಕ್ರಿಯೆ ಪೂರೈಸಿ ಕೆಲಸ ಆರಂಭಿಸುವ ಹಂತದಲ್ಲಿ ಮಾಡುವ ಪೂಜೆ, ಶಂಕುಸ್ಥಾಪನೆ ಅಂದರೆ ಕಾಮಗಾರಿಗಳ ಆರಂಭ ಎಂದು ವ್ಯಾಖ್ಯಾನಿಸಿದರು.

ರಾಜ್ಯ ಸರ್ಕಾರ ಕೇಂದ್ರದಿಂದ ದೊರೆಯುವ ಗೋಧಿಯನ್ನು ಬಳಸಿಕೊಳ್ಳುತ್ತಿಲ್ಲ ಎಂದು ಬಿಎಸ್‍ವೈ ಆರೋಪ ಮಾಡಿದ್ದಾರೆ. ರಾಜ್ಯಕ್ಕೆ ಗೋಧಿ ಪೂರೈಕೆಯನ್ನು ನಿಲ್ಲಿಸುತ್ತೇವೆ ಎಂದು ಹೇಳಿರುವ ವಿಚಾರಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಇವರು ಹೇಳಿದ ಮಾತ್ರಕ್ಕೆ ಪೂರೈಕೆ ನಿಲ್ಲಿಸಲು ಸಾಧ್ಯವಿಲ್ಲ. ಆಹಾರ ಕಾಯ್ದೆ ಅನ್ವಯ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಅಧಿಕಾರಕ್ಕೆ ಬಂದರೆ ದಕ್ಷ ಆಡಳಿತ ನೀಡುತ್ತೇವೆ ಎಂದು ರಕ್ತದಲ್ಲಿ ಬರೆದು ಕೊಡುತ್ತೀನಿ ಎಂದು ನೀಡುತ್ತಿರುವ ಭರವಸೆವನ್ನು ನಂಬಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಚಂದ್ರಲೋಕವನ್ನೇ ತಂದಿಡುತ್ತೇನೆ ಎಂದರೆ ಅದು ಸಾಧ್ಯವೇ? ಅಧಿಕಾರದಲ್ಲಿದ್ದಾಗ ಏನೂ ಕೆಲಸ ಮಾಡದವರು, ಜೈಲಿಗೆ ಹೋಗಿದ್ದವರು, ಅವರ ಅವಧಿಯಲ್ಲೆ ಏಳೆಂಟು ಜನರು ಜೈಲಿಗೆ ಹೋಗಿದ್ದರು, ಬ್ಲೂಫಿಲಂ ನೋಡಿದ್ದರು. ಇಂತಹವುದನ್ನೆಲ್ಲ ಜನರು ಮರೆಯುತ್ತಾರೆಯೇ? ಈಗ ಪರಿವರ್ತನಾ ರ್ಯಾಲಿಯಲ್ಲಿ ಭರವಸೆಗಳನ್ನೇ ನೀಡುತ್ತಾ ಹೋದರೆ ಅಧಿಕಾರ ಸಿಕ್ಕಿದಾಗ ಏನೂ ಮಾಡಿದರು ಎಂದು ಜನರಿಗೆ ತಿಳಿದಿಲ್ಲವೇ ಎಂದು ತಿರುಗೇಟು ನೀಡಿದರು. ನಮ್ಮ ನಿರೀಕ್ಷೆಗೂ ಮೀರಿ ನಮ್ಮ ಸರ್ಕಾರವನ್ನು ಜನ ಬೆಂಬಲಿಸಿದ್ದಾರೆ. ನೀಡಿದ ಭರವಸೆಗಳಂತೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ನುಡಿದಂತೆ ನಡೆದಿದ್ದೇವೆ. ಅದೇ ನಮಗೆ ಶ್ರೀರಕ್ಷೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Facebook Comments

Sri Raghav

Admin