ಸೂಚಿಸಿರುವ ಕೆಲಸ ಸಮರ್ಪಕವಾಗಿ ಮಾಡದಿದ್ದರೆ ಟಿಕೆಟ್ ಇಲ್ಲ : ಬಿಜೆಪಿ ಆಕಾಂಕ್ಷಿಗಳಲ್ಲಿ ‘ಷಾ’ ಟೆನ್ಷನ್

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--BJP--01

ಬೆಂಗಳೂರು,ಜ.5-ಸೂಚಿಸಿರುವ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸದಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿರುವ ಎಚ್ಚರಿಕೆ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ. ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕಾದರೆ ನೀಡಿರುವ ಜವಾಬ್ದಾರಿಯನ್ನು ಶ್ರದ್ದೆಯಿಂದ ನಿರ್ವಹಿಸಲೇಬೇಕಿದೆ. ಇಲ್ಲದಿದ್ದರೆ ಯಾರೇ ಆಗಲಿ ಅಂಥವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಖಡಾತುಂಡವಾಗಿ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಅವರು, ಹಾಲಿ ಶಾಸಕರು ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಕ್ಷೇತ್ರದ ಹೊಣೆಗಾರಿಕೆಯನ್ನು ನೋಡಿಕೊಳ್ಳಬೇಕು. ಇದೇ ರೀತಿ ಸಂಸದರು ಕೂಡ ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕೆಂದು ಹೇಳಿದ್ದರು. ಆದರೆ ಶಾಸಕರು ಮತ್ತು ಸಂಸದರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಕೆಂಡಮಂಡಲರಾಗಿರುವ ಅಮಿತ್ ಶಾ ಕೆಲವರಿಗೆ ಮಾತುಗಳಲ್ಲೇ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಫೆಬ್ರವರಿ ತಿಂಗಳ ಅಂತ್ಯದೊಳಗೆ ಬೂತ್ ಮಟ್ಟದಿಂದ ಪಕ್ಷ ಸಂಘಟನೆ, ಪ್ರತಿದಿನ ಕಾರ್ಯಕರ್ತರ ಜೊತೆ ಸಮಾಲೋಚನೆ ಸೇರಿದಂತೆ ನಾನಾ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸೂಚಿಸಿದ್ದಾರೆ.   ನೀವು ಕ್ಷೇತ್ರದಲ್ಲಿ ಎಷ್ಟರಮಟ್ಟಿಗೆ ಕೆಲಸ ನಿರ್ವಹಿಸುತ್ತಿದ್ದೀರಿ ಎಂಬುದನ್ನು ನಿಮಗೆ ತಿಳಿಯದೆ ಗುಪ್ತಚರ ತಂಡ ನಿಗಾವಹಿಸುತ್ತದೆ. ಅವರು ನೀಡುವ ವರದಿ ಆಧಾರದ ಮೇಲೆ ಟಿಕೆಟ್ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜ್ಯಕ್ಕೆ ಬಂದ ಗೂಢಚಾರ್ಯರ ತಂಡ:

ಈಗಾಗಲೇ ದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಉತ್ತರಖಂಡ್ ಮತ್ತಿತರ ಕಡೆ ಕೆಲಸ ನಿರ್ವಹಿಸಿರುವ ಬಿಜೆಪಿಯ ನಿಷ್ಠಾವಂತ ಪಡೆಯೊಂದು ರಾಜಧಾನಿ ಬೆಂಗಳೂರು ಸೇರಿದಂತೆ ನಾನಾ ಕಡೆ ಸದ್ದಿಲ್ಲದೆ ಪ್ರಮುಖರ ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದೆ. ಆಕಾಂಕ್ಷಿಗಳು ಯಾವ ಯಾವ ರೀತಿ ಕಾರ್ಯಕರ್ತರ ಜೊತೆ ಬೆರೆಯುತ್ತಿದ್ದಾರೆ, ನಿತ್ಯದ ಚಟುವಟಿಕೆಗಳು, ವಾರದಲ್ಲಿ ಎಷ್ಟು ಬಾರಿ ಸಭೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ, ಸಂಘಟನೆ, ಪ್ರತಿಭಟನೆ ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಬಿಜೆಪಿ ಗೆದ್ದಿರುವ ರಾಜ್ಯದಲ್ಲಿ ಈ ಮಾದರಿಯನ್ನು ಅನುಸರಿಸಿದ್ದರಿಂದಲೇ ಆಕಾಂಕ್ಷಿಗಳು ಹುರುಪಿನಿಂದ ಕೆಲಸ ಮಾಡಲು ಸಾಧ್ಯವಾಯಿತು. ಈಗ ಕರ್ನಾಟಕದಲ್ಲೂ ಇದೇ ತಂತ್ರವನ್ನು ಅನುಸರಿಸುತ್ತಿರುವ ಅಮಿತ್ ಶಾ ಆಕಾಂಕ್ಷಿಗಳಿಗೆ ಚಳಿ ಬಿಡಿಸಲು ಮುಂದಾಗಿದ್ದಾರೆ. ಅಮಿತ್ ಶಾ ಕೊಟ್ಟಿರುವ ಹೊಡೆತಕ್ಕೆ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳು ತರಗುಡುವಂತಾಗಿದೆ.

Facebook Comments

Sri Raghav

Admin