2019ರ ಚುನಾವಣೆಯತ್ತ ಮೋದಿ ಚಿತ್ತ : ಸಾಧನೆ ವರದಿ ನೀಡುವಂತೆ ಬಿಜೆಪಿ ಸಂಸದರಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ನವದೆಹಲಿ, ಜ.5-ಮುಂಬರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈಗಿನಿಂದಲೇ ಸಿದ್ಧತೆಗಳಿಗೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸಾಧನೆಗಳು ಮತ್ತು ಜನರಿಗಾಗಿ ಮಾಡಿರುವ ಕಾರ್ಯಗಳ ಕುರಿತು ಸವಿವರ ವರದಿ ಒದಗಿಸುವಂತೆ ಕೇಂದ್ರ ಸಚಿವರು ಮತ್ತು ಬಿಜೆಪಿಯ ಎಲ್ಲ ಸಂಸದರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈವರೆಗೆ ನಿಮ್ಮ ಅವಧಿಯಲ್ಲಿ ಮಾಡಿರುವ ಸಾಧನೆ ಏನು ಎಂಬುದನ್ನು ಸಚಿವರು ಮತ್ತು ಸಂಸದರಿಂದ ಸ್ಪಷ್ಟವಾಗಿ ತಿಳಿಯಲು ಮೋದಿ ಬಯಸಿದ್ದಾರೆ.

ತಮ್ಮ ಮಂತ್ರಿ ಮಂಡಲದಲ್ಲಿರುವ ಸಚಿವರು ಈವರೆಗೆ ತಮ್ಮ ಇಲಾಖೆಗಳಲ್ಲಿ ಮಾಡಿರುವ ಪ್ರಮುಖ ಸಾಧನೆಗಳು ಹಾಗೂ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ವರದಿ ನೀಡುವಂತೆ ಮೋದಿ ನಿರ್ದೇಶನ ನೀಡಿದ್ದಾರೆ. ಜೊತೆಗೆ ಕರ್ನಾಟಕ ಸೇರಿದಂತೆ ದೇಶದ ರಾಜ್ಯಗಳಲ್ಲಿರುವ ಸಂಸದರು ಕಳೆದ ಮೂರುವರೆ ವರ್ಷಗಳಲ್ಲಿ ಕಾರ್ಯಗತಗೊಳಿಸಿರುವ ಯೋಜನೆಗಳು ಮತ್ತು ಜನರಿಗಾಗಿ ಕೈಗೊಂಡಿರುವ ಪ್ರಗತಿಪರ ಸೇವೆಗಳ ವಿವರಗಳು ಇರುವ ವರದಿಯನ್ನು ತಮಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮತ್ತು ಪ್ರಮುಖ ಕಾರ್ಯಕ್ರಮಗಳು ಮತ್ತು ಯೋಜನೆ ಅನುಷ್ಠಾನ ಹಾಗೂ ಅವುಗಳಿಂದ ಜನರಿಗೆ ಆಗಿರುವ ಪ್ರಯೋಜನಗಳು ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಫೀಡ್‍ಬ್ಯಾಕನ್ನು ಆಗ್ಗಿಂದಾಗ್ಗೆ ಪೋಸ್ಟ್ ಮಾಡುವಂತೆ ಸಚಿವರಿಗೆ ಪ್ರಧಾನಿ ತಿಳಿಸಿದ್ದಾರೆ. ಈವರೆಗೆ ಕನಿಷ್ಠ 250 ಬಿಜೆಪಿ ಸಂಸದರು ತಮ್ಮ ಸ್ಮಾರ್ಟ್‍ಫೋನ್‍ಗಳಲ್ಲಿ ನಮೋ ಆ್ಯಪ್‍ನನ್ನು ಮೇಲ್ದರ್ಜೆಗೇರಿಸಿಕೊಂಡಿದ್ದಾರೆ ಹಾಗೂ ಇತ್ತೀಚೆಗೆ ಆ್ಯಪ್‍ನಲ್ಲಿನ ಸಮೀಕ್ಷೆ ಮತ್ತು ಪ್ರಶ್ನೆಗಳಿಗೆ ಅವರು ಶೀಘ್ರದಲ್ಲೇ ಪ್ರತ್ಯುತ್ತರ ನೀಡಬೇಕಿದೆ.

ಸಚಿವರು ಮತ್ತು ಸಂಸದರಿಂದ ಈ ಎಲ್ಲ ಸಂಗತಿಗಳ ಬಗ್ಗೆ ಮಾಹಿತಿ ಪಡೆಯಲು ಬಿಜೆಪಿ, ಮಾಹಿತಿ ತಂತ್ರಜ್ಞಾನ ಕೋಶಗಳಿಂದ ನಾಲ್ವರು ವಿಶೇಷ ಸದಸ್ಯರ ತಂಡವನ್ನು ರಚಿಸಲಾಗಿದ್ದು, ಸಚಿವರು ಮತ್ತು ಸಂಸದರು ತಮ್ಮ ಮೊಬೈಲ್ ಫೋನ್‍ಗಳು ಮತ್ತು ಆ್ಯಪ್ ಮೂಲಕ ಪ್ರಗತಿ ವಿವರಗಳನ್ನು ಅಪ್‍ಡೇಟ್ ಮಾಡಲು ನೆರವಾಗುತ್ತಿದ್ದಾರೆ.
ಪ್ರಧಾನಿ ಮೋದಿ ಅವರಿಗೆ 2018 ಮತ್ತು 2019 ಅತ್ಯಂತ ಮಹತ್ವದ ವರ್ಷ. ಏಕೆಂದರೆ 2018ರಂದು ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಾದ ನಂತರ 2019ರಲ್ಲಿ ಲೋಕಸಭೆ ಚುನಾವಣೆಗೆ ವೇದಿಕೆ ಸಜ್ಜಾಗಲಿದೆ. ಹೀಗಾಗಿ ಮೋದಿಗೆ ಇದು ಅಗ್ನಿಪರೀಕ್ಷೆಯಾಗಿದ್ದು, ಈ ಎರಡೂ ಚುನಾವಣೆಗಳಲ್ಲಿ ಶತಾಯಗತಾಯ ಪ್ರಾಬಲ್ಯ ಮುಂದುವರಿಸಿ ದೇಶದ ಬಹುತೇಕ ಎಲ್ಲ ರಾಜ್ಯಗಳು ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತ ಸ್ಥಾಪಿಸುವುದು ಅವರ ಹೆಗ್ಗುರಿಯಾಗಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಚುನಾವಣಾ ಪೂರ್ವ ಸಿದ್ಧತೆಗಳಿಗೆ ದೂರದೃಷ್ಟಿಯ ಮೋದಿ ಚಾಲನೆ ನೀಡಿದ್ದಾರೆ.

Facebook Comments

Sri Raghav

Admin