ಒಂದೇ ದಿನ ರಾಜ್ಯಕ್ಕಾಗಮಿಸುತ್ತಿದ್ದಾರೆ ಮೋದಿ-ರಾಹುಲ್, ರಂಗೇರಲಿದೆ ಚುನಾವಣಾ ಕುರುಕ್ಷೇತ್ರ

ಈ ಸುದ್ದಿಯನ್ನು ಶೇರ್ ಮಾಡಿ

Modi-vs-Rahul--02

ಬೆಂಗಳೂರು, ಜ.6-ಜನವರಿ ಮಾಸಾಂತ್ಯ ರಾಜಕೀಯ ಜುಗಲ್‍ಬಂಧಿಗೆ ಕಾರಣವಾಗಲಿದೆ. ಚುನಾವಣಾ ಹೊಸ್ತಿಲಿನಲ್ಲಿರುವ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಒಂದೇ ದಿನ ಆಗಮಿಸಲಿದ್ದು, ರಾಜಕೀಯ ಕಣ ರಂಗೇರಲಿದೆ. ಜನವರಿ 28 ರಿಂದ 3 ದಿನಗಳ ಪ್ರವಾಸಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದರೆ, ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಜ.28 ರಂದೇ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿರುವುದು ರಾಜಕೀಯ ಕುತೂಹಲ ಮೂಡಿಸಿದೆ. ಇಷ್ಟೇ ಅಲ್ಲ, ಭದ್ರತಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಪ್ರಧಾನಿಯವರ ಶಿಷ್ಟಾಚಾರ, ಭದ್ರತೆ ಒದಗಿಸುವುದು, ಬಿಜೆಪಿ ಪರಿವರ್ತನಾ ರ್ಯಾಲಿ ಸಮಾರೋಪ ಸಮಾರಂಭಕ್ಕೆ ಭದ್ರತೆ ನೀಡುವುದಲ್ಲದೆ, ಅಲ್ಲದೆ, ಅಂದೇ ರಾಜ್ಯಕ್ಕೆ ಆಗಮಿಸುವ ರಾಹುಲ್‍ಗಾಂಧಿ ಅವರಿಗೂ ಕೂಡ ಭದ್ರತೆ ಒದಗಿಸಬೇಕಾಗಿದೆ. ಅದಿಷ್ಟಲ್ಲದೆ, ರಾಜಕೀಯ ಹಣಾಹಣಿಗೂ ಈ ಇಬ್ಬರ ಭೇಟಿ ವೇದಿಕೆಯಾಗಲಿದೆ. ರಾಹುಲ್‍ಗಾಂಧಿಯವರು ಮೂರು ದಿನಗಳ ಕಾರ್ಯಕ್ರಮ ಸಂಬಂಧ ಬಳ್ಳಾರಿಯಲ್ಲಿ ನಡೆಯಲಿರುವ ಪರಿಶಿಷ್ಟ ವರ್ಗದವರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಲ್ಲದೆ, ಚಿಕ್ಕಮಗಳೂರಿನಲ್ಲಿ ಇಂದಿರಾ ಶತಮಾನೋತ್ಸವ ಸಂಬಂಧ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಂತರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ವಾಸ್ತವ್ಯ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಎಲ್ಲಾ ಪ್ರಮುಖರನ್ನು ಭೇಟಿ ಮಾಡಲಿರುವ ಅವರು, ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೋಮುವಾದಿ ವಿರೋಧಿ, ಅಭಿವೃದ್ಧಿ ರಾಜಕಾರಣದಡಿಯಲ್ಲಿ ಚುನಾವಣೆ ಎದುರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಗುಜರಾತ್‍ನಲ್ಲಿ ರಾಹುಲ್‍ಗಾಂಧಿಯವರು ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಅಲ್ಲಿ ಕಾಂಗ್ರೆಸ್‍ನ ನಾಯಕತ್ವ ಅಷ್ಟು ಪ್ರಬಲವಾಗಿಲ್ಲದಿದ್ದರೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಲು ಸಾಧ್ಯವಾಗಿತ್ತು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನಾಯಕತ್ವ ಪ್ರಬಲವಾಗಿದೆ. ಅಭಿವೃದ್ಧಿ ಕೆಲಸಗಳು ಸಾಕಷ್ಟಾಗಿವೆ. ಜೊತೆಗೆ ರಾಹುಲ್‍ಗಾಂಧಿಯವರು ಸೂಕ್ತ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ರಣನೀತಿಗಳನ್ನು ಸರಿಯಾಗಿ ರೂಪಿಸಿದರೆ ಗೆಲುವು ಸುಲಭವಾಗಲಿದೆ.
ಪ್ರಧಾನಿ ಮೋದಿಯವರು 28 ರಂದು ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಆಗಮಿಸಲಿದ್ದಾರೆ. ಹೇಗಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರಕ್ಕೇರಬೇಕೆಂಬ ಕಸರತ್ತನ್ನು ಬಿಜೆಪಿ ಮಾಡುತ್ತಿದೆ. ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಪ್ರಾರಂಭದ ಸಭೆಯಲ್ಲಿ ಹೆಚ್ಚಿನ ಜನರು ಪಾಲ್ಗೊಂಡಿರಲಿಲ್ಲ. ಪ್ರಧಾನಿ ಮೋದಿಯವರು ಭಾಗವಹಿಸುವ ಸಮಾರೋಪ ಸಮಾರಂಭದ ಸಭೆಗೆ ಅತಿ ಹೆಚ್ಚು ಜನರನ್ನು ಕರೆತಂದು ತಮ್ಮ ಶಕ್ತಿ ಪ್ರದರ್ಶಿಸಲು ಬಿಜೆಪಿ ಮುಂದಾಗಿದೆ. ಒಟ್ಟಾರೆ ಕಾಂಗ್ರೆಸ್-ಬಿಜೆಪಿ ಚುನಾವಣಾ ರಣಕಣ ರಂಗೇರತೊಡಗಿದೆ.

Facebook Comments

Sri Raghav

Admin