ಭಂಡಾರಿ ಬ್ರದರ್ಸ್ ‘ರಾಜರಥ’ಕ್ಕೆ ಜೊತೆಯಾದ ಪುನೀತ್, ರಾಣಾ..!

ಈ ಸುದ್ದಿಯನ್ನು ಶೇರ್ ಮಾಡಿ

rajaratha
ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವಂಥ ರಾಜರಥ ಚಿತ್ರದ ಟೀಸರ್ ಇತ್ತೀಚೆಗೆ ಲಾಂಚ್ ಆಗಿದೆ. ರಂಗಿತರಂಗ ಚಿತ್ರದ ಹಿಟ್ ಜೋಡಿಯಾದ ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಲು ಈ ಚಿತ್ರದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಈ ಹಿಂದಿನಿಂದಲೂ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮ ಚಿತ್ರದ ಒಂದು ಭಾಗವಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಹೌದು, ಪುನೀತ್ ರಾಜ್‍ಕುಮಾರ್ ಚಿತ್ರದ ಒಂದು ಭಾಗವಾಗಿರುವುದು ನಿಜವೇ, ಆದರೆ ಅವರು ಚಿತ್ರದಲ್ಲಿ ಅಭಿನಯಿಸಿಲ್ಲ. ಬದಲಾಗಿ ರಾಜರಥ ಎನ್ನುವ ಶೀರ್ಷಿಕೆಯ ಪಾತ್ರಕ್ಕೆ ದನಿಯಾಗಿದ್ದಾರೆ. ಈಗ ನಿಮಗೆ ಅರ್ಥವಾಗಿರಬಹುದು, ರಾಜರಥ ಒಂದು ಬಸ್ಸಿನ ಕಥೆಯಾಗಿದೆ. ಆ ಬಸ್ಸು ಚಿತ್ರದಲ್ಲಿ ಮಾತನಾಡುತ್ತದೆ. ಆ ದನಿಯನ್ನು ಪುನೀತ್ ರಾಜ್‍ಕುಮಾರ್ ಕೈಲಿ ಹೇಳಿಸಲಾಗಿದೆ.

ಈ ಟೀಸರನ್ನು ಪುನೀತ್ ರಾಜ್‍ಕುಮಾರ್ ಅವರೇ ಅನಾವರಣಗೊಳಿಸಿದರು. ಅನೂಪ್ ಭಂಡಾರಿ ಅವರ ನಿರ್ದೇಶನದ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ಸಿದ್ದವಾಗಿದೆ. ತೆಲುಗು ಭಾಷೆಯ ಚಿತ್ರಕ್ಕೆ ರಾಜರಥಂ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಭಾಟಿ ಅವರು ರಾಜರಥ ಬಸ್ಸಿನ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.  ರಂಗಿತರಂಗ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಅವಂತಿಕಾ ಶೆಟ್ಟಿ ಈ ಚಿತ್ರ ದಲ್ಲಿ ನಾಯಕ ನಿರೂಪ್ ಭಂಡಾರಿಗೆ ಜೊತೆಯಾಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಕಥಾನಕವನ್ನು ಹೊಂದಿದ ಚಲನಚಿತ್ರವಾಗಿದ್ದು, ಸದ್ಯದಲ್ಲೇ ಚಿತ್ರದ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನಡೆ ಯಲಿದೆ. ಜಾಲಿಹಿಟ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ಅಜಯ್‍ರೆಡ್ಡಿ, ಅಂಜು ವಲ್ಲಭನೇನಿ, ಮತ್ತು ಸತೀಶ್ ಶಾಸ್ತ್ರಿ ನಿರ್ಮಾಣ ಮಾಡಿದ್ದಾರೆ.

Facebook Comments

Sri Raghav

Admin