ಸಮೀಕ್ಷೆಯಿಂದ ಬಯಲಾಯ್ತು ಕರ್ನಾಟಕದ ಚುನಾವಣಾ ಭವಿಷ್ಯ, ಅಧಿಕಾರಕ್ಕೇರೋರು ಯಾರುಗೊತ್ತೆ ..?

ಈ ಸುದ್ದಿಯನ್ನು ಶೇರ್ ಮಾಡಿ

Election--01

ಬೆಂಗಳೂರು, ಜ.6- ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕೇಂದ್ರ ಗುಪ್ತಚರ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದ್ದು, 2ನೇ ಸ್ಥಾನಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಫೈಟ್ ಇದ್ದು, ಯಾವುದೇ ಒಂದು ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆಗಳಿಲ್ಲ. ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು , ಫೆಬ್ರವರಿ ಇಲ್ಲವೇ ಮಾರ್ಚ್‍ನಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ಮೋದಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಘಟಾನುಘಟಿ ನಾಯಕರು ರಾಜ್ಯಕ್ಕೆ ಬಂದು ಮತದಾರರ ಓಲೈಕೆಗೆ ಕಸರತ್ತು ನಡೆಸಲು ತೀರ್ಮಾನಿಸಿದ್ದಾರೆ.

ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ಕಳೆದ ಒಂದು ತಿಂಗಳಿನಿಂದ ನಡೆಸಿದ ಸಮೀಕ್ಷೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಚಿತಪಟ್ಟಿದೆ. ಆದರೆ ಸರ್ಕಾರ ರಚನೆ ಮಾಡಲು ಅವಶ್ಯವಿರುವಷ್ಟು ಸ್ಥಾನಗಳು ದೊರೆಯುವುದು ಅನುಮಾನವಾಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಬಿರುಸಿನ ಪರಿವರ್ತನಾ ಯಾತ್ರೆಯ ನಡುವೆಯೂ ಬಿಜೆಪಿ 2ನೇ ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸು ವರ್ಕೌಟ್ ಆಗುತ್ತಿದ್ದು , ಜೆಡಿಎಸ್ ನಿರ್ಣಾಯಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮುಂದಿನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದನ್ನು ಸಮೀಕ್ಷೆ ದೃಢಪಡಿಸಿದೆ.

ಕಮಲಪಡೆಯ ಸಾಧನೆ ಕೇಂದ್ರ ಬಿಜೆಪಿ ನಾಯಕರನ್ನು ತಳಮಳಗೊಳ್ಳುವಂತೆ ಮಾಡಿದೆ. ಅಧಿಕಾರ ಹಿಡಿಯಲೇಬೇಕೆಂಬ ಪಣತೊಟ್ಟು ಬಿಎಸ್‍ವೈ ನಡೆಸಿರುವ ಪರಿವರ್ತನಾ ಯಾತ್ರೆಗೆ ಜನ ಬೆಂಬಲ ವ್ಯಕ್ತವಾಗಿದ್ದರೂ, ನಿರೀಕ್ಷೆಗೆ ತಕ್ಕಂತೆ ಫಲ ಕೊಟ್ಟಿಲ್ಲ. ಇದರ ನಡುವೆ ಬಿಜೆಪಿಯಲ್ಲಿನ ಆಂತರಿಕ ಅಸಮಾಧಾನ ಕೂಡ ದೊಡ್ಡ ಪೆಟ್ಟು ನೀಡುತ್ತಿದೆ. ಕಳೆದ ಬಾರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ತೊರೆದಿದ್ದರಿಂದ ಕೇಸರಿ ಪಾಳಯದ ಮತಗಳು ವಿಭಜನೆಗೊಂಡಿತ್ತು. ಬಿಜೆಪಿ ಕೇವಲ 40 ಸ್ಥಾನ ಗಳಿಸಿದ್ದರೆ, ಬಿಎಸ್‍ವೈ ಸಾರಥ್ಯದ ಕೆಜೆಪಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಶೇ.10ರಷ್ಟು ಮತಗಳನ್ನು ಗಳಿಸಿ ಎಲ್ಲರನ್ನು ಹುಬ್ಬೇರುವಂತೆ ಮಾಡಿತ್ತು.

ಬದಲಾದ ಸನ್ನಿವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಈಗ ಬಿಜೆಪಿಯಲ್ಲಿದ್ದರೂ ಕೂಡ ಇತ್ತೀಚಿನ ಬೆಳವಣಿಗೆಗಳು ಹಾಗೂ ಸಿದ್ದರಾಮಯ್ಯ ಅವರ ಚಾಣಾಕ್ಷ ತಂತ್ರ ಕಮಲ ಪಾಳಯದಲ್ಲಿ ನಡುಕ ಸೃಷ್ಟಿಸಿದೆ. ಬಿಎಸ್‍ವೈ ಅವರ ಬೆಂಬಲಕ್ಕೆ ನಿಂತಿದ್ದ ವೀರಶೈವ ಲಿಂಗಾಯಿತ ಸಮಾಜವನ್ನು ವಿಭಜಿಸುವಲ್ಲಿ ಕಾಂಗ್ರೆಸ್ ಮುಖಂಡರು ಯಶಸ್ವಿಯಾದ ಹಿನ್ನೆಲೆಯಲ್ಲಿ ಲಿಂಗಾಯಿತ ಮತಗಳು ಹರಿದುಹಂಚಿ ಹೋಗುವ ಸಾಧ್ಯತೆಗಳಿವೆ. ಲಿಂಗಾಯತ ಸಮುದಾಯದಲ್ಲೇ ಇರುವ ಹಲವು ಪಂಗಡಗಳ ಕೆಲವರು ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಕಾಂಗ್ರೆಸ್‍ನತ್ತ ಮುಖ ಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಶೋಭಾ ಕರಂದ್ಲಾಜೆಯಂತಹ ಘಟಾನುಘಟಿಗಳಿದ್ದರೂ ಒಕ್ಕಲಿಗ ಮತಗಳು ವಿಭಜನೆಗೊಳ್ಳಲಿದೆ.

ಹಿಂದುಳಿದ ವರ್ಗದವರು ಹೆಚ್ಚಿರುವ ಗದಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಮತ್ತಿತರ ಜಿಲ್ಲೆಗಳಲ್ಲಿ ವಾಲ್ಮೀಕಿ ಸಮುದಾಯದ ಶ್ರೀರಾಮುಲು ಪ್ರಭಾವ ಹೊಂದಿದ್ದರೂ, ಜೆಡಿಎಸ್ ಮತ್ತು ಕಾಂಗ್ರೆಸ್‍ನ ಕೆಲ ಪ್ರಮುಖ ನಾಯಕರು ಅಹಿಂದ ಮತ ಸೆಳೆಯುವಲ್ಲಿ ಯಶಸ್ವಿಯಾಗಲಿದ್ದಾರೆ ಎನ್ನಲಾಗಿದೆ. ಇನ್ನು ಎಸ್ಸಿ, ಎಸ್ಟಿ ವರ್ಗದ ಮತ ಸೆಳೆಯುವಂತಹ ನಾಯಕರು ಬಿಜೆಪಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ಇವರಲ್ಲಿ ಕಾಣಿಸಿಕೊಳ್ಳುವುದರಲ್ಲಿ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಮಾತ್ರ ಮುಂಚೂಣಿಯಲ್ಲಿದ್ದಾರೆ. ಈ ಹಿಂದೆ ಬಿಜೆಪಿ ಬೆಂಬಲಕ್ಕೆ ನಿಂತಿದ್ದ ಇತರೆ ಸಮುದಾಯದವರು ಈ ಬಾರಿ ಕಾಂಗ್ರೆಸ್ ಪರ ವಾಲಿರುವ ಲಕ್ಷಣಗಳು ಕಂಡುಬರುತ್ತಿವೆ. ಕೇಂದ್ರ ಸರ್ಕಾರದ ಕೆಲ ತಪ್ಪು ನಿರ್ಧಾರಗಳು ಈ ಬಾರಿ ಚುನಾವಣೆಗೆ ಹೊಡೆತ ನೀಡುವ ಸಾಧ್ಯತೆ ಇದ್ದು , ಬಿಜೆಪಿ ಮೂರಂಕಿ ಸ್ಥಾನ ದಾಟುವುದು ಅನುಮಾನವಾಗಿದೆ.

ಕೈನಲ್ಲಿ ಆಶಾಭಾವನೆ:
ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಲ ಚಾಣಾಕ್ಷ ನಡೆ ಆಡಳಿತಾರೂಢ ಪಕ್ಷಕ್ಕೆ ವರದಾನವಾಗಿ ಪರಿಣಮಿಸಿರುವುದರಿಂದ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಅಂಶ ಕೂಡ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಚುನಾವಣೆಗೆ ಕಾಲ ಸಮೀಪಿಸುತ್ತಿರುವಮತೆ ಸಿದ್ದು ಉರುಳಿಸುತ್ತಿರುವ ದಾಳ ಎದುರಾಳಿಗಳನ್ನು ಆತಂಕಕ್ಕೆ ದೂಡಿದೆ. ಹಲವಾರು ಭರಪೂರ ಯೋಜನೆಗಳನ್ನು ಪ್ರಕಟಿಸುವ ಮೂಲಕ ದಲಿತ ಸಮುದಾಯದ ಮತ ಬ್ಯಾಂಕ್‍ಗೆ ಲಗ್ಗೆ ಹಾಕುವಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದೆ.

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಲ್ಯಾಪ್‍ಟಾಪ್ ವಿತರಣೆ, ವಿದ್ಯಾರ್ಥಿವೇತನ, ವಿದ್ಯಾಸಿರಿ ಯೋಜನೆಗಳು ಮತದಾರರನ್ನು ಆಕರ್ಷಿಸುತ್ತಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಸಣ್ಣ ಹಾಗೂ ಮಧ್ಯಮ ಸಮುದಾಯಗಳಿಗೂ ಆರ್ಥಿಕ ನೆರವು ನೀಡುತ್ತಿರುವುದು ಕಾಂಗ್ರೆಸ್‍ಗೆ ವರದಾನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಬತ್ತಳಿಕೆಯಲ್ಲಿ ಇರುವ ಅಸ್ತ್ರಗಳು ಹಳೇ ಮೈಸೂರು ಭಾಗದಲ್ಲಿ ಸಾಕಷ್ಟು ಪ್ರಭಾವ ಬೀರಲಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ದೇಶಪಾಂಡೆಯಂತಹ ಘಟಾನುಘಟಿಗಳು ತಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನ ತಂದುಕೊಡುವ ಸಾಮಥ್ರ್ಯ ಹೊಂದಿರುವುದು ಕಾಂಗ್ರೆಸ್‍ಗೆ ಪ್ಲಸ್ ಪಾಯಿಂಟ್ ಆಗಿದೆ. ಚಾಣಾಕ್ಷ ರಾಜಕಾರಣಿ ಎಂದೇ ಜನಜನಿತವಾಗಿರುವ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ತಂತ್ರಗಾರಿಕೆಯನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮುಂದುವರೆಸುತಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮೂರಂಕಿ ಸ್ಥಾನದ ಗುರಿಯತ್ತ ಹೆಜ್ಜೆ ಇರಿಸಲಿದೆ.

ಹೆಚ್‍ಡಿಕೆ ಪವಾಡ:

ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ತಂತ್ರಗಾರಿಕೆಗೆ ಮೊರೆ ಹೋಗಿದೆ. ಇದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಸುತ್ತುತ್ತಿದ್ದಾರೆ.
ಈ ಬಾರಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಪರ ಒಲವು ಕಂಡುಬರುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಎಚ್‍ಡಿಕೆ ಪವಾಡ ಸೃಷ್ಟಿಸಿದರೂ ಆಶ್ಚರ್ಯ ಪಡುವಂತಿಲ್ಲ.  ನಿರೀಕ್ಷೆಯಂತೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದ್ದರೂ ಉತ್ತರ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಿಲ್ಲ ಎಂದೇ ಹೇಳಲಾಗುತ್ತಿದೆ.

ಶಾಸಕ ಎಸ್.ಎಸ್.ನಡಹಳ್ಳಿ ಜೆಡಿಎಸ್‍ಗೆ ಸೇರ್ಪಡೆಗೊಂಡಿರುವುದರಿಂದ ಉತ್ತರ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿನ ಜೆಡಿಎಸ್ ವರ್ಚಸ್ಸು ಕಂಡುಬಂದರೂ ಅತಿ ಹೆಚ್ಚು ಸ್ಥಾನಗಳ ಗೆಲ್ಲುವ ಆಸೆ ಕೈಗೂಡುವುದು ಅಸಾಧ್ಯ ಎನ್ನಲಾಗಿದೆ.  ಮುಸ್ಲಿಂ ಸಮುದಾಯ ಮತಗಳು ಕೂಡ ಸ್ವಲ್ಪ ಮಟ್ಟಿಗೆ ವಿಭಜನೆಯಾಗುವ ಸಾಧ್ಯತೆಗಳಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವುದು ಅನುಮಾನವಾಗಿದೆ. ಹೀಗಾಗಿ ಸರ್ಕಾರ ರಚನೆಯಲ್ಲಿ ಜೆಡಿಎಸ್ ಮಹತ್ತರ ಪಾತ್ರ ವಹಿಸಲಿದೆ ಎನ್ನುವುದು ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿದೆ.

Facebook Comments

Sri Raghav

Admin