ಹೆಂಡತಿಯ ಶೀಲ ಶಂಕಿಸಿ ಕತ್ತುಕೊಯ್ದು ಕೊಂದ ಗಂಡ..!

ಈ ಸುದ್ದಿಯನ್ನು ಶೇರ್ ಮಾಡಿ

Murder--02

ಬೆಂಗಳೂರು, ಜ.6- ಶೀಲ ಶಂಕಿಸಿ ತಡರಾತ್ರಿ ಪತ್ನಿಯೊಂದಿಗೆ ಜಗಳವಾಡಿದ ಪತಿ ಆಕೆಯ ಕತ್ತುಕೊಯ್ದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಬಂಗಾರಪೇಟೆ ತಾಲೂಕಿನ ಗೌನಪಲ್ಲಿ ಗ್ರಾಮದ ನಿವಾಸಿ ಸಂಧ್ಯಾ (27) ಕೊಲೆಯಾದ ನತದೃಷ್ಟೆ.
ಐದು ವರ್ಷದ ಹಿಂದೆ ತಿರುಪತಿ ಸಮೀಪದ ಪಾಕಾಲ ಗ್ರಾಮದ ನಿವಾಸಿ ವಂಶಿ (30) ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.  ಇವರಿಬ್ಬರು ವಿದ್ಯಾವಂತರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ ಇವರು ಮೂರು ತಿಂಗಳ ಹಿಂದೆಯಷ್ಟೆ ಬಂಗಾರಪೇಟೆಗೆ ಬಂದು ಅಮರಾವತಿ ಬಡಾವಣೆಯ 2ನೆ ಮುಖ್ಯರಸ್ತೆಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು.  ಇವರಿಬ್ಬರು ಕಳೆದ ಒಂದು ತಿಂಗಳಿನಿಂದ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ವಂಶಿ ಕೌಟುಂಬಿಕ ವಿಚಾರವಾಗಿ ಹಾಗೂ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ವಿನಾಕಾರಣ ಜಗಳವಾಡುತ್ತಿದ್ದನು. ರಾತ್ರಿಯೂ ದಂಪತಿ ನಡುವೆ ಜಗಳವಾಗಿದೆ. ತಡರಾತ್ರಿ ವಂಶಿ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿ ಬೈಕ್‍ನಲ್ಲಿ ಪರಾರಿಯಾಗಿದ್ದಾನೆ.  ಇಂದು ಮುಂಜಾನೆ ಇವರ ಮನೆಯ ಬಾಗಿಲು ತೆರೆದಿರುವುದು ಹಾಗೂ ಯಾರೂ ಹೊರಬರದಿರುವುದನ್ನು ಗಮನಿಸಿ ನೆರೆಮನೆಯವರು ಹೋಗಿ ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಬಂಗಾರಪೇಟೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್‍ಪಿ ಲೋಕೇಶ್‍ಕುಮಾರ್, ಡಿವೈಎಸ್‍ಪಿ ಶ್ರೀನಿವಾಸಮೂರ್ತಿ, ಸರ್ಕಲ್ ಇನ್ಸ್‍ಪೆಕ್ಟರ್ ದಿನೇಶ್ ಪಟೇಲ್, ಎಸ್‍ಐ ರವಿಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪರಾರಿಯಾಗಿರುವ ಆರೋಪಿ ವಂಶಿಗಾಗಿ ತನಿಖೆ ಕೈಗೊಂಡಿದ್ದಾರೆ. ಈ ಹಿಂದೆಯೂ ಕೂಡ ವಂಶಿ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದನೆಂದು ಯುವತಿಯ ಮನೆಯವರು ಕೆಜಿಎಫ್ ಅಂಡರ್‍ಸನ್ ಠಾಣೆಯಲ್ಲಿ ದೂರು ನೀಡಿದ್ದರು. ಆ ಸಂದರ್ಭದಲ್ಲಿ ಠಾಣೆಯಲ್ಲೇ ಎರಡೂ ಕಡೆಯವರನ್ನು ಕಡೆಸಿ ರಾಜಿ-ಪಂಚಾಯ್ತಿ ಮಾಡಿ ಕಳುಹಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ.

Facebook Comments

Sri Raghav

Admin