ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಪವರ್‍ಲಿಫ್ಟರ್‍ಗಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Pwer-Lifters-02

ನವದೆಹಲಿ, ಜ.7-ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಪವರ್‍ಲಿಫ್ಟಿಂಗ್ ಕ್ರೀಡಾಪಟುಗಳು ಮೃತಪಟ್ಟು, ವಿಶ್ವ ಚಾಂಪಿಯನ್ ಸೇರಿದಂತೆ ಇನ್ನಿಬ್ಬರು ತೀವ್ರ ಗಾಯಗೊಂಡಿರುವ ಘಟನೆ ರಾಜಧಾನಿ ದೆಹಲಿಯ ಅಲಿಪುರ್ ಪ್ರದೇಶದ ಸಿಂಘು ಗಡಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ಅಪಘಾತದಲ್ಲಿ ವಿಶ್ವ ಚಾಂಪಿಯನ್ ಸಾಕ್ಷಂ ಯಾದವ್ ಮತ್ತು ಅವರ ಸಹೋದ್ಯೋಗಿ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹರಿಯಾಣದ ಪಾಣಿಪಟ್‍ನಲ್ಲಿ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಈ ಪ್ರತಿಭಾವಂತ ಪಟುಗಳು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬರುತ್ತಿದ್ದಾಗ ಇಂದು 4ರ ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿತು. ಮತ್ತೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂಬಕ್ಕೆ ಅಪ್ಪಳಿಸಿ ಹಲವು ಬಾರಿ ಪಲ್ಟಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಮೃತರಾದ ಪವರ್ ಲಿಫ್ಟರ್‍ಗಳನ್ನು ಹರೀಶ್, ಟಿಂಕು, ಮತ್ತು ಸೂರಜ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಪಟುವಿನ ಗುರುತು ಪತ್ತೆಯಾಗಿಲ್ಲ. ಗಾಯಗೊಂಡ ಯಾದವ್ ಮತ್ತು ಅವರ ಸ್ನೇಹಿತ ಬಾಲಿ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.

ಸ್ಥಳೀಯರ ನೆರವಿನಿಂದ ಪೊಲೀಸರು ಈ ಆರು ಕ್ರೀಡಾಪಟುಗಳನ್ನು ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರೊಳಗೆ ನಾಲ್ವರು ಕೊನೆಯುಸಿರೆಳೆದಿದ್ದರು. ತೀವ್ರ ಗಾಯಗೊಂಡ ಇಬ್ಬರನ್ನು ದೆಹಲಿಯ ಶಾಲಿಮಾರ್ ಬಾಗ್‍ನ ಮಾಕ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಮಂಜು ಮುಸುಕಿದ ವಾತಾವರಣ ಮತ್ತು ನಿರ್ಲಕ್ಷ್ಯ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin