ಊಟಿಯಲ್ಲಿ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನವನ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

Ooty--03

ಬೆಂಗಳೂರು, ಜ.8-ಪ್ರಖ್ಯಾತ ಪ್ರವಾಸಿ ತಾಣವಾದ ಊಟಿಯ ಫರ್ನ್ ಹಿಲ್‍ನಲ್ಲಿ ಕರ್ನಾಟಕ ತೋಟಗಾರಿಕಾ ಇಲಾಖೆ ವತಿಯಿಂದ ನಿರ್ಮಿಸಿರುವ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನವನ ಇಂದು ವಿಧ್ಯುಕ್ತವಾಗಿ ಲೋಕಾರ್ಪಣೆಗೊಂಡಿದೆ. ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಉದ್ಯಾನವನವನ್ನು ಲೋಕಾರ್ಪಣೆಗೊಳಿಸಿದರೆ, ತಮಿಳುನಾಡಿನ ಕೃಷಿ ಸಚಿವ ಆರ್.ದೊರೈ ಕಣ್ಣಾ, ಮಾಹಿತಿ ಕೇಂದ್ರ ಹಾಗೂ ವೀಕ್ಷಣಾ ಗೋಪುರದ ಶಂಕುಸ್ಥಾಪನೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಉದ್ಯಾನವನದ ಬಗೆಗೆ ಕನ್ನಡ, ಇಂಗ್ಲೀಷ್ ಹಾಗೂ ತಮಿಳಿನಲ್ಲಿರುವ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ವೆಬ್‍ಸೈಟ್‍ಗೆ ಚಾಲನೆ ನೀಡಲಾಯಿತು. ಸುಮಾರು 38 ಎಕರೆ ಪ್ರದೇಶದಲ್ಲಿರುವ ಈ ಉದ್ಯಾನವನ ಪ್ರವಾಸಿಗರ ಬಹುಮುಖ್ಯ ಆಕರ್ಷಣೆಯಾಗಲಿದೆ. ಊಟಿಯಲ್ಲಿ ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿರುವ 38.91 ಎಕರೆ ಪ್ರದೇಶ, ಸುಮಾರು 7600 ಅಡಿ ಎತ್ತರದಲ್ಲಿದ್ದು, ಬೇಸಿಗೆಯಲ್ಲೂ ಕನಿಷ್ಠ ತಾಪಮಾನದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಕರ್ನಾಟಕದ ಸ್ವಿಟ್ಜರ್‍ಲ್ಯಾಂಡ್ ಎಂದೇ ಕರೆಸಿಕೊಳ್ಳುವ ಊಟಿಯಲ್ಲಿ ಬಹುಪಯೋಗಿ ಆಕರ್ಷಕ ಉದ್ಯಾನವನ ಅಭಿವೃದ್ಧಿ ಪಡಿಸಲಾಗಿದ್ದು, ಇದು ಅಂತರ್‍ರಾಜ್ಯ ಮಟ್ಟದಲ್ಲೂ ಕರ್ನಾಟಕಕ್ಕೆ ಕೀರ್ತಿ ತಂದುಕೊಡುವುದಲ್ಲದೆ, ಆದಾಯ ಕ್ರೋಢೀಕರಣಕ್ಕೂ ಸಹಕಾರಿಯಾಗಲಿದೆ ಎಂದೇ ಹೇಳಲಾಗಿದೆ. ತೋಟಗಾರಿಕಾ ಇಲಾಖೆ ಉದ್ಯಾನವನ ನಿರ್ಮಾಣಕ್ಕೆ ಮಾಸ್ಟರ್ ಪ್ಲ್ಯಾನ್ ತಯಾರಿಸಿ ಒಂದು ದಶಕದಿಂದ ಇದರ ಅಭಿವೃದ್ಧಿಗೆ ಒತ್ತು ನೀಡಿತ್ತು. ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನವನ್ನು ಅಭಿವೃದ್ಧಿಗೊಳಿಸಲಾಗಿದ್ದು, ಹಂತ ಹಂತವಾಗಿ ಇನ್ನು ಹೆಚ್ಚಿನ ಅಭಿವೃದ್ದಿ ಕೈಗೊಳ್ಳಲು ನಿರ್ಧರಿಸಲಾಗಿದೆ.

Ooty-02 - Copy

ಬೆಂಗಳೂರು ರಾಷ್ಟ್ರದ ಉದ್ಯಾನ ನಗರ ಎಂದು ಖ್ಯಾತಿ ಪಡೆದಿರುವಂತೆ ಕರ್ನಾಟಕವನ್ನು ಉದ್ಯಾನವನಗಳ ರಾಜ್ಯವನ್ನಾಗಿಸುವ ಉದ್ದೇಶದಿಂದ ಈ ಬೃಹತ್ ಯೋಜನೆ ಕೈಗೆತ್ತಿಕೊಂಡಿದ್ದು, ಇಂದು ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಈ ಉದ್ಯಾನವನದ ವಿಶೇಷತೆಗಳಲ್ಲಿ ಶೀತವಲಯದ ಗಾಜಿನ ಮನೆ, ಆಕರ್ಷಕ ಟೋಪಿಯರಿಗಳು, ಆಕರ್ಷಕ ಹುಲ್ಲು ಹಾಸು, ಇಟಾಲಿಯನ್, ಟೀ ಎಸ್ಟೇಟ್‍ಗಳು, ಕೂನೂರಿನ ಸಿಮ್ಸ್ ಪಾರ್ಕ್, ಹ್ಯಾಗಿಂಗ್ ಬ್ರಿಡ್ಜ್, ಚೇಸಿಂಗ್ ಫೌಂಟೇನ್, ವೀಕ್ಷಣಾ ಗೋಪುರ, ಮಾಹಿತಿ ಕೇಂದ್ರ, ಉಪಹಾರ ಗೃಹ, ಮರೇನ್ ಅಕ್ವೇರಿಯಂ ಪ್ರಮುಖವಾದವು.

ooty

ವಿಶ್ವದರ್ಜೆಯ ಉದ್ಯಾನಗಳ ನಿರ್ಮಾಣ: ಮಲ್ಲಿಕಾರ್ಜುನ್

ಊಟಿ,ಜ.8-ತೋಟಗಾರಿಕೆ ಇಲಾಖೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲಾಗಿದೆ. ಅಲ್ಲದೆ ವಿಶ್ವದರ್ಜೆಯ ಉದ್ಯಾನವನಗಳನ್ನಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ಅಧ್ಯಯನಕ್ಕಾಗಿ ವಿದೇಶಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಇಂದಿಲ್ಲಿ ತಿಳಿಸಿದರು.  ಊಟಿಯಲ್ಲಿಂದು ತೋಟಗಾರಿಕಾ ಇಲಾಖೆ ವತಿಯಿಂದ ನಿರ್ಮಿಸಲಾಗಿದ್ದ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ ಜೊತೆಗೆ ಮನಸ್ಸಿಗೆ ಹಾಗೂ ದೇಹಕ್ಕೆ ಹಿತ ನೀಡುವಂತಹ ಉದ್ಯಾನವನಗಳನ್ನು ನಿರ್ಮಿಸುವ ಮೂಲಕ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

Ramachadnra  2

ಹೆಚಿನ ಅನುದಾನದ ಜೊತೆಗೆ ತೋಟಗಾರಿಕೆಯನ್ನು ವಿಸ್ತರಿಸಿ ದೇಶದಲ್ಲೇ ನಂ.1 ಸ್ಥಾನ ಪಡೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ಇಂದು ಊಟಿಯಲ್ಲಿ ಈ ಉದ್ಯಾನವನ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ತಮಿಳುನಾಡು-ಕರ್ನಾಟಕ ನಡುವಿನ ಬಾಂಧವ್ಯ ಮತ್ತಷ್ಟು ವೃದ್ದಿಯಾಗಿದೆ. ಕಳೆದ10 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಅಲ್ಲದೆ ಇನ್ನಷ್ಟು ಸಾಧಿಸಬೇಕಿದೆ ಎಂದರು.   ಸರ್ಕಾರದಲ್ಲಿ ಸಚಿವರು ಬಂದು ಹೋಗುತ್ತಾರೆ. ಆದರೆ ನಾನು ತೋಟಗಾರಿಕೆ ಸಚಿವನಾಗಿ ಒಂದಿಷ್ಟು ಮಾಡಿರುವ ಕೆಲಸ ತೃಪ್ತಿಕರವೆನಿಸಿದೆ. ಯಾವುದೇ ಕೆಲಸ ಮಾಡಿದರೂ ಅದು ಚಿರಕಾಲ ಉಳಿಯಬೇಕು ಎಂದು ಹೇಳಿದರು.

Ramachadnra 1

ಉದ್ಯಾನವನಗಳ ಅಭಿವೃದ್ದಿಗಾಗಿ ಇನ್ನಷ್ಟು ಅಧ್ಯಯನ ಮಾಡಲು ಇಲಾಖೆ ಅಧಿಕಾರಿಗಳ ತಂಡ ರಚಿಸಿ ಅವರನ್ನು ಇಸ್ರೇಲ್, ಐರೋಪ್ಯ ರಾಷ್ಟ್ರಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.   ಇಂದಿನ ಕಾರ್ಯಕ್ರಮದಲ್ಲಿ ಹಾಪ್‍ಕಾಪ್ಸ್, ಮೈಸೂರು ಉದ್ಯಾನ ಕಲಾಸಂಘ, ಲಾಲ್‍ಬಾಗ್ ಸೇರಿದಂತೆ ವಿವಿಧ ತೋಟಗಾರಿಕಾ ಇಲಾಖೆ ನಿರ್ದೇಶಕರು, ಅಧಿಕಾರಿ ವರ್ಗದವರು ಸೇರಿರುವುದು ಅಪೂರ್ವ ಸಂಗಮ ಎಂದರು.  ಪರಿಸರವಾದಿ ಯಲ್ಲಪ್ಪ ರೆಡ್ಡಿ ಮಾತನಾಡಿ, ಇಂದಿನ ದಿನಗಳಲ್ಲಿ ಮಾನವ ಹಲವಾರು ಜಟಿಲವಾದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ ಸುಂದರ, ನೈಸರ್ಗಿಕ ತಾಣಗಳು ಕೂಡ ಪರಿಣಾಮಕಾರಿ ಬದಲಾವಣೆ ತರುತ್ತಿದೆ ಎಂದರು.  ತೋಟಗಾರಿಕಾ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮಾತನಾಡಿ, ಈ ಹಿಂದೆ 1964 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಊಟಿಯಲ್ಲಿದ್ದಂತಹ 64 ಎಕರೆ ಜಾಗವನ್ನು ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸಿದ್ದರು. ಆರಂಭದಲ್ಲಿ ಇಲ್ಲಿ ಬೀಜ ಉತ್ಪಾದನೆ, ಸಂಶೋಧನೆ, ತರಬೇತಿ ನಡೆಯುತ್ತಿತ್ತು. ಇದೀಗ 38 ಎಕರೆ ಪ್ರದೇಶವನ್ನು ಉದ್ಯಾನವನವನ್ನಾಗಿ ಮಾಡಲಾಗಿದೆ. 2ನೇ ಹಂತದಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿಗರ ತಾಣವನ್ನಾಗಿ ರೂಪಿಸಲಾಗುವುದು ಎಂದರು.  ಕಾರ್ಯಕ್ರಮದಲ್ಲಿ ಶಾಸಕ ಗಣೇಶ್, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಮಹೇಶ್ವರರಾವ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಅನಿಲ್‍ಕುಮಾರ್, ನಿರ್ದೇಶಕರಾದ ಮಂಜುಳ, ತಮಿಳುನಾಡು ಸರ್ಕಾರದ ತೋಟಗಾರಿಕೆ ಆಯುಕ್ತ ಚಂದ್ರಶೇಖರನ್, ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Facebook Comments

Sri Raghav

Admin