ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ನಿಂದ ರಹಸ್ಯ ಸಮೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Congress0-2

ಬೆಂಗಳೂರು, ಜ.8- ಮುಂಬರುವ ಚುನಾವಣೆಯಲ್ಲಿ ರಣಭೇರಿ ಬಾರಿಸಬೇಕೆಂಬ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೂ ರಹಸ್ಯ ಸಮೀಕ್ಷೆ ನಡೆಸಿದೆ. ಅಭ್ಯರ್ಥಿಗಳ ಗೆಲುವಿನ ಸಾಮಥ್ರ್ಯ, ಹಾಲಿ ಇರುವ ಕೆಲ ಶಾಸಕರಿಗೆ ಟಿಕೆಟ್ ನೀಡದಿದ್ದರೆ ಉಂಟಾಗುವ ಬಂಡಾಯದ ವ್ಯತಿರಿಕ್ತ ಪರಿಣಾಮ, ಶಾಸಕರ ಕ್ರಿಯಾಶೀಲತೆ, ಸೋತಿರುವವರು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವಿಕೆ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಮೀಕ್ಷೆ ನಡೆಸಲಾಗಿದ್ದು, ಟಿಕೆಟ್ ಹಂಚಿಕೆ, ಸಾಧಕ-ಬಾಧಕಗಳ ಬಗ್ಗೆಯೂ ಚರ್ಚಿಸಲಾಗಿದೆ.
ಕೆಲ ಅಭ್ಯರ್ಥಿಗಳಿಗೆ ಟಿಕೆಟ್ ಕೊಡದಿದ್ದರೆ ಕ್ಷೇತ್ರಗಳಲ್ಲಿ ಉಂಟಾಗುವ ಬಂಡಾಯದ ಪರಿಣಾಮವನ್ನು ಹೇಗೆ ಎದುರಿಸಬೇಕು, ರೆಬಲ್ ಆಗದಂತೆ ಹೇಗೆ ತಡೆಗಟ್ಟಬೇಕು, ಯಾರ್ಯಾರು ರೆಬಲ್ ಆಗುವ ಸಾಧ್ಯತೆ ಇದೆ, ಅವರನ್ನು ಹೇಗೆ ಮನವೊಲಿಸಬೇಕು ಎಂಬ ಎಲ್ಲ ಅಂಶಗಳ ಬಗ್ಗೆ ಸರ್ವೆ ಮಾಡಲಾಗಿದೆ.

ಕಳೆದ ಬಾರಿ ಚುನಾವಣೆಯಲ್ಲಿ ಸೋತರೂ ಕೂಡ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಇದ್ದಾರೆ. ಅಂತಹ ಕೆಲವರಿಗೆ ಟಿಕೆಟ್ ನೀಡುವುದು ಸೂಕ್ತವಾಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ನಾಯಕರೊಂದಿಗೆ ಗುರುತಿಸಿಕೊಂಡವರಿಗೆ ಟಿಕೆಟ್ ನೀಡುವುದು ಅಷ್ಟು ಸಮಂಜಸವಾದ ಅಂಶವಲ್ಲ. ನಾಯಕರ ಹಿಂಬಾಲಕರನ್ನು ಪರಿಗಣಿಸುವುದು ಬೇಡ. ಖೋಟ ಟಿಕೆಟ್‍ಗಳಿಗೂ ಮಾನ್ಯತೆ ನೀಡಬೇಕೆ ಎಂಬಿತ್ಯಾದಿ ಅಂಶಗಳನ್ನು ಕ್ರೋಢಿಕರಿಸಿ ಸರ್ವೆ ಮಾಡಲಾಗಿದೆ.

ಹಾಲಿ ಇರುವ 124 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸರ್ವೆ ನಡೆಸಿದ್ದು, ಯಾರಿಗೆ ಟಿಕೆಟ್ ಕೊಡಬೇಕು, ಯಾರನ್ನು ಕೈ ಬಿಡಬೇಕು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ಬಾರಿ ಹೊಸಬರಿಗೆ ಅವಕಾಶ ಎಷ್ಟು ಕೊಡಬೇಕು, ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾದರೆ ಯಾವ ಯಾವ ಅಂಶಗಳನ್ನು ಅಳವಡಿಸಿಕೊಳ್ಳಬೇಕು, ಹಾಲಿ ಇರುವ ಶಾಸಕರ ಬಗ್ಗೆ ಜನಾಭಿಪ್ರಾಯ ಹೇಗಿದೆ, ಅಲ್ಲಿರುವ ಬೇರೆ ಆಕಾಂಕ್ಷಿಗಳ ಬಗ್ಗೆ ಜನಾಭಿಪ್ರಾಯ ಹೇಗಿದೆ ಎಂಬ ಬಗ್ಗೆಯೂ ಸರ್ವೆ ನಡೆಸಲಾಗಿದೆ.

ಸದ್ಯದಲ್ಲೇ ಅಭ್ಯರ್ಥಿಗಳ ಆಯ್ಕೆ ಸಮಿತಿ ರಚನೆಯಾಗಲಿದ್ದು, ತಿಂಗಳ ಅಂತ್ಯದಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಈ ಸಮಿತಿ ಸಭೆ ನಡೆಸಲಿದೆ. ಸಭೆಗೂ ಮುನ್ನ ಅಭ್ಯರ್ಥಿಗಳ ಆಯ್ಕೆ ಸಂಬಂಧದ ಸರ್ವೆ ವರದಿ ತರಿಸಿಕೊಂಡು ಸಮಿತಿಯ ಮುಂದಿಡಲು ನಿರ್ಧರಿಸಲಾಗಿದೆ. ಕಳೆದ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಬಾರಿ ಹಾಗಾಗದಂತೆ ಎಚ್ಚರ ವಹಿಸಲು ತೀರ್ಮಾನಿಸಲಾಗಿದೆ. ಗೆಲ್ಲುವುದು, ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದು ಪ್ರಥಮ ಆದ್ಯತೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲು ಮುಂದಾಗಿದೆ.
ಅದಕ್ಕಾಗಿಯೇ ಎರಡು ರೀತಿಯ ಸರ್ವೆಗಳನ್ನು ಮಾಡಲಾಗಿದ್ದು, ರಹಸ್ಯ ಸರ್ವೆಯನ್ನು ಕೂಡ ಮಾಡಲಾಗಿದೆ.

Facebook Comments

Sri Raghav

Admin