ಬಿಗ್ ನ್ಯೂಸ್ : ಆಪರೇಷನ್ ಕಮಲ ಯಶಸ್ವಿ, ಜೆಡಿಎಸ್‍ನ ಇಬ್ಬರು ಶಾಸಕರು ಸೇರಿ ಹಲವರು ಬಿಜೆಪಿ ಬುಟ್ಟಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

Operation-Kamala-BJP

ಬೆಂಗಳೂರು,ಜ.8-ಅನ್ಯಪಕ್ಷಗಳ ಶಾಸಕರು ಹಾಗೂ ಮುಖಂಡರನ್ನು ಸೆಳೆಯುವ ಆಪರೇಷನ್ ಕಮಲ ಯಶಸ್ವಿಯಾಗಿದ್ದು , ಜೆಡಿಎಸ್‍ನ ಇಬ್ಬರು ಶಾಸಕರು ಸೇರಿದಂತೆ ಕೆಲವರು ಸಂಕ್ರಾಂತಿ ನಂತರ ಕಮಲ ಮುಡಿಗೇರಿಸಿಕೊಳ್ಳಲಿದ್ದಾರೆ. ಜೆಡಿಎಸ್‍ನ ಲಿಂಗಸೂರಿನ ಮಾನಪ್ಪ ವಜ್ಜಲ್, ರಾಯಚೂರಿನ ಡಾ.ಶಿವರಾಜ್ ಪಾಟೀಲ್, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಮಾಜಿ ವಿಧಾನಪರಿಷತ್ ಸದಸ್ಯ ಮಧು ಮಾದೇಗೌಡ, ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಸೇರಿದಂತೆ ಮತ್ತಿತರರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.  ಇದರ ಜೊತೆಗೆ ಕಾಂಗ್ರೆಸ್ ಶಾಸಕರಾದ ಡಾ.ಎ.ಬಿ.ಮಾಲಕ ರೆಡ್ಡಿ , ಮಾಲಿಕಯ್ಯ ಗುತ್ತೇದಾರ್ ಸೇರಿದಂತೆ ಮತ್ತಿತರರು ಬಿಜೆಪಿ ಗಾಳ ಹಾಕಿದೆಯಾದರೂ ಪಕ್ಷ ಸೇರ್ಪಡೆಗೆ ಇನ್ನು ಗೊಂದಲದಲ್ಲೇ ಇದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲವು ಶಾಸಕರಿಗೆ ಬಿಜೆಪಿಗೆ ಸೇರ್ಪಡೆಯಾಗುವಂತೆ ಮನವೊಲಿಸುವ ಪ್ರಯತ್ನ ಮುಂದುವರೆಸಲಾಗಿದೆ. ಕೆಲವರು ಕ್ಷೇತ್ರದ ಸ್ಥಿತಿಗತಿ ನೋಡಿಕೊಂಡು ಮುಂದುವರೆಯುವ ಭರವಸೆಯನ್ನು ನೀಡಿದ್ದಾರೆ.  ಈ ಹಿಂದೆ ಬಿಜೆಪಿಯಿಂದ ಗೆದ್ದು ಕಡೆ ಗಳಿಗೆಯಲ್ಲಿ ಜೆಡಿಎಸ್‍ಗೆ ಸೇರ್ಪಡೆಯಾಗಿದ್ದ ಮಾನಪ್ಪ ವಜ್ಜಲ್ ಹಾಗೂ ಶಿವರಾಜ್ ಪಾಟೀಲ್ ಇಬ್ಬರು ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ.   ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉಭಯ ಶಾಸಕರ ಜೊತೆ ಮಾತುಕತೆ ನಡೆಸಿದ್ದು , ಸಂಕ್ರಾಂತಿ ನಂತರ ಪಕ್ಷದ ಕಚೇರಿಯಲ್ಲಿ ಇಲ್ಲವೇ ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕಾರ್ಯಕರ್ತರೊಂದಿಗೆ ಪಕ್ಷ ಸೇರ್ಪಡೆಯಾಗಲಿದ್ದಾರೆಂದು ತಿಳಿದುಬಂದಿದೆ.

ಇನ್ನು ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಮಂಡ್ಯ ಜಿಲ್ಲೆಯಲ್ಲೂ ಆಪರೇಷನ್ ಕಮಲ ಬಹುತೇಕ ಸಕ್ಸಸ್ ಆಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಪತಿಯ ಅಕಾಲಿಕ ನಿಧನದಿಂದ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿ ಜೆಡಿಎಸ್‍ನಿಂದ ಪ್ರವೇಶಿಸಿದ್ದ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.   2013ರ ವಿಧಾನಸಭೆ ಚುನಾವಣೆಯಲ್ಲಿ ಮದ್ದರೂ ಕ್ಷೇತ್ರದಿಂದ ಪುನಃ ಸ್ಪರ್ಧಿಸುವ ಅವಕಾಶ ದಳಪತಿಗಳಿಂದ ಸಿಗಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದ ಬೀಗರಾಗಿದ್ದ ಡಿ.ಸಿ.ತಮ್ಮಣ್ಣ ಅವರಿಗೆ ಟಿಕೆಟ್ ನೀಡಲಾಗಿತ್ತು.

ಪಕ್ಷೇತರರಾಗಿ ಸ್ಪರ್ಧಿಸಿದ್ದ ಕಲ್ಪನಾ ಸಿದ್ದರಾಜು ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಸಿ.ತಮ್ಮಣ್ಣ 80926 ಮತಗಳನ್ನು ಪಡೆದರೆ ಬಿಜೆಪಿಯ ಮಧು ಮಾದೇಗೌಡ 48,968 ಹಾಗೂ ಕಲ್ಪನಾ ಸಿದ್ದರಾಜು 15,597 ಮತಗಳಿಗೆ ತೃಪ್ತಿಪಟ್ಟಿದ್ದರು.  ಪರಾಭವಗೊಂಡ ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದರೂ ಅಲ್ಲಿಯೂ ಕೂಡ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ. ಇದೇ ವೇಳೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ಮಧು ಮಾದೇಗೌಡ ಹಾಗೂ ಕಲ್ಪನಾ ಸಿದ್ದರಾಜು ಅವರು ಬಿಜೆಪಿಗೆ ಸೇರ್ಪಡೆಯಾದಲ್ಲಿ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವುದು ಖಚಿತ.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದ ಪಿ.ನಾಗರಾಜು ಕೂಡ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದಲೇ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದರು. ಇದಕ್ಕಾಗಿ ಕ್ಷೇತ್ರದಲ್ಲಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದರು.

ಆದರೆ ಒಪ್ಪಂದದಂತೆ 20 ತಿಂಗಳ ನಂತರ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರಗೆ ಬಿಟ್ಟುಕೊಡಲು ನಿರಾಕರಿಸಿದರು. ಇದರಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ನಾಗರಾಜ್ ವರ್ತನೆಗೆ ಅಸಮಾಧಾನಗೊಂಡಿದ್ದರು.  ರಾಮನಗರದಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪುವುದು ಖಚಿತ ಎಂಬ ಸುಳಿವು ಅರಿತಿರುವ ನಾಗರಾಜ್ ಸದ್ಯದಲ್ಲೇ ಕಮಲ ಮುಡಿಗೇರಿಸಿಕೊಳ್ಳುವರು.

Facebook Comments

Sri Raghav

Admin