ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ, ಐವರ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.8- ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅನಾಹುತದಲ್ಲಿ 5 ಮಂದಿ ಕಾರ್ಮಿಕರು ಸುಟ್ಟು ಭಸ್ಮವಾಗಿರುವ ಹೃದಯವಿದ್ರಾವಕ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಅಗ್ನಿಯ ಕೆನ್ನಾಲಿಗೆಗೆ ಆಹುತಿಯಾದ ಕಾರ್ಮಿಕರನ್ನು ತುಮಕೂರು ಮೂಲದ ಸ್ವಾಮಿ (23), ಪ್ರಸಾದ್ (20) , ಮಹೇಶ್ (35), ಹಾಸನದ ಮಂಜುನಾಥ್ (45) ಹಾಗೂ ಮಂಡ್ಯದ ಕೀರ್ತಿ (24) ಎಂದು ಗುರುತಿಸಲಾಗಿದೆ.  ಕೆ.ಆರ್.ಮಾರುಕಟ್ಟೆಯ ತರಕಾರಿ ಮಾರುಕಟ್ಟೆ ಸಮೀಪದ ಕುಂಬಾರರ ಸಂಘದ ಕಟ್ಟಡದ ನೆಲ ಮಹಡಿಯಲ್ಲಿರುವ ಕೈಲಾಸ್ ಬಾರ್ ಮತ್ತು ರೆಸ್ಟೋರೆಂಟ್‍ನಲ್ಲಿ ಬೆಳಗಿನ ಜಾವ ಕಾಣಿಸಿಕೊಂಡ ಅಗ್ನಿ ಅನಾಹುತದಲ್ಲಿ ಈ ದುರಂತ ಸಂಭವಿಸಿದೆ.

 

DS_HfidU8AAN1Vp

ಬೆಳಗಿನ ಜಾವ 2.30ರ ಸಮಯದಲ್ಲಿ ಬಾರ್ ಕಟ್ಟಡದ ಕಿಟಕಿಯಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ ಕೆಲವರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ದಳದ ವಾಹನಗಳು ಹಾಗೂ ಒಂದು ರಕ್ಷಣಾ ವಾಹನ ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.  ಘಟನೆಯಲ್ಲಿ ಬಾರ್‍ನಲ್ಲಿ ನಿದ್ರಿಸುತ್ತಿದ್ದ ಐವರು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ.
ವಿ.ಆರ್.ದಯಾಶಂಕರ್ ಹೆಸರಿನ ಪರವಾನಗಿ ಹೊಂದಿರುವ ಕೈಲಾಸ್ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಸೋಮಶೇಖರ್ ಎಂಬುವರು ನಡೆಸುತ್ತಿದ್ದರು. ಅಗ್ನಿ ಅನಾಹುತದ ನಂತರ ಬಾರ್ ಮಾಲೀಕ ನಾಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ಮೇಲ್ನೋಟಕ್ಕೆ ಬಾರ್‍ನಲ್ಲಿದ್ದ ಸ್ಟೌವ್ ಸ್ಫೋಟಗೊಂಡು ಅಗ್ನಿ ಅನಾಹುತ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ff5c6c78b759f49f5ddc8fbf3d593175

ಬಾರ್‍ಗಳ ತಪಾಸಣೆ:

ಘಟನಾ ಸ್ಥಳಕ್ಕೆ ದೌಡಾಯಿಸಿದ ಮೇಯರ್ ಸಂಪತ್‍ರಾಜ್ ಅವರು ಅಗ್ನಿ ಅನಾಹುತ ಕುರಿತಂತೆ ಆತಂಕ ವ್ಯಕ್ತಪಡಿಸಿದರು.  ನಗರದ ಕೆಲ ಪ್ರಮುಖ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಪದೇ ಪದೇ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಕೂಡಲೇ ಪ್ರಮುಖ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಈಗಾಗಲೇ 8 ಬಾರ್‍ಗಳಿಗೆ ನೊಟೀಸ್ ಜಾರಿ ಮಾಡಿದ್ದು , ಭವಿಷ್ಯದಲ್ಲಿ ಅಗ್ನಿ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಲು ಕಟ್ಟಡದ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.  ಘಟನೆ ಸಂಭವಿಸಿದ ನಂತರ ಬಾರ್ ಮಾಲೀಕ ನಾಪತ್ತೆಯಾಗಿರುವುದನ್ನು ಗಮನಿಸಿದರೆ ಇದು ಮೇಲ್ನೋಟಕ್ಕೆ ಮಾಲೀಕರ ನಿರ್ಲಕ್ಷ್ಯತನ ತೋರಿಸುತ್ತಿದೆ ಎಂದು ಮೇಯರ್ ಅಸಮಾಧಾನ ವ್ಯಕ್ತಪಡಿಸಿದರು.

DS_eXouUMAI2oYo

 

Facebook Comments

Sri Raghav

Admin