ಅಮಿತ್ ಷಾ ಆಗಮನದ ಹಿನ್ನೆಲೆಯಲ್ಲಿ ಬಿಜಿಪಿಯೊಳಗೆ ಬಿರುಸುಗೊಂಡ ರಾಜಕೀಯ ಚಟುವಟಿಕೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--BJP--01

ಬೆಂಗಳೂರು,ಜ.8-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದೊಳಗೆ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಬುಧವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಅವರು ಭಾಗವಹಿಸಲಿದ್ದಾರೆ. ನಾಳೆ ಆಮಿಸಲಿರುವ ಅಮಿತ್ ಷಾ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಕಳೆದ ವಾರ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಷಾ, ರಾಜ್ಯ ನಾಯಕರ ಜೊತೆ ಪೂರ್ಣಮಟ್ಟದಲ್ಲಿ ಮಾತುಕತೆ ನಡೆಸಲು ಸಾಧ್ಯವಾಗಿರಲಿಲ್ಲ. ನವದೆಹಲಿಯಿಂದ ಆಗಮಿಸಲು ವಿಳಂಬವಾಗಿತ್ತು. ಹೀಗಾಗಿ ಎಲ್ಲರ ಜೊತೆ ಪಕ್ಷದ ಸಂಘಟನೆ ಕುರಿತಂತೆ ಮಾತುಕತೆ ನಡೆದಿರಲಿಲ್ಲ.

ನಾಳೆ ರಾಜ್ಯದ ಎಲ್ಲ ನಾಯಕರ ಜೊತೆಯೂ ಒನ್ ಟು ಒನ್ ಮಾತುಕತೆ ನಡೆಸುವರು. ಕಳೆದ ನವೆಂಬರ್ 2ರಿಂದ ಪ್ರಾರಂಭಿಸಿರುವ ಪರಿವರ್ತನಾ ರ್ಯಾಲಿಗೆ ಜನತೆಯಿಂದ ವ್ಯಕ್ತವಾಗಿರುವ ಅಭಿಪ್ರಾಯ, ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರ, ಪ್ರಚಾರದ ಶೈಲಿ, ಪಕ್ಷಕ್ಕೆ ಬರುವವರ ಬಗ್ಗೆ ಮಾಹಿತಿ, ಯಾರಿಗೆ ಟಿಕೆಟ್ ನೀಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಪಡೆಯುವರು. ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಬೇಕೆಂಬ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ.

ಕಾರ್ಯಕ್ರಮಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಆಗಮಿಸುತ್ತಿರುವುದರಿಂದ ಶಕ್ತಿ ಪ್ರದರ್ಶಿಸಿ ಅಂದೇ ಚುನಾವಣಾ ರಣ ಕಹಳೆ ಮೊಳಗಿಸುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದ ಪೂರ್ವಸಿದ್ದತೆ, ಯಾವ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವುದು, ಕಾರ್ಯಕ್ರಮದ ಉಸ್ತುವಾರಿ, ಯಾವ ಯಾವ ನಾಯಕರನ್ನು ಆಹ್ವಾನಿಸುವುದು ಇತ್ಯಾದಿಗಳ ಬಗ್ಗೆ ಚರ್ಚೆ ನಡೆಸುವರು. ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದರಾದ ಪ್ರತಾಪ್ ಸಿಂಹ, ನಳಿನ್‍ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಸೇರಿದಂತೆ ಪಕ್ಷಕ್ಕೆ ಮುಜುಗರ ಸೃಷ್ಟಿಸುತ್ತಿರುವ ನಾಯಕರ ಬಾಯಿಗೆ ಬೀಗ ಹಾಕುವಂತೆ ನೀತಿ ಪಾಠ ಮಾಡುವರು.

ನಾಳೆ ಸಂಜೆ ಖಾಸಗಿ ಹೋಟೆಲ್‍ನಲ್ಲಿ ಅಮಿತ್ ಷಾ ಜೊತೆ ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಕೋರ್ ಕಮಿಟಿ ಸದಸ್ಯರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ , ನಳಿನ್‍ಕುಮಾರ್ ಕಟೀಲ್, ಬಿ.ಎಲ್.ಸಂತೋಷ್, ಗೋವಿಂದ ಕಾರಜೋಳ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಆಗಮನದ ಹಿನ್ನೆಲೆಯಲ್ಲಿ ಕಮಲ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊಳಲ್ಕೆರೆಗೆ ತೆರಳುವರು.

Facebook Comments

Sri Raghav

Admin