ರಾಕಿಂಗ್ ಸ್ಟಾರ್ ಯಶ್ @ 32

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.8-ರಾಕಿಂಗ್ ಸ್ಟಾರ್ ಖ್ಯಾತಿಯ ಯಶ್ ಇಂದು 32ನೇ ವಸಂತಕ್ಕೆ ಕಾಲಿರಿಸಿದ್ದು, ತನ್ನ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುಂಜಾನೆಯೇ ಪತ್ನಿ ರಾಧಿಕಾ ಪಂಡಿತ್, ಕುಟುಂಬ ವರ್ಗದವರೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ತನ್ನ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ಕೋರಲು ರಾತ್ರಿಯಿಂದಲೇ ಹೊಸಕೆರೆಹಳ್ಳಿಯ ಅವರ ಮನೆ ಮುಂದೆ ಜಮಾಯಿಸಿದ್ದರು. ಯಶ್ ಕೇಕ್ ಕತ್ತರಿಸುತ್ತಿದ್ದಂತೆ ಅಭಿಮಾನಿಗಳು ಹರ್ಷೋದ್ಘಾರ ಮುಗಿಲು ಮುಟ್ಟಿತು.  ಹುಟ್ಟುಹಬ್ಬದ ಅಂಗವಾಗಿ ಮನೆಯನ್ನು ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಿ ಹಾಗೂ ಮನೆಯ ಮುಂದೆ ಎಲ್‍ಇಡಿ ಸ್ಕ್ರೀನ್‍ಗಳನ್ನು ಅಳವಡಿಸಿ ಯಶ್ ಚಿತ್ರಗಳ ಡೈಲಾಗ್ ಮತ್ತು ಹಾಡುಗಳನ್ನು ಹಾಕುವುದರ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಇದೇ ವೇಳೆ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಮಾರ್ಚ್‍ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಈ ಚಿತ್ರ ಬಹುಭಾಷೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಬಹು ನಿರೀಕ್ಷತ ಚಿತ್ರ ಟೀಸರ್‍ನ್ನು ಹುಟ್ಟುಹಬ್ಬದ ಅಂಗವಾಗಿ ಅನಾವರಣಗೊಳಿಸಲಾಯಿತು. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯಶ್ ನಂತರ ರಾಜಾ ಹುಲಿ, ರಾಖಿ, ಸಂತು ಸ್ಟ್ರೈಟ್ ಫಾರ್ವಡ್, ಗೂಗ್ಲಿ , ಗಜಕೇಸರಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎ.ಹರ್ಷ ನಿರ್ಮಾಣದ ರಾಣ, ಪ್ರೋಡಕ್ಷನ್ ನಂ.18 ಎಂಬ ಚಿತ್ರಗಳು ಸೆಟ್ಟೇರಲಿವೆ.

ಚಿತ್ರರಂಗ ಮಾತ್ರವಲ್ಲದೆ ಯಶೋ ಮಾರ್ಗ ಎಂಬ ಟ್ರಸ್ಟ್ ಮೂಲಕ ಸಾಮಾಜಿಕ ಸೇವೆಗಳಲ್ಲಿ ತೊಡಗಿರುವ ಯಶ್ ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಕೆರೆಯ ಹೂಳೆತ್ತುವ ಕೆಲಸ ಮಾಡಿದ್ದು, ಸ್ವತಃ ಯಶ್ ಬರಗಾಲದಲ್ಲಿ ನೀರಿಗಾಗಿ ಪರಿತಪಿಸುತ್ತಿದ್ದ ಗ್ರಾಮಗಳಿಗೆ ಭೇಟಿ ನೀಡಿ ಟ್ಯಾಂಕರ್ ಮೂಲಕ ನೀರು ಒದಗಿಸುವ ಮೂಲಕ ಸಮಾಜ ಸೇವೆಯಲ್ಲಿ ಯಶಸ್ವಿ ಹೆಜ್ಜೆ ಇರಿಸಿದ್ದಾರೆ. ನಾನು ಎಲ್ಲರನ್ನು ಪ್ರೀತಿಸುತ್ತೇನೆ. ಜನಸೇವೆ ಮಾಡುವುದು ನನ್ನ ಮುಖ್ಯ ಉದ್ದೇಶವಾಗಿದೆ. ಜನರ ಮನಸ್ಸಿನಲ್ಲಿ ನಿಲ್ಲುವಂತಹ ಕೆಲಸ ಮಾಡಬೇಕೆಂಬ ಹಾಗೂ ಉತ್ತಮ ಚಿತ್ರಗಳನ್ನು ನೀಡುವ ಹಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಈ ಹುಟ್ಟುಹಬ್ಬವನ್ನು ನನ್ನ ಅಭಿಮಾನಿಗಳಿಗೆ ಮೀಸಲಿಟ್ಟಿದ್ದೇನೆ ಎಂದು ಹೇಳಿದ್ದಾರೆ.

Facebook Comments

Sri Raghav

Admin