ಅಮಿತ್ ಷಾ ಆಗಮನದ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah--01

ಬೆಂಗಳೂರು, ಜ.9- ರಾಜ್ಯದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಬಿಜೆಪಿಯ ಚುನಾವಣೆಯ ಚಾಣಕ್ಯ ಅಮಿತ್ ಷಾ ಇಂದು ನಗರಕ್ಕೆ ಆಗಮಿಸಲಿದ್ದು, ರಣತಂತ್ರ ರೂಪಿಸಲಿದ್ದಾರೆ.  ನಾಲ್ಕೈದು ತಿಂಗಳಲ್ಲಿ ಅಧಿಕಾರ ಯುದ್ಧಕ್ಕೆ ಸಾಕ್ಷಿಯಾಗಲಿರುವ ಕರ್ನಾಟಕದ ಚುನಾವಣೆಗೆ ಜಯದ ರಣತಂತ್ರ ರೂಪಿಸಲು ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಆಗಮಿಸಿಸುತ್ತಿರುವುದು ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ. ಈ ಬಾರಿ ಅವರು ಕೆಲವರಿಗೆ ಬಿಸಿ ಮುಟ್ಟಿಸುವ ಸಾಧ್ಯತೆಯಿದೆ. ಕಳೆದ ಬಾರಿ ಶಾ ಬೆಂಗಳೂರಿಗೆ ಬಂದಿದ್ದಾಗ ಕೆಲ ಮುಖಂಡರಿಗೆ ನಿರ್ಧಿಷ್ಟ ಕಾರ್ಯ ಭಾರದ ಜವಾಬ್ದಾರಿ ನೀಡಿದ್ದರು. ಆ ಬಗ್ಗೆ ಮುಖಂಡರು ತಮ್ಮದೇ ಆದ ಪ್ರಗತಿ ವರದಿಯನ್ನು ಅಮಿತ್ ಶಾ ಅವರಿಗೆ ನೀಡಲಿದ್ದಾರೆ ಎನ್ನಲಾಗಿದೆ.

ಸಂಜೆ 4.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಷಾ, ಸೀದಾ ಅಲ್ಲಾಳಸಂದ್ರದಲ್ಲಿರುವ ಖಾಸಗಿ ರೆಸಾರ್ಟ್‍ಗೆ ತೆರಳಲಿದ್ದಾರೆ. ಬಳಿಕ ರೆಸಾರ್ಟ್‍ನಲ್ಲಿ 5.30ರಿಂದ ರಾತ್ರಿ 11 ಗಂಟೆವರೆಗೆ ನಿರಂತರ ಸಭೆ ನಡೆಸಲಿದ್ದಾರೆ. ಮೊದಲು ಉತ್ತರ ಕರ್ನಾಟಕದ ಸಂಸದರು, ಶಾಸಕರು, ಎಂಎಲ್‍ಸಿ, ಜಿಲ್ಲಾಧ್ಯಕ್ಷರು, ಉಸ್ತುವಾರಿಗಳ ಸಭೆ ನಡೆಯಲಿದೆ. ತರುವಾಯ ದಕ್ಷಿಣ ಕರ್ನಾಟಕದವರ ಸರದಿ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಸಭೆಯನ್ನು ಪ್ರತ್ಯೇಕವಾಗಿ ನಡೆಸುವ ಅಮಿತ್ ಷಾ ಚುನಾವಣಾ ರಣತಂತ್ರಗಳ ಬಗ್ಗೆ ಉಸ್ತುವಾರಿಗಳಿಗೆ ಕೆಲ ಹಿತವಚನ ಹೇಳಲಿದ್ದಾರೆ ಎನ್ನಲಾಗಿದೆ.

ನಂತರ ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಹೊಳಲ್ಕೆರೆಯಲ್ಲಿ ನಡೆಯಲಿರುವ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ನಡೆಯುವ ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವರು. ಯಾತ್ರೆ ಮುಗಿದ ನಂತರ ಹೊಳಲ್ಕೆರೆ ಗೆಸ್ಟ್‍ಹೌಸ್‍ನಲ್ಲಿ ಭೋಜನ ಸೇವಿಸಿ, ಅಲ್ಲಿಯೇ ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಒಂದು ಸುತ್ತಿನ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸಾಗಿ ಸಂಜೆ ದೆಹಲಿಗೆ ಹಿಂತಿರುಗಲಿದ್ದಾರೆ.
ಪಕ್ಷದ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಲ್ಲದೆ ಅವರ ಅನುಪಸ್ಥಿತಿಯಲ್ಲಿ ಅಮಿತ್ ಷಾ ಅವರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳೊಂದಿಗೆ ಸಭೆ ನಡೆಸುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಕ್ಷದ ಮೂಲಗಳ ಪ್ರಕಾರ ಇದು ಡಿ.31ರಂದು ಅಪೂರ್ಣಗೊಂಡಿದ್ದ ಸಭೆಯ ಮುಂದುವರಿದ ಭಾಗವಾಗಿರುವುದರಿಂದ ಮತ್ತು ಯಡಿಯೂರಪ್ಪ ಅವರು ಪೂರ್ವ ನಿಗದಿಯಂತೆ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಸಭೆಗೆ ಬರುತ್ತಿಲ್ಲ. ಅಮಿತ್ ಷಾ ಅವರೇ ಯಾತ್ರೆ ಮುಂದುವರಿಸುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.  ಯಲಹಂಕದ ಅಲ್ಲಾಳಸಂದ್ರದಲ್ಲಿರುವ ರಾಯಲ್ ಆರ್ಕಿಡ್ ರೆಸಾರ್ಟ್‍ನಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಪಂಡಿತ್ ದೀನ ದಯಾಳ್ ಅವರ ಕಲ್ಪನೆ-ಪ್ರಧಾನಿ ಮೋದಿ ಸಾಧನೆ ಕುರಿತಾದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ.

ಈ ಸಭೆಯ ನಂತರ ಅಮೀತ್ ಶಾ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಪ್ರಮುಖ ಮುಖಂಡರ ಜೊತೆ ಪ್ರಸಕ್ತ ವಿದ್ಯಮಾನಗಳ ಜೊತೆ ಚರ್ಚೆ ನಡೆಸಲಿದ್ದಾರೆ.   ಉಸ್ತುವಾರಿಗಳಿಗೆ ತಲೆ ಬಿಸಿ:ಡಿ. 31ರಂದು ಅಮಿತ್ ಷಾ ಆಗಮನ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಉಸ್ತುವಾರಿಗಳೊಂದಿಗೆ ಸಭೆ ಮಾಡಿದ್ದರು. ಸಂಸದರು ಮತ್ತು ಶಾಸಕರು ತಮಗೆ ವಹಿಸಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಜ. 15ರೊಳಗೆ ಉಸ್ತುವಾರಿ ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರೊಂದಿಗೆ ಚರ್ಚಿಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದರು. ಅಂದು ಅಮಿತ್ ಶಾ ಕೈಯಿಂದ ಪಾರಾಗಿದ್ದರಾದರೂ ಇಂದು ಮತ್ತೆ ಅಮಿತ್ ಶಾ ಅವರೇ ಸಭೆ ನಡೆಸುತ್ತಿರುವುದು ಉಸ್ತುವಾರಿಗಳಿಗೆ ತಲೆ ಬಿಸಿ ಉಂಟು ಮಾಡಿದೆ.

ಉಸ್ತುವಾರಿಗಳ ಕಾರ್ಯಚಟುವಟಿಕೆಗಳ ಕುರಿತು ಅಮಿತ್ ಶಾ ಈಗಾಗಲೇ ಮಾಹಿತಿ ತರಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಬಾರಿ ಸಭೆ ನಡೆಸಿದ್ದ ಪ್ರಕಾಶ್ ಜಾವಡೇಕರ್ ಅವರೂ ಅಂದಿನ ಸಭೆಯ ವಿವರಗಳನ್ನು ನೀಡಿದ್ದಾರೆ. ಹೀಗಾಗಿ ಸ್ವಲ್ಪ ಎಡವಟ್ಟಾದರೂ ಶಾ ಅವರಿಂದ ತರಾಟೆಗೊಳಗಾಗುವುದು ತಪ್ಪಿದ್ದಲ್ಲ. ಆದ್ದರಿಂದ ಉಸ್ತುವಾರಿ ಜವಾಬ್ದಾರಿ ಹೊಂದಿದ್ದವರು ಆತಂಕದೊಂದಿಗೆ ಇಂದಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಗಮನದ ಹೊತ್ತಲ್ಲೇ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಪಟ್ಟಿಯೂ ಸಿದ್ಧವಾಗಿದ್ದು, ಎಲ್ಲಾ 224 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. 110 ಕ್ಷೇತ್ರಗಳಲ್ಲಿ ತಲಾ ಒಬ್ಬರಷ್ಟೇ ಆಕಾಂಕ್ಷಿಗಳಾಗಿದ್ದಾರೆ. 70 ಕ್ಷೇತ್ರಗಳಲ್ಲಿ ತಲಾ ಇಬ್ಬರು, 54 ಕ್ಷೇತ್ರಗಳಲ್ಲಿ ತಲಾ ಮೂವರು ಟಿಕೆಟ್ ನಿರೀಕ್ಷಿಸಿದ್ದಾರೆ. 224 ಕ್ಷೇತ್ರಗಳಲ್ಲೂ ಉಸ್ತುವಾರಿಗಳಾಗಿ ನೇಮಕಗೊಂಡಿದ್ದವರು ಅಮಿತ್ ಶಾ ಕೈಗೆ ಆಕಾಂಕ್ಷಿಗಳ ಪಟ್ಟಿ ಸಲ್ಲಿಸಲಿದ್ದು, ಈ ವರದಿ ಆಧರಿಸಿ ಶಾ ಟೀಂ, ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿಗಿರುವ ಶಕ್ತಿ-ಸಾಮಥ್ರ್ಯಗಳ ಅಧ್ಯಯನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin