ಅಮೆರಿಕಾದಲ್ಲಿರುವ 7.5 ಲಕ್ಷ ಭಾರತೀಯರಿಗೆ ಬಿಗ್ ರಿಲೀಫ್

ಈ ಸುದ್ದಿಯನ್ನು ಶೇರ್ ಮಾಡಿ

Passport

ವಾಷಿಂಗ್ಟನ್, ಜ.9-ಎಚ್-1ಬಿ ವೀಸಾ ಹೊಂದಿರುವವರನ್ನು ದೇಶದಿಂದ ಹೊರಕ್ಕೆ ಕಳುಹಿಸುವ ಯಾವುದೇ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ ಎಂದು ಅಮೆರಿಕಾ ಇಂದು ಸ್ಪಷ್ಟಪಡಿಸುವ ಮೂಲಕ 7.50 ಲಕ್ಷ ಭಾರತೀಯರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಎಚ್-1ಬಿ ವೀಸಾ ಹೊಂದಿರುವವರನ್ನು ಅಮೆರಿಕಾದಿಂದ ಹೊರದಬ್ಬುವ ಯಾವುದೇ ಬದಲಾವಣೆಗಳನ್ನು ನಾವು ಪರಿಗಣಿಸುವುದಿಲ್ಲ ಮತ್ತು ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಎಚ್-1ಬಿ ವೀಸಾಗಳ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಲು ಪರಿಗಣಿಸುತ್ತಿದೆ. ಇದರಿಂದ ಐಟಿ ಉದ್ಯೋಗಿಗಳು ಸೇರಿದಂತೆ ಏಳೂವರೆ ಲಕ್ಷ ಭಾರತೀಯರು ನೌಕರಿ ಕಳೆದುಕೊಂಡು ಸ್ವದೇಶಕ್ಕೆ ಹಿಂತಿರುಗುವುದು ಅನಿವಾರ್ಯವಾಗುತ್ತದೆ ಎಂಬ ಆತಂಕ ಅಲ್ಲಿ ಮನೆ ಮಾಡಿತ್ತು.  ಆದರೆ ಇಂದು ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‍ಸಿಐಎಸ್)ಇಲಾಖೆಯಿಂದ ಅಧಿಕೃತ ಪ್ರಕಟಣೆ ಹೊರಬಂದಿದ್ದು, ಭಾರತೀಯರಿಗೆ ದೊಡ್ಡ ಮಟ್ಟದ ರಿಲೀಫ್ ದೊರೆತಂತಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಯುಎಸ್‍ಸಿಐಎಸ್‍ನ ಮಾಧ್ಯಮ ಸಂಪರ್ಕಗಳ ಮುಖ್ಯಸ್ಥ ಜೋನಾಥನ್ ವಿಥಿಂಗ್‍ಟನ್ ಪ್ರಸ್ತುತ ಜಾರಿಯಲ್ಲಿರುವ ಎಚ್-1ಬಿ ವೀಸಾದ ನಿಯಮ ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ನಾವು ಪರಿಗಣಿಸಿಲ್ಲ. ಭಾರತದ ಉದ್ಯೋಗಿಗಳಿಗೆ ಅನಗತ್ಯ ತೊಂದರೆ ನೀಡಬೇಕೆಂಬ ಯಾವುದೇ ಉದ್ದೇಶವೂ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಹೇಳಿಕೆಯಿಂದಾಗಿ ಎಚ್-1ಬಿ ವೀಸಾದ ವಿಸ್ತರಣೆಯನ್ನು ಆರು ವರ್ಷಗಳ ಮಿತಿ ಆಚೆಗೂ ವಿಸ್ತರಿಸುವ ಸಾಧ್ಯತೆ ಇದೆ. ಇದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಉದ್ಯೋಗಿಗಳಿಗೆ ವರದಾನವಾಗಲಿದೆ.

ಬಿ ಅಮೆರಿಕನ್ -ಹೈರ್ ಅಮೆರಿಕನ್(ಅಮೆರಿಕಾದವರಾಗಿರಿ – ಅಮೆರಿಕದವರನ್ನೇ ಕೆಲಸಕ್ಕೆ ತೆಗೆದುಕೊಳ್ಳಿ) ಎಂಬುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಯಾದರೂ ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ನೀಡಿರುವ ಅಮೂಲ್ಯ ಕೊಡುಗೆಗಳನ್ನು ಅವರು ಮಾನ್ಯ ಮಾಡಿದ್ದಾರೆ. ಹೀಗಾಗಿ ಎಚ್-1ಬಿ ವೀಸಾ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಸ್ತಾಪ ಟ್ರಂಪ್ ಆಡಳಿತದ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Facebook Comments

Sri Raghav

Admin