ಬಿಜೆಪಿ ಪರ ಪಾಂಚಜನ್ಯ ಮೊಳಗಿಸಲು ಕೃಷ್ಣ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

Krishna--02
ಬೆಂಗಳೂರು, ಜ.9- ಬಿಜೆಪಿ ಸೇರಿದ ಮೇಲೆ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ ಸಕ್ರಿಯರಾಗಲು ತೀರ್ಮಾನಿಸಿದ್ದಾರೆ. ಇದೇ 19ರಂದು ಮಂಡ್ಯದಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ರ್ಯಾಲಿ ಹಾಗೂ 28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಸ್.ಎಂ.ಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರ ಆಡಳಿತಾನುಭವವನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದ್ದು, ಕಳೆದ ವಾರವಷ್ಟೇ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹಾಗೂ ರಾಜ್ಯ ಘಟಕದ ನಾಯಕರು ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಬೇಕೆಂದು ಮನವಿ ಮಾಡಿದ್ದರು. ಐದೂವರೆ ದಶಕಗಳ ಕಾಲ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುವ ಎಸ್.ಎಂ.ಕೃಷ್ಣ ಅವರ ಆಡಳಿತದ ಅನುಭವವನ್ನು ಸದ್ಬಳಕೆ ಮಾಡಿಕೊಂಡರೆ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂದು ಬಿಜೆಪಿ ಚಿಂತಕರ ಚಾವಡಿಯ ಆಲೋಚನೆಯಾಗಿದೆ.  ಎಸ್.ಎಂ.ಕೃಷ್ಣ ಅವರನ್ನು ಮನವೊಲಿಸಿ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಬೇಕೆಂದು ಅಮಿತ್ ಷಾ ರಾಜ್ಯ ಉಸ್ತುವಾರಿಗಳಿಗೆ ಸೂಚನೆ ಕೊಟ್ಟಿದ್ದರು.

ರಾಷ್ಟ್ರೀಯ ನಾಯಕರೇ ತಮ್ಮನ್ನು ಆಹ್ವಾನಿಸಿರುವುದರಿಂದ ಒಂದು ಕಾಲದಲ್ಲಿ ದೇಶದಲ್ಲಿಯೇ ನಂ.1 ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಹೊತ್ತಿದ್ದ ಎಸ್.ಎಂ.ಕೃಷ್ಣ ಅವರು ಬಿಜೆಪಿಯಲ್ಲಿ ಮತ್ತೆ ಪಾಂಚಜನ್ಯ ಮೊಳಗಿಸಲಿದ್ದಾರೆ.  ತಮ್ಮ ತವರು ಜಿಲ್ಲೆ ಮಂಡ್ಯದಲ್ಲಿ ಇದೇ 19ರಂದು ನಡೆಯಲಿರುವ ಪರಿವರ್ತನಾ ರ್ಯಾಲಿಯಲ್ಲಿ ರಾಜ್ಯಘಟಕದ ಅಧ್ಯಕ್ಷ ಬಿಎಸ್‍ವೈ ಅವರಿಗೆ ಎಸ್.ಎಂ.ಕೃಷ್ಣ ಸಾಥ್ ನೀಡುವರು. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಎಸ್.ಎಂ.ಕೃಷ್ಣ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಇಲ್ಲದಿರುವ ಕಾರಣ ಅಸಮಾಧಾನಗೊಂಡಿದ್ದರು. ಪಕ್ಷದಲ್ಲಿದ್ದರೂ ಅವರು ಇದ್ದೂ ಇಲ್ಲದಂತಾಗಿದ್ದರು. ಕೆಲ ದಿನಗಳ ಹಿಂದೆ ಪಕ್ಷದ ಮುಖಂಡರ ನಡವಳಿಕೆಯಿಂದ ಕೃಷ್ಣ ಅವರಿಗೆ ತೀವ್ರ ಅಸಮಾಧಾನ ಉಂಟಾಗಿತ್ತು. ಹೀಗಾಗಿ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇದೀಗ ಎಲ್ಲ ಊಹಾಪೋಹಗಳನ್ನು ಮೀರಿ ಎಸ್.ಎಂ.ಕೃಷ್ಣ ಬಿಜೆಪಿಯಲ್ಲಿ ಪುನಃ ಸಕ್ರಿಯರಾಗುವ ಮೂಲಕ ರಾಜಕೀಯದಿಂದ ನಿವೃತ್ತಿಯಾಗುತ್ತಾರೆ ಎಂಬ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Facebook Comments

Sri Raghav

Admin