ರ‍್ಯಾಲಿ…ರ‍್ಯಾಲಿ…ರ‍್ಯಾಲಿಗಳಿಂದ ರೋಸಿ ಹೋದ ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

Police--02

ಬೆಂಗಳೂರು, ಜ.9- ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರು ವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ಪಕ್ಷಗಳು ಬಿಟ್ಟು ಬಿಡದೆ ನಡೆಸುತ್ತಿರುವ ರ್ಯಾಲಿ, ಸಭೆ-ಸಮಾರಂಭಗಳಿಂದ ಪೊಲೀಸರು ಹೈರಾಣಾಗಿದ್ದಾರೆ. ಸಭೆ-ಸಮಾರಂಭಗಳ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿರುವುದರಿಂದ ಪೊಲೀಸರಿಗೆ ರಾಜ್ಯದ ವಿವಿಧೆಡೆ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.

ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಹಠಕ್ಕೆ ಬಿದ್ದಿರುವ ವಿವಿಧ ರಾಜಕೀಯ ಪಕ್ಷಗಳು ಬಿಟ್ಟು ಬಿಡದಂತೆ ರ್ಯಾಲಿ, ಸಭೆ-ಸಮಾರಂಭಗಳನ್ನು ಹಮ್ಮಿಕೊಳ್ಳುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪರಿವರ್ತನಾ ರ್ಯಾಲಿ ಹಮ್ಮಿಕೊಂಡು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸುತ್ತಿದ್ದಾರೆ. ನಾವೇನು ಕಮ್ಮಿ ಇಲ್ಲ ಎನ್ನುವಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ರಾಜ್ಯದ ತುಂಬೆಲ್ಲ ಸಾಧನಾ ಸಮಾವೇಶ ನಡೆಸಿಕೊಂಡು ಬರುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸುತ್ತಿದ್ದರೆ, ಇತ್ತ ಪರಮೇಶ್ವರ್ ಕಾಂಗ್ರೆಸ್ ಹೊರತುಪಡಿಸಿದ ಕ್ಷೇತ್ರಗಳಲ್ಲಿ ತಮ್ಮ ದಂಡು-ದಾಳಿಗಳೊಂದಿಗೆ ಸಮಾವೇಶ ನಡೆಸುತ್ತಿದ್ದಾರೆ. ಇನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈ ಬಾರಿ ಶತಾಯ-ಗತಾಯ ಜೆಡಿಎಸ್ ಸರ್ಕಾರ ರಚನೆ ಮಾಡಬೇಕು ಎಂಬ ಉದ್ದೇಶದಿಂದ ವಿಕಾಸ ಯಾತ್ರೆ ಮತ್ತು ಕುಮಾರ ಪರ್ವ ರ್ಯಾಲಿಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.

ಪ್ರಮುಖ ಮೂರು ರಾಜಕೀಯ ಪಕ್ಷಗಳ ಮುಖಂಡರು ನಡೆಸುತ್ತಿರುವ ಸರಣಿ ಸಭೆ-ಸಮಾರಂಭಗಳಿಂದ ಹೈರಾಣಾಗುತ್ತಿರುವುದು ಪೊಲೀಸರು ಎನ್ನುವುದು ಮಾತ್ರ ವಿಪರ್ಯಾಸವೇ ಸರಿ. ಸಭೆ-ಸಮಾರಂಭಗಳ ಜತೆಗೆ ರಾಜ್ಯಕ್ಕೆ ಆಗಮಿಸುವ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯಂತಹ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸುವ ಹೊಣೆಯನ್ನು ಪೊಲೀಸರೇ ಹೊರಬೇಕಾಗಿದೆ.

ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಭೆ-ಸಮಾರಂಭಗಳು ನಡೆಯುತ್ತವೆ. ಇನ್ನು ಚುನಾವಣಾ ಭದ್ರತಾ ಹೊಣೆಯೂ ಪೊಲೀಸರ ಹೆಗಲ ಮೇಲೆ ಬಿದ್ದಿದೆ. ರಾಜಕೀಯ ಮುಖಂಡರ ಸಭೆ-ಸಮಾರಂಭ, ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸಬೇಕಾಗಿರುವುದು ಪೊಲೀಸರೇ ಆಗಿರುವುದರಿಂದ ಅವರಿಗೆ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವುದು ಹಾಗೂ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ.

ರಾಜ್ಯದಲ್ಲಿ ಆರೂವರೆ ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಸಿಬ್ಬಂದಿಗಳಿಲ್ಲ. ಹಾಗಾಗಿ ಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸುವುದು, ತಮ್ಮ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವುದು ಹಾಗೂ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಆದರೆ, ತಮ್ಮ ಮೇಲೆ ಆಗುತ್ತಿರುವ ಒತ್ತಡವನ್ನು ಪೊಲೀಸರು ಯಾರ ಬಳಿಯೂ ಹೇಳಿಕೊಳ್ಳುವಂತಿಲ್ಲ. ತಮ್ಮ ಆರೋಗ್ಯ ಮತ್ತು ಕುಟುಂಬದ ಹೊಣೆಯನ್ನು ಮರೆತು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಕಾನೂನು ರಕ್ಷಕರಾದ ಆರಕ್ಷಕರು ಹೈರಾಣಾಗುವುದಂತೂ ಸತ್ಯ.

Facebook Comments

Sri Raghav

Admin