ವಿದೇಶಿ ಹಣ ಕಳ್ಳಸಾಗಣೆ ಜಾಲದಲ್ಲಿ ಜೆಟ್ ಏರ್‍ವೇಸ್’ನ ಗಗನಸಖಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Jet-Airways

ನವದೆಹಲಿ ಜ.9-ವಿದೇಶಿ ವಿನಿಮಯ ರೂಪದಲ್ಲಿ 4,08,200 ಅಮೆರಿಕನ್ ಡಾಲರ್ (ಸುಮಾರು 3.21 ಕೋಟಿ ರೂ.ಗಳು) ಹಣ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಜೆಟ್ ಏರ್‍ವೇಸ್‍ನ ಗಗನಸಖಿಯೊಬ್ಬಳನ್ನು ಆದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‍ಐ) ಅಧಿಕಾರಿಗಳು ಬಂಧಿಸಿದ್ದಾರೆ. ಗಗನಸಖಿ ಬಂಧನವೊಂದಿಗೆ ಭಾರತ ಮತ್ತು ವಿದೇಶಗಳ ನಡುವೆ ನಡೆಯುತ್ತಿದ್ದ ಅಕ್ರಮ ವಿದೇಶಿ ವಿನಿಮಯ ಮತ್ತು ಚಿನ್ನ ಕಳ್ಳಸಾಗಣೆ ದಂಧೆ ಬೆಳಕಿಗೆ ಬಂದಿದ್ದು, ಇದರ ಹಿಂದೆ ಇರುವ ವ್ಯವಸ್ಥಿತ ಜಾಲ ಪತ್ತೆ ಕಾರ್ಯ ಚುರುಕುಗೊಂಡಿದೆ.

ಹಾಂಕಾಂಗ್‍ನಲ್ಲಿ ನಿನ್ನೆ ವಿಮಾನದೊಳಗಿದ್ದ ಗಗನಸಖಿಯನ್ನು ಡಿಆರ್‍ಐ ಸಿಬ್ಬಂಧಿ ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ತನ್ನ ಬಳಿ ಅಡಗಿಸಿಟ್ಟಿದ್ದ 4,80,200 ಡಾಲರ್‍ಗಳನ್ನು ಡಿಆರ್‍ಐ ಅಧಿಕಾರಿಗಳು ವಶಪಡಿಸಿಕೊಂಡರು. ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿ, ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ನಿವಾಸಿ ಅಮಿತ್ ಮಲ್ಹೋತ್ರಾ ಎಂಬ ಏಜೆಂಟ್‍ಗಾಗಿ ನಾನು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾಳೆ.

ವಿದೇಶ ವಿನಿಮಯ ಹಣವನ್ನು ಭಾರತದೊಳಗೆ ಕಳ್ಳಸಾಗಣೆ ಮಾಡಲು ಆತ ವಿಮಾನದ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದ ಸಂಗತಿ ಬಯಲಾಗಿದೆ. ಅಮಿತ್ ದೆಹಲಿಯ ಕೆಲವು ಚಿನ್ನ-ಬೆಳ್ಳಿ ವರ್ತಕರಿಂದ ಹಣ ಸಂಗ್ರಹಿಸಿ ಗಗನಸಖಿಯರ ಮೂಲಕ ವಿದೇಶಗಳಿಗೆ ರವಾನಿಸುತ್ತಿದ್ದ. ಆ ಹಣವನ್ನು ವಿದೇಶದಲ್ಲಿ ಚಿನ್ನ ಖರೀದಿಸಲು ಬಳಸಲಾಗುತ್ತಿತ್ತು. ನಂತರ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ರವಾನಿಸಲ್ಪಡುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕಳೆದ ತಿಂಗಳ ಹಿಂದೆ ಭಾರತಕ್ಕೆ ವಿದೇಶದಿಂದ ವಿಮಾನದಲ್ಲಿ ಬರುವ ವೇಳೆ ಜೆಟ್ ಏರ್‍ವೇರ್ ಸಿಬ್ಬಂದಿಯೊಂದಿಗೆ ಸ್ನೇಹ ಸಂಪಾದಿಸಿದ ಅಮಿತ್ ಅವರ ನೆರವಿನಿಂದ ಕಳ್ಳಸಾಗಣೆ ದಂಧೆಯಲ್ಲಿ ತೊಡಗಿದ್ದ.  ಜೆಟ್ ಏರ್‍ವೇರ್‍ನ ಇತರ ಸಿಬ್ಬಂದಿಗಳೂ ಈ ಜಾಲದಲ್ಲಿ ಸಕ್ರಿಯವಾಗಿರುವ ಸಾಧ್ಯತೆ ಇದ್ದು ತನಿಖೆ ತೀವ್ರಗೊಂಡಿದೆ.

Facebook Comments

Sri Raghav

Admin