ಸಿಎಂ ಪರಮಾಪ್ತ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಮನೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

INCOME-TAX

ಬೆಂಗಳೂರು, ಜ.9- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು (ಐಟಿ) ದಾಳಿ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ದೆಹಲಿಯಿಂದ ಗೌಪ್ಯವಾಗಿ ಆಗಮಿಸಿದ್ದ ನಾಲ್ಕು ಐಟಿ ತಂಡ ಶಿವಣ್ಣ ಅವರ ಮನೆ, ಸಂಬಂಧಿಕರು ಹಾಗೂ ಆಪ್ತರ ನಿವಾಸಗಳ ಮೇಲೆ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಶಿವಣ್ಣನವರ ಡಾಲ್‍ಹೌಸ್ ಕಾಲೋನಿ ನಿವಾಸ, ವೈಷ್ಣವಿ ಅಪಾರ್ಟ್‍ಮೆಂಟ್, ಮಂಡ್ಯ ಹಾಗೂ ಮಳವಳ್ಳಿಯಲ್ಲೂ ದಾಳಿ ನಡೆಸಿ ಶಿವಣ್ಣನವರಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉದ್ಯಮಿ ನಂಜುಂಡಿ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ ಮರು ದಿನವೇ ಐಟಿ ಅಧಿಕಾರಿಗಳು ಸಿಎಂ ಆಪ್ತನಿಗೆ ಬಿಸಿ ಮುಟ್ಟಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ದಾಳಿ ಸಂದರ್ಭದಲ್ಲಿ ಐಟಿ ಅಧಿಕಾರಿಗಳಿಗೆ ಆದಾಯಕ್ಕಿಂತ ಹೆಚ್ಚಿನ ದಾಖಲೆಗಳು ಲಭ್ಯವಾಗಿದೆ.  ಯಾರು ಈ ಶಿವಣ್ಣ ?: ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯಲ್ಲಿ ಸಂಚಾಲಕರಾಗಿದ್ದ ಎಂ.ಶಿವಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈ ಹಿಂದೆ 2013ರ ವಿಧಾನಸಭೆ ಚುನಾವಣೆಯಲ್ಲೇ ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಆದರೆ ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಾಲಿ ಶಾಸಕ ನರೇಂದ್ರ ಸ್ವಾಮಿಗೆ ಟಿಕೆಟ್ ನೀಡುವುದು ಅನಿವಾರ್ಯವಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಣ್ಣ ಇದೇ ಕ್ಷೇತ್ರದಿಂದ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಿವಣ್ಣ ಹಾಲಿ ಅಧ್ಯಕ್ಷ ಪರಮೇಶ್ವರ್ ಜತೆಯೂ ಆತ್ಮೀಯ ಸಂಬಂಧ ಹೊಂದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಅವರ ಒಡನಾಡಿಯಾಗಿ ಗುರುತಿಸಿಕೊಂಡಿದ್ದ ಶಿವಣ್ಣ ಇತ್ತೀಚೆಗೆ ತೆರೆಮರೆಯಲ್ಲಿ ಕುಳಿತುಕೊಂಡೇ ಸಾಧಿಸಬೇಕಾದ ಕೆಲಸವನ್ನು ಮಾಡುತ್ತಿದ್ದರು. ಅಧಿಕಾರಿಗಳ ವರ್ಗಾವರ್ಗಿ, ಬೃಹತ್ ಕಾಮಗಾರಿ, ಬಿಬಿಎಂಪಿಯಲ್ಲೂ ಅವರ ಹಸ್ತಕ್ಷೇಪ ಇತ್ತು ಎನ್ನಲಾಗಿದೆ.

ಸಿದ್ದರಾಮಯ್ಯನವರ ಜತೆ ಗುರುತಿಸಿಕೊಂಡ ಕಾರಣ ಕೆಲ ಪ್ರಮುಖ ದಾಖಲೆಗಳು, ಭಾರೀ ಪ್ರಮಾಣದ ನಗದು ಮತ್ತಿತರ ಪ್ರಮುಖ ವಸ್ತುಗಳನ್ನು ಐಟಿ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಐಟಿ ಅಧಿಕಾರಿಗಳು ಎಷ್ಟು ಗೌಪ್ಯವಾಗಿ ದಾಳಿ ನಡೆಸಿದ್ದರು ಎಂದರೆ ಕರ್ನಾಟಕ ಹಾಗೂ ಗೋವಾ ವಿಭಾಗದ ಅಧಿಕಾರಿಗಳಿಗೂ ಇದರ ಮಾಹಿತಿ ಇರಲಿಲ್ಲ. ದೆಹಲಿಯಿಂದ ಅತ್ಯಂತ ನಂಬಿಕಸ್ಥ ಅಧಿಕಾರಿಗಳ ತಂಡವೇ ಆಗಮಿಸಿತ್ತು ಎನ್ನಲಾಗುತ್ತಿದೆ. ಯಾರಾದರೂ ಅಧಿಕಾರಿಗಳು ಮಾಹಿತಿ ಸೋರಿಕೆ ಮಾಡಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು.

Facebook Comments

Sri Raghav

Admin