ಸಿಲಿಕಾನ್ ಸಿಟಿಯನ್ನು ಕ್ರೈಂ ಸಿಟಿ ಮಾಡಿದ ಕಾಂಗ್ರೆಸ್ ಸರ್ಕಾರ : ಜಗದೀಶ್ ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

Jagadish-Shettar-01

ಬೆಂಗಳೂರು, ಜ.9-ಉದ್ಯಾನನಗರಿ, ಸಿಲಿಕಾನ್ ಸಿಟಿಯಾಗಿದ್ದ ಬೆಂಗಳೂರು ರಾಜ್ಯಸರ್ಕಾರದ ಆಡಳಿತ ವೈಫಲ್ಯದಿಂದಾಗಿ ಕ್ರೈಂ ಸಿಟಿಯಾಗಿ ಮಾರ್ಪಟ್ಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‍ಸಿಆರ್‍ಬಿ ಪ್ರಕಾರ ಅಪಹರಣ, ರೇಪ್ ಪ್ರಕರಣಗಳಲ್ಲಿ ಬೆಂಗಳೂರು ರಾಷ್ಟ್ರದಲ್ಲೇ ಮೂರನೇ ಸ್ಥಾನದಲ್ಲಿದೆ. ಕೊಲೆ ಪ್ರಕರಣಗಳಲ್ಲಿ ದೇಶದಲ್ಲೇ 2ನೆ ಸ್ಥಾನದಲ್ಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಅಪಹರಣ ಮತ್ತು ರೇಪ್ ಪ್ರಕರಣಗಳಲ್ಲಿ ಶೇ.7.8ರಷ್ಟು ,ಕೊಲೆ ಪ್ರಕರಣಗಳಲ್ಲಿ ಶೇ.10.4ರಷ್ಟು ಅಪರಾಧಗಳು ನಡೆದಿವೆ ಎಂದು ಮಾಹಿತಿ ನೀಡಿದರು. ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಇತರೆ ಭಾಗಗಳಲ್ಲೂ ದೊಂಬಿ, ಗಲಾಟೆ, ಕೊಲೆ, ರೇಪ್ ಹೀಗೆ ಒಂದಲ್ಲ ಒಂದು ಪ್ರಕರಣಗಳು ನಡೆಯುತ್ತಲೇ ಇವೆ. ಇಷ್ಟಾದರೂ ರಾಜ್ಯಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ 24 ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯಾಗಿದ್ದರೂ, ವಿಚಾರವಾದಿಗಳು ಇದನ್ನು ಖಂಡಿಸಿ ಪ್ರಶಸ್ತಿ ಹಿಂತಿರುಗಿಸುವ ಪ್ರಯತ್ನ ಮಾಡಿಲ್ಲ. ಆದರೆ ಈ ಹಿಂದೆ ಕಲಬುರ್ಗಿ ಅವರ ಹತ್ಯೆ ಸಂದರ್ಭದಲ್ಲಿ ವಿಚಾರವಾದಿಗಳಿಗೆ ರಕ್ಷಣೆ ಇಲ್ಲ ಎಂದು ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು.

ಸಂಘ ಪರಿವಾರ ದೇಶ ಪ್ರೇಮ ಉಳಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಅದರ ಮೇಲೆ ಆಪಾದನೆ ಮಾಡುವುದನ್ನು ನಿಲ್ಲಿಸಬೇಕು. ದೀಪಕ್ ಬಷೀರ್ ಸೇರಿದಂತೆ ಯಾವುದೇ ಹತ್ಯೆ, ಹಲ್ಲೆ ನಡೆದರೂ ಖಂಡಿಸುತ್ತೇವೆ. ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರಸ್ತಾವನೆ: ರಾಜ್ಯದಲ್ಲಿ ಕೆಎಫ್‍ಡಿ, ಎಸ್‍ಡಿಎಫ್‍ಐ, ಪಿಎಫ್‍ಐನಂತಹ ಸಂಘಟನೆಗಳು ಕೋಮು ಪ್ರಚೋದನೆ ಮಾಡುತ್ತಿವೆ. ಈ ಸಂಘಟನೆಗಳು ಆಳವಾಗಿ ಬೇರು ಬಿಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಮಟ್ಟಕ್ಕೆ ಬೆಳೆದಿವೆ. ನಿಷೇಧಿತ ಸಿಮಿ ಸಂಘಟನೆ ಹಿನ್ನೆಲೆ ಉಳ್ಳವರೇ ಇಂತಹ ಸಂಘಟನೆಗಳಲ್ಲಿರುವ ಸಾಧ್ಯತೆ ಇದ್ದು, ಕಡಿವಾಣ ಹಾಕುವ ಪ್ರಯತ್ನ ನಡೆದಿಲ್ಲ. ಇಂತಹ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಪಘಾತದಲ್ಲಿ ಗಾಯಗೊಂಡಿದ್ದ ಪ್ರವೀಣ್‍ಮುಳೆ ಬದುಕಿದ್ದಾಗಲೇ ಸತ್ತಿದ್ದಾನೆಂದು ಶವಾಗಾರಕ್ಕೆ ಕಳುಹಿಸಿದ್ದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ದ ಕ್ರಮಕೈಗೊಳ್ಳಬೇಕು, ಆತನ ಕುಟುಂಬಕ್ಕೆ ರಾಜ್ಯಸರ್ಕಾರ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿದರು. ರಾಜ್ಯಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದರು.

ಹಗರಣ ಮುಚ್ಚಿ ಹಾಕುವ ಯತ್ನ: ಅರ್ಕಾವತಿ ಬಡಾವಣೆಯ ಡಿ ನೋಟಿಫಿಕೇಷನ್‍ಗೆ ಸಂಬಂಧಿಸಿದ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ ಎಂದು ಜಗದೀಶ್ ಶೆಟ್ಟರ್ ಇದೇ ವೇಳೆ ಗಂಭೀರ ಆರೋಪ ಮಾಡಿದರು. ರೀಡೂಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ನ್ಯಾ.ಕೆಂಪಣ್ಣ ಆಯೋಗ ವರದಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಈ ನಡುವೆ ತಜ್ಞರ ಸಮಿತಿ ರಚಿಸಿರುವುದು ಸರಿಯಲ್ಲ ಎಂದು ಹೇಳಿದರು. ಅರ್ಕಾವತಿ ಬಡಾವಣೆಯಲ್ಲಿ ಸುಮಾರು 750 ಎಕರೆ ಜಮೀನು ಡಿ ನೋಟಿಫೈ ಮಾಡಿದ್ದು 10 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಶೆಟ್ಟರ್ ದೂರಿದರು.

Facebook Comments

Sri Raghav

Admin