ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‍’ಗಾಗಿ ಬಿಗ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

Chikkapete--01

– ರಮೇಶ್ ಪಾಳ್ಯ

ಬೆಂಗಳೂರು,ಜಿ.10-ಮಾಜಿ ಶಾಸಕ ಡಾ.ಹೇಮಚಂದ್ರ ಸಾಗರ್, ಮುಖಂಡ ಉದಯ ಗರುಡಾಚಾರ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ, ಪಾಲಿಕೆ ಸದಸ್ಯರಾದ ಭೈರಸಂದ್ರ ನಾಗರಾಜ್, ಮಾಜಿ ಸದಸ್ಯರಾದ ಎ.ಎಲ್.ಶಿವಕುಮಾರ್, ಸಿ.ಕೆ.ರಾಮಮೂರ್ತಿ, ಧನರಾಜ್ ಅರೇ! ಇದೇನಿದು ಬಿಜೆಪಿ ಮುಖಂಡರ ಲಿಸ್ಟ್ ಅಂದುಕೊಂಡ್ರಾ… ಇದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯೂ ಆಂಜನೇಯನ ಬಾಲದಂತೆ ಬೆಳೆಯುತ್ತಿದೆ.

ಹಾಲಿ ಕಾಂಗ್ರೆಸ್‍ನ ಆರ್.ವಿ.ದೇವರಾಜ್ ಚಿಕ್ಕಪೇಟೆಯಲ್ಲಿ ಶಾಸಕರಾಗಿದ್ದು , ಈ ಬಾರಿಯೂ ಅವರೇ ಕೈ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಆದರೆ ಒಂದು ಮೂಲಗಳ ಪ್ರಕಾರ ಈ ಬಾರಿ ದೇವರಾಜ್ ಅಖಾಡಕ್ಕಿಳಿಯದೆ ತಮ್ಮ ಮಗ ಯುವರಾಜನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.   ಏನೇ ಆದರೂ ದೇವರಾಜ್ ಇಲ್ಲವೇ ಯುವರಾಜ್ ಇಬ್ಬರಲ್ಲಿ ಒಬ್ಬರು ಕೈ ಹುರಿಯಾಳುಗಳಾಗುವುದು ಖಚಿತ. ಆದರೆ ಈ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಬಿಜೆಪಿಯಲ್ಲಿ ಬಿಗ್ ಫೈಟ್ ಶುರುವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಈ ಹಿಂದೆ ಚಿಕ್ಕಪೇಟೆಯಲ್ಲಿ ಶಾಸಕರಾಗಿದ್ದ ಹೇಮಚಂದ್ರ ಸಾಗರ್ ಕಳೆದ ಬಾರಿ ದೇವರಾಜ್ ವಿರುದ್ದ ಸೋಲು ಕಂಡಿದ್ದ ಉದಯ ಗರುಡಾಚಾರ್ ಅಥವಾ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರಲ್ಲಿ ಒಬ್ಬರು ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

ಆದರೂ ಈ ಕ್ಷೇತ್ರದ ಮೇಲೆ ಹಲವಾರು ಹಿರಿಯ ಬಿಜೆಪಿ ಬಿಬಿಎಂಪಿ ಸದಸ್ಯರ ಕಣ್ಣು ಬಿದ್ದಿದೆ. ಕಾರಣ ತಾವು ಪ್ರತಿನಿಧಿಸುವ ವಾರ್ಡ್‍ಗಳಿರುವ ಕ್ಷೇತ್ರಗಳಲ್ಲಿ ಪ್ರಭಾವಿ ಬಿಜೆಪಿ ಶಾಸಕರಿರುವುದೇ ಕಾರಣ ಎನ್ನಲಾಗಿದೆ.  ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಾಜಿ ಮೇಯರ್ ಎಸ್.ಕೆ.ನಟರಾಜ್, ಭೈರಸಂದ್ರ ನಾಗರಾಜ್, ಸಿ.ಕೆ.ರಾಮಮೂರ್ತಿ ಅವರು ಹಿರಿಯ ಬಿಬಿಎಂಪಿ ಸದಸ್ಯರಾಗಿದ್ದು, ಈ ಬಾರಿ ವಿಧಾನಸಭೆ ಮೆಟ್ಟಿಲೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜಯನಗರದಲ್ಲಿ ಶಾಸಕ ಬಿ.ಎನ್.ವಿಜಯಕುಮಾರ್ ಪ್ರಬಲರಾಗಿರುವುದರಿಂದ ಈ ಮೂವರು ಆ ಕ್ಷೇತ್ರದಲ್ಲಿ ಟಿಕೆಟ್ ಕೇಳುವ ಗೋಜಿಗೆ ಹೋಗಿಲ್ಲ. ಹೀಗಾಗಿ ತಮ್ಮ ಗಾಡ್ ಫಾದರ್‍ಗಳ ಮೂಲಕ ಒತ್ತಡ ತಂದು ಚಿಕ್ಕಪೇಟೆಯಲ್ಲಿ ಬಿಜೆಪಿ ಟಿಕೆಟ್‍ಗಾಗಿ ಯತ್ನಿಸುತ್ತಿದ್ದಾರೆ.

ಶಾಸಕ ಆರ್.ವಿ.ದೇವರಾಜ್ ವಿರುದ್ದ ಪ್ರಬಲ ಯುದ್ಧ ಸಾರಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಈ ಬಾರಿ ಟಿಕೆಟ್ ನನಗೆ ಖಚಿತ. ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಬಿಬಿಎಂಪಿ ಮಾಜಿ ಸದಸ್ಯರಾದ ಧನರಾಜ್, ಎ.ಎಲ್.ಶಿವಕುಮಾರ್ ಅವರು ತಾವೂ ಒಂದು ಕೈ ನೋಡೇ ಬಿಡೋಣ ಎಂದು ಬಿಜೆಪಿ ಟಿಕೆಟ್‍ಗಾಗಿ ಲಾಬಿ ನಡೆಸುತ್ತಿದ್ದಾರೆ. ನಗರ ಬಿಜೆಪಿ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ ಅವರು ಚಿಕ್ಕಪೇಟೆಯಲ್ಲಿ ನನಗೆ ಟಿಕೆಟ್ ಕೊಡಿಸಬೇಕೆಂದು ಸಂಘ ಪರಿವಾರದ ಮೊರೆ ಹೋಗಿದ್ದಾರೆ.

ಒಟ್ಟಾರೆ ಚಿಕ್ಕಪೇಟೆಯಲ್ಲಿ ಬಿಜೆಪಿ ಟಿಕೆಟ್‍ಗೆ ಬಿಗ್ ಫೈಟ್ ಶುರುವಾಗಿರುವುದಂತೂ ಸತ್ಯ. ಯಾರು ಏನೇ ತಿಪ್ಪರಲಾಗ ಹಾಕಿದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸುವ ವ್ಯಕ್ತಿ ಇಲ್ಲಿ ಬಿಜೆಪಿ ಹುರಿಯಾಳಾಗಲಿದ್ದಾರೆ.  ಕಳೆದ ಬಾರಿ ಆರ್.ವಿ.ದೇವರಾಜ್ ವಿರುದ್ಧ ಪರಾಭವಗೊಂಡಿದ್ದ ಉದಯ ಗರುಡಾಚಾರ್ ಈ ಬಾರಿಯೂ ಟಿಕೆಟ್‍ಗೆ ಫೈಟ್ ನಡೆಸಲಿದ್ದಾರೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಅವರು ಜೆಡಿಎಸ್ ಮನೆಬಾಗಿಲು ತಟ್ಟುವ ಸಾಧ್ಯತೆಗಳಿವೆ ಎನ್ನುತ್ತವೆ ಬಿಜೆಪಿ ಮೂಲಗಳು.

ಕಳೆದ ಬಾರಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಂ.ಸಿ.ನಾರಾಯಣಗೌಡ ಚಿಕ್ಕಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದರೆ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಹೀಗಾಗಿ ಇಲ್ಲಿ ಜೆಡಿಎಸ್ ಟಿಕೆಟ್‍ಗೆ ಫೈಟ್ ಇಲ್ಲ. ಈ ಬಾರಿ ಲತಾ ಸುಕುಮಾರ್ ಅಥವಾ ಬಿಜೆಪಿ ಟಿಕೆಟ್ ವಂಚಿತರಾದರೆ ಉದಯ ಗರುಡಾಚಾರ್ ಅವರು ಇಲ್ಲಿ ತೆನೆ ಅಭ್ಯರ್ಥಿಗಳಾಗುವ ಸಾಧ್ಯತೆಗಳಿವೆ.

Facebook Comments

Sri Raghav

Admin