ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕಲು ಆಯೋಗದಿಂದ ಮಹತ್ವದ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

VVPat--01

ಬೆಂಗಳೂರು, ಜ.10-ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿವಿ ಪ್ಯಾಟ್ ಸೌಲಭ್ಯ ಬಳಸುವ ಮೂಲಕ ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲದಂತೆ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಆಯುಕ್ತ ಉಮೇಶ್ ಸಿನ್ಹಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದೇ ಮೊದಲ ಬಾರಿಗೆ ಎಲ್ಲಾ 224 ಕ್ಷೇತ್ರಗಳಲ್ಲಿ ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಈ ಮೊದಲು ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಗಳಲ್ಲಿ ವಿವಿ ಪ್ಯಾಟ್ ಅಳವಡಿಸಲಾಗಿತ್ತು. ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಇತ್ತೀಚೆಗೆ ಬಹುತೇಕ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಜಯ ಗಳಿಸುತ್ತಿರುವುದರಿಂದ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಮತ ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮತಯಂತ್ರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಿ ಪ್ಯಾಟ್ ಅಳವಡಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ವಿವಿ ಪ್ಯಾಟ್ ಅಳವಡಿಸಿದರೆ ಆರಂಭದಲ್ಲೇ ಮತದಾರರು ತಾವು ಹಾಕಿದ ಮತ ನಿರ್ದಿಷ್ಟ ವ್ಯಕ್ತಿ ಬಿದ್ದಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಅವಕಾಶವಿದೆ. ಆನಂತರ ಯಥಾರೀತಿ ಮತದಾನ ಮುಂದುವರೆಯಲಿದೆ.

ರಾಜ್ಯ ವಿಧಾನಸಭೆ ಚುನಾವಣೆಯ ಪೂರ್ವಸಿದ್ಧತೆ ಬಗ್ಗೆ ಇಂದು ವಿಧಾನಸೌಧದಲ್ಲಿ ಕೇಂದ್ರ ಚುನಾವಣಾ ಹಿರಿಯ ಅಧಿಕಾರಿಗಳ ತಂಡ ಪ್ರಗತಿ ಪರಿಶೀಲನೆ ನಡೆಸಿತು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮೇಶ್ ಸಿನ್ಹಾ ಅವರು, ಈ ಬಾರಿ ಮತಗಟ್ಟೆಗಳ ಸಂಪೂರ್ಣ ವಿವರಗಳನ್ನೊಳಗೊಂಡ ಡಿಜಿಟಲ್ ಮ್ಯಾಪ್ ಬಳಕೆ ಮಾಡಲಾಗುತ್ತಿದೆ. ಮತದಾರರ ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರು ಸರಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಲು, ಹೆಸರು ಬಿಟ್ಟು ಹೋಗಿದ್ದರÉ ಸೇರ್ಪಡೆ ಮಾಡಲು ಇದು ಸಕಾಲವಾಗಿದ್ದು, ಕೂಡಲೇ ಮತದಾರರು ಈ ಬಗ್ಗೆ ಗಮನಹರಿಸಿ ತಮ್ಮ ಮತದಾನದ ಹಕ್ಕನ್ನು ಪಡೆಯಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ ಆಯೋಗ ಮತದಾನದ ಬಗೆಗೆ ಜಾಗೃತಿ ಮೂಡಿಸಲು ನಿರ್ಧರಿಸಿದೆ. 4.90 ಕೋಟಿ ಮತದಾರರು ಹಕ್ಕು ಚಲಾಯಿಸುವ 56, 694 ಮತಗಟ್ಟೆಗಳ ವಿವರಗಳನ್ನು ಡಿಜಟಲೀಕರಣ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರತಿ ಮತಗಟ್ಟೆಗಳ ಸಮೀಪ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಅಳವಡಿಸಲಾಗುತ್ತಿದ್ದು, ಪ್ರತಿಯೊಂದು ಮತಗಟ್ಟೆ ಬಳಿ ಅಶಕ್ತರು, ವೃದ್ಧರಿಗೆ ನೆರವಾಗಲು ವ್ಹೀಲ್‍ಛೇರ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಆಯೋಗ ಸೂಚಿಸಿದೆ ಎಂದು ತಿಳಿಸಿದರು. ಈಗಾಗಲೇ ರಾಜ್ಯದಲ್ಲಿ ನಡೆಯಲಿರುವ ಚುನಾವಣಾ ಹಿನ್ನೆಲೆಯಲ್ಲಿ ಅಧಿಕಾರಿಗಳೂ, ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆದಿದ್ದು, ಮತದಾರರಿಗೆ ಆಮಿಷವೊಡ್ಡುವ ಬಗ್ಗೆ ಹಲವು ರಾಜಕೀಯ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಹಾಗಾಗಿ ಮೊದಲು ಆಯಾ ರಾಜಕೀಯ ಪಕ್ಷಗಳೇ ಮತದಾರರಿಗೆ ಆಮಿಷವೊಡ್ಡುವುದಿಲ್ಲ ಎಂದು ಸ್ವಯಂ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

ಕಳೆದ ವಾರ ಶೇ.71ರಷ್ಟು ಮತದಾನವಾಗಿದೆ. ಈ ಬಾರಿ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಹಣಬಲ ಪ್ರಯೋಗ ನಡೆಯದಂತೆ ಚುನಾವಣೆ ನಡೆಸಲು ಅರಿವು ಮೂಡಿಸಲಾಗುವುದು. ಕಾಸಿಗಾಗಿ ಸುದ್ದಿ ಬಗ್ಗೆ ಗಮನಿಸಲು ಜಿಲ್ಲಾ ಮಟ್ಟದಲ್ಲೂ ನಿಗಾ ವಹಿಸಲಾಗುತ್ತಿದೆ ಎಂದರು. 25 ಸಾವಿರ ಸೇವಾ ಮತದಾರರಿಗೆ ಎಲೆಕ್ಟ್ರಾನಿಕ್ ಪೋಸ್ಟಲ್ ಬ್ಯಾಲೆಟ್ ಬಳಕೆ ಮಾಡಲಾಗುತ್ತದೆ. ಚುನಾವಣಾ ಪ್ರಚಾರಕ್ಕೆ ತೆರಳುವ ಪಕ್ಷಗಳು ಮತ್ತು ರಾಜಕೀಯ ಮುಖಂಡರು ಮೊದಲೇ ಚುನಾವಣಾ ಇಲಾಖೆ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದ್ದು, ಅದರಂತೆ ನಿಗದಿತ ಸಮಯದೊಳಗೆ ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಉಪಚುನಾವಣಾ ಆಯುಕ್ತ ಸಂದೀಪ್ ಸಕ್ಸೇನಾ ತಿಳಿಸಿದರು.

ದೂರು ಸ್ವೀಕಾರ ಮತ್ತಿತರ ವ್ಯವಸ್ಥೆಗಳಿಗೆ ಏಕಗವಾಕ್ಷಿ ಪದ್ಧತಿ ಅಳವಡಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಚುನಾವಣಾ ಪ್ರಚಾರಕ್ಕೂ ಮೊದಲು ಅನುಮತಿ ಪಡೆಯಬೇಕು, ನಿಗದಿತ ಸಮಯದಲ್ಲಿ ಪ್ರಚಾರ ಮುಗಿಸುವುದು ಎಲ್ಲದಕ್ಕೂ ಅನುಮತಿ ಕಡ್ಡಾಯ ಎಂದು ಹೇಳಿದರು.  ಚುನಾವಣಾ ಆಯೋಗದ ಮಹಾ ನಿರ್ದೇಶಕ ದಿಲೀಪ್ ಶರ್ಮಾ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗೆ 28 ಲಕ್ಷ ನಿಗದಿ ಮಾಡಲಾಗಿದ್ದು, ಇದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಸ್ಪಷ್ಟನೆ ನೀಡಬೇಕು. ಅಭ್ಯರ್ಥಿಗಳು ಪ್ರತಿಯೊಂದಕ್ಕೂ ಲೆಕ್ಕ ಕೊಡಬೇಕು, ಬ್ಯಾನರ್,ಫ್ಲೆಕ್ಸ್ ಇಲ್ಲವೆ ಜಾಹೀರಾತಿನ ಬಗ್ಗೆ ಮಾಹಿತಿ ನೀಡಬೇಕು. ಆದಾಯ ತೆರಿಗೆ ಇಲಾಖೆ ಪ್ರತಿಯೊಂದರ ಮೇಲೂ ನಿಗಾ ಇಟ್ಟಿರುತ್ತದೆ.  ಕಳೆದ ಬಾರಿ ಪ್ರತಿ ಕ್ಷೇತ್ರಕ್ಕೆ 60 ಲಕ್ಷ ವೆಚ್ಚ ಮಾಡಿದ್ದ ಆಯೋಗ, ಈ ಬಾರಿ ಪ್ರತಿ ಕ್ಷೇತ್ರದಲ್ಲಿ ಅಂದಾಜು 80 ರಿಂದ 90 ಲಕ್ಷ ವೆಚ್ಚ ಮಾಡಲಿದೆ ಎಂದು ವಿವರಿಸಿದರು.

Facebook Comments

Sri Raghav

Admin