ಬಿಜೆಪಿ ಪರ ಕೆಲಸ ಮಾಡಲು 5 ರಾಜ್ಯಗಳಿಂದ ಆಗಮಿಸಿದ 40 ಮಂದಿ ಪ್ರಧಾನ ಕಾರ್ಯದರ್ಶಿಗಳ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

BJP--01

ಬೆಂಗಳೂರು,ಜಿ.10- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಕೆಲಸ ನಿರ್ವಹಿಸಲು ಐದು ರಾಜ್ಯಗಳಿಂದ 40 ಮಂದಿ ಪ್ರಧಾನ ಕಾರ್ಯದರ್ಶಿಗಳ ತಂಡ ರಾಜ್ಯಕ್ಕೆ ಆಗಮಿಸಿದೆ. ಈ ತಂಡವು ವಿಧಾನಸಭೆ ಚುನಾವಣೆ ಮುಗಿಯುವವರೆಗೂ ರಾಜ್ಯದಲ್ಲೇ ಠಿಕಾಣಿ ಹೂಡಲಿದ್ದು , ಬಿಜೆಪಿ ಪರ ಸದ್ದಿಲ್ಲದೆ ಪ್ರಚಾರ ನಡೆಸಲಿದೆ.   ಗುಜರಾತ್, ಉತ್ತರಪ್ರದೇಶ, ಉತ್ತರಾಖಂಡ್, ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಸುಮಾರು 40 ಮಂದಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರಿಗೆ ಆಗಮಿಸಿ ಪಕ್ಷವು ವಹಿಸಿರುವ ಕೆಲಸವನ್ನು ಶಿರಸಾವಹಿಸಿ ಮಾಡಲಿದೆ.

ಈ ಹಿಂದೆ ಉತ್ತರಪ್ರದೇಶ, ಉತ್ತರಾಖಂಡ್, ಹಿಮಾಚಲಪ್ರದೇಶ ಸೇರಿದಂತೆ ಮತ್ತಿತರ ಕಡೆ ಬಿಜೆಪಿ ಪರ ಪ್ರಚಾರ ನಡೆಸಿದ ವೃತ್ತಿಪರ ತಂಡವನ್ನೇ ಬಿಜೆಪಿ ಚಾಣಾಕ್ಷ ಎನಿಸಿದ ಅಮಿತ್ ಷಾ ಕರ್ನಾಟಕಕ್ಕೂ ಕಳುಹಿಸಿಕೊಟ್ಟಿದ್ದಾರೆ.  ಈ ತಂಡವು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಕೆಲಸ ನಿರ್ವಹಿಸಲಿದೆ. ಅಭ್ಯರ್ಥಿಗಳ ಪರ ಪ್ರಚಾರ, ಪಕ್ಷದ ಸಾಧನೆಗಳು, ಎದುರಾಳಿ ಅಭ್ಯರ್ಥಿಯ ದೌರ್ಬಲ್ಯ, ಪ್ರಚಾರ ಶೈಲಿ ಇತ್ಯಾದಿಗಳ ಬಗ್ಗೆ ಕಾಲ ಕಾಲಕ್ಕೆ ಸಲಹೆ ಮಾಡಲಿದೆ.

ಅಮಿತ್ ಷಾ ಅವರ ಜೊತೆ ನಿಕಟಸಂಪರ್ಕ ಸಾಧಿಸಿರುವ ಈ ತಂಡವು ಇಂತಿಂಥ ಕ್ಷೇತ್ರಗಳಿಗೆ ಇವರೇ ಅಭ್ಯರ್ಥಿಗಳಾಗಬೇಕು ಎಂಬುದನ್ನು ವರಿಷ್ಠರಿಗೆ ಶಿಫಾರಸ್ಸು ಮಾಡಲಿದೆ. 40 ಮಂದಿ ತಂಡ ರಾಜ್ಯದ ನಾನಾ ಕಡೆ ಪ್ರವಾಸ ಮಾಡಿ ಪಕ್ಷದ ಸಂಘಟನೆ ಯಾವ ಯಾವ ಭಾಗದಲ್ಲಿ ಕೊರತೆ ಇದೆ ಎಂಬುದನ್ನು ಪತ್ತೆಹಚ್ಚಲಿದೆ. ಪ್ರಧಾನಿ ಮೋದಿ ಅವರ ಪ್ರಚಾರದಿಂದ ಪಕ್ಷಕ್ಕೆ ಯಾವ ಕಡೆ ಲಾಭವಾಗಲಿದೆ ಎಂಬುದನ್ನು ವರದಿ ರೂಪದಲ್ಲಿ ವರಿಷ್ಠರಿಗೆ ನೀಡಲಿದೆ.
ಕಳೆದ ವಾರವೇ ರಾಜ್ಯಕ್ಕೆ ಆಗಮಿಸಿರುವ ಈ ತಂಡ ಉತ್ತರ, ದಕ್ಷಿಣ , ಮಧ್ಯ ಕರಾವಳಿ ಭಾಗಗಳಲ್ಲಿ ಹತ್ತು ಮಂದಿಗಳಂತೆ ನಾಲ್ಕು ತಂಡವಾಗಿ ಅಖಾಡಕ್ಕಿಳಿದಿದೆ. ಇವರು ನೀಡುವ ವರದಿ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ.

Facebook Comments

Sri Raghav

Admin