ಜ.27ರಂದು ಕರ್ನಾಟಕ ಬಂದ್‍..!

Vatal--01

ಬೆಂಗಳೂರು,ಜ.10- ಕಳಸಾ- ಬಂಡೂರಿ ಮತ್ತು ಮಹದಾಯಿ ಹೋರಾಟವನ್ನು ತೀವ್ರಗೊಳಿಸಲು ಕನ್ನಡ ಒಕ್ಕೂಟ ನಿರ್ಧರಿಸಿದೆ. ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಉತ್ತರ ಕರ್ನಾಟಕ ಭಾಗದ ರೈತ ಮುಖಂಡರ ನೇತೃತ್ವದಲ್ಲಿ ಇಂದು ಸಭೆ ನಡೆಸಿ ಕಳಸಾಬಂಡೂರಿ, ಮಹದಾಯಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಿವೆ.

ವಾಟಾಳ್ ನಾಗರಾಜ್ ಮಾತನಾಡಿ, ತಾರ್ಕಿಕ ಅಂತ್ಯ ಕಾಣುವವರೆಗೆ ನಾವು ಹೋರಾಟವನ್ನು ಕೈಬಿಡುವುದಿಲ್ಲ. ಅಗತ್ಯಬಿದ್ದರೆ ಮತ್ತೊಮ್ಮೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದರು. ಈ ಯೋಜನೆ ಜಾರಿಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು. 900 ದಿನಗಳ ಕಾಲ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದರೂ ರಾಜ್ಯದ ಯಾವೊಬ್ಬ ಸಂಸದರು ಸಂಸತ್‍ನಲ್ಲಿ ದನಿ ಎತ್ತಲಿಲ್ಲ. ಬಿಜೆಪಿ ಸಂಸದರೂ ಪ್ರಧಾನಿ ಮನವೊಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜಕೀಯ ಪಕ್ಷಗಳು ಬೃಹತ್ ನಾಟಕವಾಡುತ್ತಿವೆ. ಇದೆಲ್ಲದರಿಂದ ರಾಜ್ಯದ ಜನರಿಗೆ ಮೋಸವಾಗು ತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲ ವಾಗಿದೆ. ಬಯಲು ಸೀಮೆಗೆ ಕುಡಿಯುವ ನೀರು ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರಗಳು ಚುನಾವಣೆಯ ಗುಂಗಿನಲ್ಲಿವೆ. ಇವರಿಗೆ ತಕ್ಕ ಪಾಠ ಕಲಿಸಬೇಕು. ಇದಕ್ಕಾಗಿ ಕನ್ನಡ ಒಕ್ಕೂಟ ಮತ್ತೆ ಬೀದಿಗಿಳಿಯಲಿದೆ ಎಂದು ತಿಳಿಸಿದರು. ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುವುದರೊಳಗೆ ಮಹದಾಯಿ ಯೋಜನೆ ಬಗ್ಗೆ ಸ್ಪಷ್ಟನಿಲುವು ತಳೆಯಬೇಕು ಇಲ್ಲದಿದ್ದರೆ ಜ.27ರಂದು ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂದು ಹೇಳಿದರು. ಇನ್ನು ಒಂದು ತಿಂಗಳಲ್ಲಿ ಕಾವೇರಿಯ ಅಂತಿಮ ತೀರ್ಪು ಹೊರಬೀಳಲಿದ್ದು , ಏನಾಗಲಿದೆ ಎಂಬ ಆತಂಕ ಎದುರಾಗಿದೆ. ನೀರು ನಿರ್ವಾಹಣಾ ಮಂಡಳಿ ಏನಾದರೂ ರಚನೆಯಾದರೆ ನಮ್ಮ ಅಣೆಕಟ್ಟುಗಳು ಕೇಂದ್ರದ ವಶವಾಗುತ್ತದೆ ಎಂದು ವಾಟಾಳ್ ಆತಂಕ ವ್ಯಕ್ತಪಡಿಸಿದರು. ಸಾ.ರಾ.ಗೋವಿಂದ್, ಕುಮಾರ್, ಗಿರೀಶ್ ಗೌಡ, ರೈತ ಮುಖಂಡ ಹೆಬಸೂರು ಪ್ರವೀಣ್ ಶೆಟ್ಟಿ , ಶಿವರಾಮೇಗೌಡ ಮುಂತಾದವರು ಭಾಗವಹಿಸಿದ್ದರು.

Facebook Comments

Sri Raghav

Admin