ಸಿಎಂ ಆದ ನಂತರ ಮೊದಲ ಬಾರಿಗೆ ಕೊಳ್ಳೇಗಾಲಕ್ಕೆ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramiah--01

ಕೊಳ್ಳೇಗಾಲ, ಜ.10- ಸಿಎಂ ಆದ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣಕ್ಕೆ ಆಗಮಿಸಿದ್ದರಿಂದ ಜನತೆ ಸಂತಸ ಸಂಭ್ರಮದಿಂದ ಬರಮಾಡಿಕೊಂಡರು. ಶಾಪಗ್ರಸ್ಥವೆಂದೇ ಬಿಂಬಿತವಾಗಿದ್ದ ಚಾಮರಾಜನಗರಕ್ಕೆ ಸಿದ್ದರಾಮಯ್ಯ ಬಹಳಷ್ಟು ಸಾರಿ ಭೇಟಿ ನೀಡಿದ್ದರೂ ಕೊಳ್ಳೇಗಾಲಕ್ಕೆ ಮಾತ್ರ ಬಂದಿರಲಿಲ್ಲ. ಇಂದು ಪಟ್ಟಣಕ್ಕೆ ಬಂದು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದರಿಂದ ಪಟ್ಟಣದ ಜನತೆ ಅಭಿವೃದ್ಧಿಯ ಕನಸನ್ನು ಕಾಣುತ್ತಿದ್ದಾರೆ.

ಚಾಮರಾಜ ನಗರದಲ್ಲಿಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿ ನಂತರ ಪಟ್ಟಣಕ್ಕೆ ಆಗಮಿಸಿದರು. ಕಳೆದ 20 ವರ್ಷಗಳಿಂದ ಅತಂತ್ರವಾಗಿದ್ದ ಪಟ್ಟಣದ ಬಸ್ ನಿಲ್ದಾಣ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಗರಸಭೆ ನೂತನ ಕಟ್ಟಡ ಉದ್ಘಾಟನೆ ಮಾಡಿ ಸರ್ಕಿಟನ್ ಚಾನಲ್(ನಾಲೆ) ಅಭಿವೃದ್ಧಿ ಸೇರಿದಂತೆ ಸುಮಾರು 197 ಕೋಟಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದರು.

ಮಧ್ಯಾಹ್ನ ನಂತರ ಪಟ್ಟಣದ ಎಂಜಿಎಸ್‍ವಿ ಕಾಲೇಜು ಮೈದಾನ ದಲ್ಲಿ ಏರ್ಪಡಿಸಿದ ಭಾರೀ ಬಹಿರಂಗ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿ, ಅಭಿವೃದ್ಧಿಯ ಅಶ್ವಾಸನೆ ಗಳನ್ನು ನೀಡಿದರು. ಇಲ್ಲಿಗೆ ಸಮೀಪದ ಸಿದ್ದಯ್ಯನ ಪುರದಲ್ಲಿ ಕನಕಭವನ ಲೋಕಾರ್ಪಣೆ ಮಾಡಿ ಅಲ್ಲಿಂದ ಹನೂರಿಗೆ ತೆರಳಿದರು. ಇಲ್ಲಿ ಹಮ್ಮಿಕೊಂಡಿದ್ದ ಸಾಧನ ಸಮಾವೇಶದಲ್ಲಿ ಜನರ ಬಹು ವರ್ಷಗಳ ಬೇಡಿಕೆಯಾದ ಹನೂರು ತಾಲೂಕು ಘೋಷಣೆಯನ್ನು ಸಿಎಂ ಮಾಡಿದರು. ಕಾರ್ಯಕ್ರಮ ಮುಗಿಸಿಕೊಂಡು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ಸನ್ನಿಧಿಯಲ್ಲಿ ಸಿಎಂ ವಾಸ್ತವ್ಯ ಹೂಡಿದರು.
ಈ ವೇಳೆ ಸಚಿವರಾದ ಎಚ್.ಸಿ. ಮಹದೇವಪ್ಪ, ಎಚ್.ಎಂ. ರೇವಣ್ಣ , ಎಂ.ಬಿ. ಪಾಟೀಲ್, ಎಚ್. ಆಂಜನೇಯ, ಗೀತಾ ಮಹದೇವಪ್ಪ ಪ್ರಸಾದ್, ಸಂಸದ ಧೃವನಾರಾಯಣ್, ಶಾಸಕರಾದ ಜಯಣ್ಣ, ಪುಟ್ಟರಂಗಶೆಟ್ಟಿ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin