ಸಿದ್ದರಾಮಯ್ಯ ಮತ್ತು ಸಚಿವರು ಕೇಂದ್ರದ ಅನುದಾನವನ್ನು ನುಂಗಿ ನೀರು ಕುಡಿದಿದ್ದಾರೆ : ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah

ಹೊಳಲ್ಕೆರೆ,ಜ.10-ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಅನುದಾನ ಸೇರಿದಂತೆ ರಾಜ್ಯದ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರು ನುಂಗಿ ನೀರು ಕುಡಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಷಾ ಗಂಭೀರ ಆರೋಪ ಮಾಡಿದ್ದಾರೆ. 13ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 88,583 ಕೋಟಿ, 14ನೇ ಆಯೋಗದಲ್ಲಿ 88585 ಸೇರಿದಂತೆ ಒಟ್ಟು 2 ಲಕ್ಷ 19 ಕೋಟಿ ರೂ. ಜೊತೆಗೆ ಬೇರೆ ಬೆರೆ ಯೋಜನೆಗಳು ಸೇರಿದಂತೆ ಒಟ್ಟು ಮೂರು ಲಕ್ಷ ಕೋಟಿ ಅನುದಾನವನ್ನು ನೀಡಲಾಗಿದೆ.  ಈ ಹಣವನ್ನು ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸಚಿವರು ಕೊಳ್ಳೆ ಹೊಡೆದಿದ್ದಾರೆ ಎಂದು ದೂರಿದರು.

ಹೊಳಲ್ಕೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮತನಾಡಿದ ಅಮಿತ್ ಷಾ, ತಮ್ಮ ಮಾತಿನುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.  ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳ ಮೂಅಲಕ ಹಿಂದೆಂದೂ ನೀಡದಷ್ಟು ಅನುದಾನ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಲೆಕ್ಕ ಕೇಳುತ್ತಾರೆ. ಮೊದಲು ಅವರಿಗೆ ಕೇಂದ್ರದ ಅನುದಾನ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ನೀವು ಪ್ರಶ್ನೆ ಮಾಡಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.  ಅಂಕಿಅಂಶಗಳ ಮೂಲಕವೇ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಷಾ, ಕಳೆದ 5 ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸಚಿವರು ಭ್ರಷ್ಟಾಚಾರದಲ್ಲೇ ನಿರತರಾಗಿದ್ದಾರೆ. ಇಂಥ ಕೆಟ್ಟ ಸರ್ಕಾರ ಇರಲೇ ಬಾರದು ಎಂದು ಹರಿಹಾಯ್ದರು.

70 ಲಕ್ಷ ಗಡಿಯಾರ ಕೊಟ್ಟಿದ್ದಾರ?:

ಯಾರಾದರೂ 70 ಲಕ್ಷ ರೂ. ಬೆಲೆ ಬಾಳುವ ಕೈಗಡಿಯಾರವನ್ನು ನಿಮಗೆ ಕೊಟ್ಟಿದ್ದಾರೆಯೇ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಶಾ, ಯಾರಿಗೂ ಕೊಡದಿದ್ದರೂ ಚಿಂತೆಯಿಲ್ಲ. ಸಿದ್ದರಾಮಯ್ಯನವರಿಗೆ 70 ಲಕ್ಷ ರೂ. ಬೆಲೆಬಾಳುವ ಓಬ್ಲೋಟ್ ವಾಚ್ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.  ಜನಸಾಮಾನ್ಯರು ಜೀವನ ನಿರ್ವಹಣೆ ಮಾಡಲು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅಭಿವೃದ್ದಿಗಾಗಿ ಅನದಾನ ನೀಡಿದರೆ ನೀವು ಆ ಹಣವನ್ನು ಉದ್ಯಮಿಗಳಿಗೆ ಕೊಡುತ್ತೀರಿ ಇದಕ್ಕೆ ಪ್ರತಿಕಾರವಾಗಿ ಅವರು 70 ಲಕ್ಷ ಬೆಲೆಯ ವಾಚ್ ಉಡುಗೊರೆಯಾಗಿ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.

ಬೆಂಗಳೂರಿನ ಅರ್ಕಾವತಿ ಲೇಔಟ್‍ನಲ್ಲಿ ಸಿಎಂ ಭ್ರಷ್ಟಾಚಾರ ನಡೆಸಿ ಹೈಕಮಾಂಡ್‍ಗೆ ನೂರಾರು ಕೋಟಿ ಕಪ್ಪ ಕಾಣಿಕೆ ನೀಡಿದ್ದಾರೆ. ಇದನ್ನು ತನಿಖೆ ನಡೆಸಲು ಕೆಂಪಯ್ಯ ಆಯೋಗ ವರದಿ ನೀಡಿ ತಿಂಗಳು ಕಳೆದರೂ ಮಂಡನೆ ಮಾಡಲು ಅಡ್ಡಿಯಾಗಲು ಏನು ಎಂದು ಪ್ರಶ್ನಿಸಿದರು.  ನಮ್ಮದು ಪಾರದರ್ಶಕ ಮತ್ತು  ಭ್ರಷ್ಟಚಾರ ಮುಕ್ತ ಸರ್ಕಾರ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಗ್ರಂಥಾಲಯ ಮೇಲ್ವಿಚಾರಕರ ಸಂಬಳ ಹೆಚ್ಚಳಕ್ಕೆ ಮೂರು ಲಕ್ಷ ಲಂಚ ಕೊಡಬೇಕು. ಸಚಿವ ಆಂಜನೇಯ ಅವರ ಪತ್ನಿ 7 ಲಕ್ಷ ಹಣ ಪಡೆಯುವಾಗ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದರೂ ಏನೂ ಮಾಡಲು ಆಗಲಿಲ್ಲ.

ಸಚಿವರಾದ ಸಂತೋಷ್ ಲಾಡ್, ರಮೇಶ್ ಜಾರಕಿ ಹೊಳಿ, ಡಿ.ಕೆ.ಶಿವಕುಮಾರ್ ಮನೆಗಳ ಮೇಲೆ ಐಟಿ ದಾಳಿ ಮಾಡಿದೆ. ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಮನೆಯಲ್ಲಿ ಸಿಕ್ಕ ಡೈರಿ ಓದಲು ಕನಿಷ್ಟ ಒಂದು ವಾರ ಬೇಕು. ಇದು ಪಾರದರ್ಶಕ ಸರ್ಕಾರವೇ ಎಂದು ಪ್ರಶ್ನೆ ಮಾಡಿದರು.  ಸೋಲಾರ್ ಯೋಜನೆಯಲ್ಲಿ 300 ಕೋಟಿ ಭ್ರಷ್ಟಾಚಾರ ನಡೆದಿದೆ. ನಾವು ಈ ಸರ್ಕಾರದ ಭ್ರಷ್ಟಾಚಾರವನ್ನು ಹೇಳಲು ಮುಂದಾದರೆ ಒಂದು ವಾರ ಭಗವದ್ಗೀತೆ ಓದಿದ ಹಾಗೆ ಹೇಳಬಹುದು. ನನ್ನ ಬಳಿ ಅಷ್ಟು ದಾಖಲೆಗಳಿವೆ. ಒಂದು ಕ್ಷಣವೂ ಕೂಡ ಆಡಳಿತದಲ್ಲಿ ಮುಂದುವರೆಯಲು ಈ ಸರ್ಕಾರ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಹರಿಹಾಯ್ದರು.

ನಮ್ಮದು ಅಹಿಂದ ಸರ್ಕಾರ ಎಂದು ಸಿದ್ದರಾಮಯ್ಯ ಎದೆತಟ್ಟಿ ಹೇಳಿಕೊಳ್ಳುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಶಾಶ್ವತ ಸ್ಥಾನಮಾನ ನೀಡುವ ಕಾಯ್ದೆಗೆ ತಿದ್ದುಪಡಿ ಮಾಡಿ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ರಾಜ್ಯ ಸಭೆಯಲ್ಲಿ ದುರದ್ದೇಶಪೂರ್ವಕವಾಗಿಯೇ ಇದಕ್ಕೆ ಅಡ್ಡಿಪಡಿಸಲಾಗಿದೆ. ಹಿಂದುಳಿದವರ ಬಗ್ಗೆ ನಿಮಗೆ ನಿಜವಾದ ಕಳಕಳಿ ಇದ್ದಲ್ಲಿ ಮೊದಲು ಈ ಕಾಯ್ದೆಗೆ ಬೆಂಬಲ ನೀಡಿ ಎಂದು ಅವರು ಅಮಿತ್ ಷಾ ಸವಾಲು ಹಾಕಿದರು.   ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದ 21 ಹಿಂದುಗಳ ಹತ್ಯೆಯಾಗಿದೆ. ಅವರು ಯಾವ ತಪ್ಪಿಗಾಗಿ ಪ್ರಾಣ ಕಳೆದುಕೊಂಡರು. ಕಡೆಪಕ್ಷ ಇದರ ಬಗ್ಗೆ ತನಿಖೆಯನ್ನೂ ಕೂಡ ಮಾಡಲಿಲ್ಲ. ತನಿಖೆ ಮಾಡಿದರೆ ನಿರ್ದಿಷ್ಟ ಸಮುದಾಯದವರು ಸಿಕ್ಕಿ ಬೀಳಬಹುದೆಂಬ ಭಯದಿಂದ ಮುಚ್ಚಿಹಾಕಲಾಗಿದೆ.

ಇದು ವೋಟ್ ಬ್ಯಾಂಕ್ ರಾಜಕಾರಣವಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ದಯಮಾಡಿ ಹಿಂದುಗಳ ಹತ್ಯೆಗೆ ಕುಮ್ಮಕ್ಕು ನೀಡಬೇಡಿ. ಇಲ್ಲದಿದ್ದರೆ ಇನ್ನು 4 ತಿಂಗಳಲ್ಲೇ ನಿಮ್ಮನ್ನು ಶಾಶ್ವತವಾಗಿ ಕರ್ನಾಟಕದ ಜನ ಮನೆಗೆ ಕಳುಹಿಸುತ್ತಾರೆ. ಸಮಾಜದಲ್ಲಿ ಸಮಾನತೆ ಮೂಡಿಸದ ಈ ಸರ್ಕಾರ ಇದ್ದರೂ ಒಂದೇ. ಇಲ್ಲದಿದ್ದರೂ ಒಂದೇ ಎಂದು ಕುಹುಕವಾಡಿದರು.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕರ್ನಾಟಕವನ್ನು ಕಾಂಗ್ರೆಸ್‍ನಿಂದ ಮುಕ್ತಗೊಳಿಸಿದರೆ ಮಾತ್ರ ಕಾಂಗ್ರೆಸ್ ಮುಕ್ತ ಭಾರತವಾಗಲು ಸಾಧ್ಯ. ರಾಜ್ಯದ ಜನತೆ ಸಿದ್ದರಾಮಯ್ಯನವರನ್ನು ಮನೆಗೆ ಕಳುಹಿಸಲು ಸಿದ್ದವಾಗಿ ನಿಂತಿದ್ದಾರೆ ಎಂದು ಹೇಳಿದರು.

ಇಂಥ ಕೆಟ್ಟ ಸರ್ಕಾರವನ್ನು ನೋಡಲೇ ಇಲ್ಲ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ಆದರೂ ನಮ್ಮದು ಪಾರದರ್ಶಕ ಸರ್ಕಾರ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. 4 ತಿಂಗಳ ಸಮಯ ಕೊಡಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬಿಎಸ್‍ವೈ ವಾಗ್ದಾನ ಮಾಡಿದರು.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಭದ್ರ ಮೇಲ್ದಂಡೆ ಕುಡಿಯುವ ನೀರಿನ ಯೋಜನೆಯನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಗೆಹರಿಸುತ್ತೇನೆ. ಜನತೆಗೆ ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಭರವಸೆ ನೀಡಿದರು.  ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್, ಪ್ರಕಾಶ್ ಜಾವ್ಡೇಕರ್, ಜಗದೀಶ್ ಶೆಟ್ಟರ್, ಶ್ರೀರಾಮುಲು ಸೇರಿದಂತೆ ಮುಂತಾದವರು ಇದ್ದರು.

Facebook Comments

Sri Raghav

Admin