ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಮಲೆ ಮಹದೇಶ್ವರ ಬೆಟ್ಟ, ಜ.11- ಆರ್‍ಎಸ್‍ಎಸ್, ಬಿಜೆಪಿಯವರು ಉಗ್ರವಾದಿಗಳು ಎಂದು ನಾನು ಹೇಳಿಲ್ಲ. ಹಿಂದುತ್ವದ ಉಗ್ರವಾದಿಗಳೆಂದು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯು ಟರ್ನ್ ಹೊಡೆದಿದ್ದಾರೆ. ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್, ಬಿಜೆಪಿಯವರು ಉಗ್ರವಾದಿಗಳೆಂದು ಹೇಳಿಲ್ಲ. ಹಿಂದುತ್ವವನ್ನು ಉಗ್ರವಾಗಿ ಪ್ರತಿಪಾದಿಸುತ್ತಾರೆ. ಯಾರೇ ಆಗಲಿ ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದೇನೆಂದು ಹೇಳಿದ್ದಾರೆ.

ನಿನ್ನೆ ಚಾಮರಾಜನಗರದಲ್ಲಿ ಆರ್‍ಎಸ್‍ಎಸ್, ಬಿಜೆಪಿಯವರು ಕೂಡ ಉಗ್ರಗಾಮಿಗಳು ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಇಂದು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ನಾನು ಹಾಗೆ ಹೇಳಿಲ್ಲ. ಅವರು ಹಿಂದುತ್ವವನ್ನು ಉಗ್ರವಾಗಿ ಪ್ರತಿಪಾದಿಸುತ್ತಾರೆಂದು ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಸರ್ಕಾರದ ಸಾಧನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದೇವೆಯೇ ಹೊರತು ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ ಎಂದು ವಿರೋಧ ಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದರು.

ರಾಜ್ಯ ಸರ್ಕಾರ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಕ್ಷೇತ್ರದಲ್ಲಿ ಶಾಸಕರು ಹತ್ತು-ಹಲವು ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನೆ ಕಾರ್ಯಕ್ರಮಗಳನ್ನು ಶಾಸಕರ ಸಮ್ಮುಖದಲ್ಲೇ ನೆರವೇರಿಸುತ್ತಿದ್ದೇವೆ. ಇದು ಪಕ್ಷದ ಕಾರ್ಯಕ್ರಮವಲ್ಲ, ಸರ್ಕಾರದ ಕಾರ್ಯಕ್ರಮ ಎಂದು ಸ್ಪಷ್ಟನೆ ನೀಡಿದರು. ಮಾರ್ಚ್‍ನಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುವೆ ಎಂದು ಅವರು ಹೇಳಿದರು. ಪಕ್ಷದ ಪ್ರಚಾರಕ್ಕೆ ಸರ್ಕಾರದ ಹಣವನ್ನು ಬಳಸುತ್ತಿಲ್ಲ. ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಲು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಇದಕ್ಕೆ ಅವಕಾಶವಿದೆ. ಅದನ್ನು ನಾವು ಬಳಸಿಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಚಾಮುಂಡೇಶ್ವರಿ, ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದಲ್ಲಿ ಮತ್ತೆ ನಾವು ಗೆಲ್ಲುತ್ತೇವೆ. ವಿ.ಸೋಮಣ್ಣ ಅವರು ರಾಜಕೀಯದಲ್ಲಿ ನಿವೃತ್ತಿ ಹೊಂದುವುದು ಬೇಡ. ಅವರು ಮುಂದುವರಿಯಲಿ ಎಂದು ಹೇಳಿದರು. ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಕಹಿ ಉಣಿಸಿದ್ದೇನೆ. ವಿಧಾನಸಭೆ ಚುನಾವಣೆಯಲ್ಲೂ ಸೋಲಿನ ರುಚಿ ತೋರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಗೀತಾ ಮಹದೇವ ಪ್ರಸಾದ್, ಸಂಸದ ಆರ್.ಧೃವನಾರಾಯಣ್, ಶಾಸಕ ಆರ್.ನರೇಂದ್ರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin