ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಕುರಿತು ಸುಪ್ರೀಂನಿಂದ ಯಾವುದೇ ನೋಟೀಸ್ ಬಂದಿಲ್ಲ : ರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--02

ಬೆಂಗಳೂರು, ಜ.11-ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಿಂದ ನಮಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟಿಸ್ ಬಂದ ನಂತರ ಉತ್ತರ ನೀಡುತ್ತೇವೆ. ಕಲಬುರ್ಗಿ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಗೃಹ ಇಲಾಖೆ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಅದೇ ರೀತಿ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಕೇಸ್ ಕೂಡ ತನಿಖೆ ನಡೆಯುತ್ತಿದ್ದು, ಹಂತಕರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಜನರಲ್ಲಿ ಭಯದ ವಾತಾವರಣ ಹುಟ್ಟಿಸುವುದು ಭಯೋತ್ಪಾದಕರು. ಬಿಜೆಪಿ ಮತ್ತು ಆರ್‍ಎಸ್‍ಎಸ್ ನವರು ಜನರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿದ್ದಾರೆ ಎಂದ ರಾಮಲಿಂಗಾರೆಡ್ಡಿ, ಇದ್ದುದನ್ನು ಇದ್ದ ಹಾಗೆ ಹೇಳಿದರೆ ಬಿಜೆಪಿಯವರಿಗೇಕೆ ಕೋಪ ಎಂದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಕಾನೂನು ಚೌಕಟ್ಟನ್ನು ಮೀರಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಆರ್‍ಎಸ್‍ಎಸ್ ಹಾಗೂ ಭಜರಂಗದಳ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷಮೆ ಕೇಳುವ ಅಗತ್ಯವಿಲ್ಲ. ನಿನ್ನೆ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮುಖ್ಯಮಂತ್ರಿಯವರ ವಾಚ್ ಪ್ರಕರಣ ಪ್ರಸ್ತಾಪಿಸಿದ್ದಾರೆ. ಆದರೆ 20 ಲಕ್ಷ ರೂ. ಸೂಟ್ ಧರಿಸುತ್ತಾರೆ. ಈ ಬಗ್ಗೆ ಅವರು ಮಾತನಾಡಲಿ. ಆಮೇಲೆ ವಾಚ್ ಪ್ರಕರಣದ ಬಗ್ಗೆ ಮಾತನಾಡಲಿ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯವರು ಸ್ನೇಹಿತರಿಂದ ವಾಚನ್ನು ಗಿಫ್ಟ್ ತೆಗೆದುಕೊಂಡಿರುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡ ಗೃಹ ಸಚಿವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 3ಲಕ್ಷ ಕೋಟಿ ಅನುದಾನ ಬಂದಿದ್ದು, ಅದರ ಲೆಕ್ಕ ಕೊಡುವಂತೆ ಕೇಳಲು ಅಮಿತ್ ಷಾ ಯಾರು ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣ ನೀಡುತ್ತಿದೆಯಷ್ಟೆ, ನಮ್ಮ ಹಣ ನಮಗೆ ಕೊಡುತ್ತಿದ್ದಾರೆ. ಅಮಿತ್ ಷಾ ಅವರ ರಾಜ್ಯದ ಜನರನ್ನು ಕೊಂಡುಕೊಳ್ಳುತ್ತೀವಿ ಎಂದು ಭಾವಿಸಿದ್ದರೆ ಅದು ತಪ್ಪು. ಮುಂದಿನ ದಿನಗಳಲ್ಲಿ ರಾಜ್ಯದ ಜನ ಅವರಿಗೆ ಬುದ್ಧಿ ಕಲಿಸಲಿದ್ದಾರೆ. ಮೋದಿಯವರು ವಿದೇಶಿ ಪ್ರವಾಸ ಕೈಗೊಂಡಂತೆ ಮುಖ್ಯಮಂತ್ರಿ ಕೂಡ ಪ್ರವಾಸ ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡುವುದೇನಿದೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.

Facebook Comments

Sri Raghav

Admin