ಎಲ್‍ಟಿಟಿಇ ಉಗ್ರರರಿಗೆ ತರಬೇತಿ ಕೊಟ್ಟಿದ್ದೆ ಕಾಂಗ್ರೆಸ್ : ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

shobha

ಬೆಂಗಳೂರು,ಜ.11- ಶ್ರೀಲಂಕಾದ ಎಲ್‍ಟಿಟಿಇ ಉಗ್ರರರಿಗೆ ತರಬೇತಿ ನೀಡಿ ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಲು ಕಾಂಗ್ರೆಸ್ಸೇ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.   ಎಲ್‍ಟಿಟಿಇ ಉಗ್ರರರಿಗೆ ಕುಮ್ಮಕ್ಕು ನೀಡಿದ ಪರಿಣಾಮವೇ ಕಾಂಗ್ರೆಸ್‍ನ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್‍ಗಾಂಧಿ ಅವರನ್ನು ಕಳೆದುಕೊಳ್ಳಬೇಕಾಯಿತು. ಅವರು ಮಾಡಿದ ಪಾಪ ಅವರನ್ನೇ ಸುತ್ತಿಕೊಂಡಿತು ಎಂದು ಶೋಭಾ ಕಿಡಿಕಾರಿದರು.   ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ಅವರ ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ಉಗ್ರಗಾಮಿಗಳು ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಲ್ಲದೆ ತಮ್ಮ ಮಾತಿನುದ್ದಕ್ಕೂ ಕೆಲವು ನಿದರ್ಶನಗಳನ್ನು ನೀಡಿದರು.  ಕಳೆದ 60 ವರ್ಷಗಳಿಂದ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಆರ್‍ಎಸ್‍ಎಸ್ ಹಾಗೂ ಸಂಘಪರಿವಾರವನ್ನು ಗುರಿಯಾಗಿಟ್ಟುಕೊಂಡು ನಿರಂತರವಾಗಿ ದಾಳಿ ಮಾಡುತ್ತಲೇ ಬಂದಿದೆ. ನೆಹರು ಕಾಲದಲ್ಲೇ ಆರ್‍ಎಸ್‍ಎಸ್ ನಿಷೇಧ ಮಾಡಲು ಸಾದ್ಯವಿಲ್ಲದ್ದು ಸಿದ್ದರಾಮಯ್ಯನವರ ಕೈಯಿಂದ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಪಂಜಾಬ್‍ನಲ್ಲಿ ಪ್ರತ್ಯೇಕ ಖಲೀಸ್ತಾನ್ ರಾಷ್ಟ್ರಕ್ಕೆ ಬೇಡಿಕೆ ಇಟ್ಟಿದ್ದ ಬಿಂದ್ರನ್ ವಾಲ ಎಂಬ ಉಗ್ರನನ್ನು ಬೆಳೆಸಿದ್ದೇ ಕಾಂಗ್ರೆಸ್. ಇದರ ಪರಿಣಾಮ ಪಂಜಾಬ್ ಹೊತ್ತಿ ಉರಿಯುವಂತಾಯಿತು. ಅಧಿಕಾರಕ್ಕಾಗಿ ದೇಶವನ್ನು ಬಲಿ ಕೊಟ್ಟರೆ ಅವರಿಗೆ ಸುತ್ತಿಕೊಳ್ಳುತ್ತದೆ ಎಂಬುದನ್ನು ಇತಿಹಾಸದಿಂದ ಸಿದ್ದರಾಮಯ್ಯ ಕಲಿಯಬೇಕೆಂದು ಹೇಳಿದರು.

ಬಿಂದ್ರನ್ ವಾಲ ಬೆಳೆಸಿದ ಪರಿಣಾಮವೇ ಇಂದಿರಾಗಾಂಧಿಗೆ ಉಗ್ರರು ಗುಂಡು ಇಟ್ಟು ಹೊಡೆದರು. ಇದೇ ರೀತಿ ಎಲ್‍ಟಿಟಿಇ ಬಗ್ಗೆ ರಾಜೀವ್ ಗಾಂಧಿ ಮೃದುಧೋರಣೆ ತೋರಿದ್ದರಿಂದ ಅವರನ್ನು ಕೂಡ ಹತ್ಯೆ ಮಾಡಲಾಯಿತು.  ಕಾಂಗ್ರೆಸ್ ದೇಶದ್ರೋಹಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಎಸ್‍ಡಿಪಿಐ, ಕೆಎಫ್‍ಡಿ, ಪಿಎಫ್‍ಐನಂತಹ ಸಂಘಟನೆಗಳನ್ನು ನಿಷೇಧಿಸಲಿ ಎಂದು ಆಗ್ರಹಿಸಿದರು.   ಪಿಎಫ್‍ಐ ಮುಖಂಡರ ಮೇಲೆ ದಾಖಲಾಗಿದ್ದ ದೂರುಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯುವ ಮೂಲಕ ತುಷ್ಟೀಕರಣಕ್ಕೆ ಕುಮ್ಮಕ್ಕು ನೀಡಿತು. ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಸಂಘಟನೆಗೆ ಜಾಗವನ್ನು ನೀಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಅದರೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ಮಾಡಿದರು.
ನಾವು ಯಾವುದೇ ಮೂಲಭೂತ ಸಂಘಟನೆಗಳಂತೆ ಚೂರಿ, ಚಾಕು, ತಲ್ವಾರ್ ಹಿಡಿದು ಬೀದಿಗಿಳಿಯುವುದಿಲ್ಲ. ದೇಶದ ರಕ್ಷಣೆ ಹಾಗೂ ಸಂಸ್ಕøತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರ್‍ಎಸ್‍ಎಸ್ ಹಾಗೂ ಬಿಜೆಪಿಯವರನ್ನು ಭಯೋತ್ಪಾದಕರೆಂದು ಹೇಳಿದ್ದಾರೆ. ನಾವು ಅಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಇಲ್ಲದಿದ್ದರೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.   ಕಾಂಗ್ರೆಸ್ ಉಸ್ತುವಾರಿಯಾಗಿರುವ ವೇಣುಗೋಪಾಲ್ ಮೇಲೆ ಅತ್ಯಾಚಾರದ ಆರೋಪವಿದೆ. ಅವರು ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಕೇರಳದ ರಕ್ತ ರಾಜಕಾರಣ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.

Facebook Comments

Sri Raghav

Admin