ಕಾಂಗ್ರೆಸ್ ಸಚಿವರು ಹಾಗೂ ನಾಯಕರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ : ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--01

ಬೆಂಗಳೂರು,ಜ.11-ರಾಜ್ಯ ಸರ್ಕಾರದ ಪ್ರಮುಖ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ದೂರವಾಣಿ ಕದ್ದಾಲಿಕೆಯನ್ನು ಮಾಡಲಾಗುತ್ತಿದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಆರೋಪಿಸಿದರು.  ಮಾಜಿ ಪ್ರಧಾನಿ ದಿ.ಲಾಲ್‍ಬಹುದ್ದೂರ್ ಶಾಸ್ತ್ರಿ ಅವರ 52ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಉದ್ಯಾನವನದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ದೂರವಾಣಿ ಕದ್ದಾಲಿಕೆಯ ಬಗ್ಗೆ ಬಹಳ ಹಿಂದೆಯೇ ಹೇಳಿದ್ದೆ. ದೂರವಾಣಿ ಕದ್ದಾಲಿಕೆ ಯಾರು ಮಾಡುತ್ತಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದವರೇ ಮಾಡುತ್ತಿದ್ದಾರೆ. ಇನ್ಯಾರು ಮಾಡಲು ಸಾಧ್ಯ ಎಂದು ಮರುಪ್ರಶ್ನಿಸಿದರು. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೂರವಾಣಿ ಕದ್ದಾಲಿಕೆ ನಿರಂತರವಾಗಿ ನಡೆಯುತ್ತಿದೆ. ಕಾನೂನು ಪ್ರಕಾರ ಒಬ್ಬರ ದೂರವಾಣಿ ಕದ್ದಾಲಿಸುವುದು ತಪ್ಪು . ಇದನ್ನು ಸುಪ್ರೀಂಕೋರ್ಟ್ ಇಲ್ಲವೇ ರಾಜ್ಯ ಹೈಕೋರ್ಟ್‍ನಲ್ಲಿ ಸಂಬಂಧಪಟ್ಟವರು ಪ್ರಶ್ನಿಸಬೇಕಾಗುತ್ತದೆ ಎಂದರು.

ಚಿಕ್ಕಮಗಳೂರು ಜಿಲ್ಲೆ ಮೂಡಗೆರೆ ತಾಲ್ಲೂಕಿನ ಧನ್ಯಶ್ರೀ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಸಂತೋಷ್ ಎಂಬಾತನನ್ನು ಬಂಧಿಸಲಾಗಿದೆ. ನೈತಿಕ ಪೊಲೀಸ್‍ಗಿರಿ ಹೆಸರಿನಲ್ಲಿ ಬಿಜೆಪಿ  ಮೋರ್ಚಾ ದೌರ್ಜನ್ಯ ಎಸಗುತ್ತಿರುವ ಮಾಹಿತಿ ಇದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಹೆಚ್ಚಾಗಿ ನಡೆಯುತ್ತಿತ್ತು. ನಮ್ಮ ಸರ್ಕಾರ ಬಂದ ಮೇಲೆ ಕಡಿಮೆಯಾಗಿದೆ. ಆದರೂ ಅಲ್ಲಲ್ಲಿ ಇಂತಹ ಘಟನೆ ಮರುಕಳಿಸುತ್ತಿದ್ದು , ಪೆÇಲೀಸರು ನಿಯಂತ್ರಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದಕ್ಕೂ ಮುನ್ನ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಕುರಿತು ಮಾತನಾಡಿದ ಅವರು, ಲಾಲ್‍ಬಹುದ್ದೂರ್ ಶಾಸ್ತ್ರಿಯವರು ರಾಷ್ಟ್ರದ ಬಡವರ ಹಸಿವನ್ನು ನೀಗಿಸಲು ಪಡಿತರ ವ್ಯವಸ್ಥೆ ಜಾರಿಗೆ ತಂದರು. ಅವರ ಆಡಳಿತಾವಧಿಯಲ್ಲಿ ತೀವ್ರ ಬರಗಾಲ ಆವರಿಸಿದ್ದರೂ ಸಮರ್ಪಕ ಹಾಗೂ ವ್ಯವಸ್ಥಿತವಾಗಿ ಬರಗಾಲವನ್ನು ನಿವಾರಿಸಿದ ಕೀರ್ತಿ ಅವರದು ಎಂದರು.  ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿತು. ಅದರ ಯಶಸ್ಸು ಶಾಸ್ತ್ರಿಯವರಿಗೆ ಸಲ್ಲಬೇಕು. ದೇಶಕ್ಕೆ ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ನೀಡಿದ ಅವರು, ಪಂಡಿತ್ ಜವಹಾರ್ ಲಾಲ್ ನೆಹರು ಅವರ ನಿಧನದ ನಂತರ ದೇಶದ ನಾಯಕತ್ವ ವಹಿಸಿದ ಶಾಸ್ತ್ರಿಯವರು, ಕೇವಲ 18 ತಿಂಗಳ ಅವಧಿಯಲ್ಲಿ ಉತ್ತಮ ಆಡಳಿತ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರಾಗಿ ಶಾಸ್ತ್ರಿಯವರು ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಎಂದರು.  ರಾಜ್ಯ ಸರ್ಕಾರದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್ ಝಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin