ಜ.30ರಿಂದ ಕೆಎಸ್‍ಆರ್‍ಟಿಸಿ ನೌಕರರ ಉಪವಾಸ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಬೆಂಗಳೂರು,ಜ.11-ಸಾರಿಗೆ ನಿಗಮಗಳ ಆಡಳಿತ ವರ್ಗದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಜ.30ರಂದು ಎಲ್ಲ ವಿಭಾಗ ಕಚೇರಿಗಳ ಮುಂದೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ ಎಂದು ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಜಂಟಿ ಕಾರ್ಯದರ್ಶಿ ಎಸ್.ನಾಗರಾಜು ತಿಳಿಸಿದರು.   ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಮತ್ತು ನಮ್ಮ ಬೇಡಿಕೆಗಳ ಕುರಿತು ಆಡಳಿತ ವರ್ಗ ಬೇಜಾವಬ್ದಾರಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಬಿಎಂಟಿಸಿ ಮತ್ತು ವಾಯುವ್ಯ ಸಾರಿಗೆ ನಿಗಮಗಳು ಕೆಎಸ್‍ಆರ್‍ಟಿಸಿ ಕಾರ್ಮಿಕರಿಗೆ ಅಪಾರ ಹಣವನ್ನು ಕೊಡಬೇಕಾಗಿದೆ. ಪ್ರೀಮಿಯಮ್ ಹಣ, ಸಹಕಾರಿ ಸಂಘಗಳಿಗೆ ಕೊಡಬೇಕಾಗಿರುವ ವಂತಿಗೆ ಹಣ, ಡಿಆರ್‍ಬಿಎಫ್ ವಂತಿಗೆಗಳನ್ನು ಈ ಸಂಸ್ಥೆಗಳು ಸಂಬಂಧಪಟ್ಟ ಸಂಸ್ಥೆಗಳಿಗೆ ಕಾಲಕಾಲಕ್ಕೆ ಕಳುಹಿಸುತ್ತಿಲ್ಲ ಎಂದು ದೂರಿದರು.  ಘಟಕದ ಮಟ್ಟದಲ್ಲಿ ನೌಕರರು ಕುಂದುಕೊರತೆಗಳ ಬಗ್ಗೆ ಮಾತನಾಡಿದರೆ ಅಂಥವರನ್ನೇ ತಪ್ಪಿತಸ್ಥರಂತೆ ಮಾಡುವುದು ಆಡಳಿತ ವರ್ಗದ ನೀತಿಯಾಗಿದೆ. ಅಧಿಕಾರಿಗಳ ಈ ಅಕ್ರಮವನ್ನು ಯಾರೂ ಪ್ರಶ್ನಿಸದಂತಾಗಿದೆ ಎಂದು ಹೇಳಿದರು.

ತುಮಕೂರು, ಚಾಮರಾಜನಗರ, ಮೈಸೂರು ವಿಭಾಗಗಳಿಂದ ಹಲವಾರು ಕಾರ್ಮಿಕರನ್ನು ಭ್ರಷ್ಟ ಅಧಿಕಾರಿಗಳ ದೂರಿನ ಮೇರೆಗೆ ವರ್ಗಾವಣೆ ಮಾಡಿ ಹಲವು ವರ್ಷಗಳು ಕಳೆದಿದೆ. ಅವರ ಮರು ವರ್ಗಾವಣೆಗೆ ಒತ್ತಾಯ ಮಾಡಿದರೂ ಅಧಿಕಾರಿಗಳು ದ್ವೇಷ ಮನೋಭಾವನೆಯಲ್ಲೇ ಇದ್ದಾರೆ ಎಂದು ಹೇಳಿದರು.
ಸಂಘದ ಕಾರ್ಯಕರ್ತರ ಅಕ್ರಮ ವರ್ಗಾವಣೆಗಳು ರದ್ದಾಗಬೇಕು, ಬಿಎಂಟಿಸಿ ಮತ್ತು ವಾಯುವ್ಯ ನಿಗಮಗಳ ಆಡಳಿತ ವರ್ಗಗಳು ಬಾಕಿ ಹಣವನ್ನು ಕೂಡಲೇ ನೌಕರರಿಗೆ ನೀಡಬೇಕು, ಕೈಗಾರಿಕಾ ಒಪ್ಪಂದ ಮತ್ತು ನ್ಯಾಯಾಧೀಕರಣದ ತೀರ್ಪನ್ನು ಜಾರಿಗೊಳಿಸಬೇಕು, ನೌಕರರ ಅಂತರನಿಗಮ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು, ಸಾರಿಗೆ ನಿಗಮಗಳಿಗೆ ಮಾಟರ್ ವೆಹಿಕಲ್ ತೆರಿಗೆಯನ್ನು ಶಾಶ್ವತವಾಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್, ಸಂಘಟನಾ ಕಾರ್ಯದರ್ಶಿ ನಾರಾಯಣರೆಡ್ಡಿ ಉಪಸ್ಥಿತರಿದ್ದರು.

Facebook Comments

Sri Raghav

Admin