ಟೆಕ್ಕಿ-ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

3-Arrested

ಬೆಂಗಳೂರು, ಜ.11- ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿದಂತೆ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ ಎಂಟು ಕೆಜಿ ಗಾಂಜಾ, 120 ಗ್ರಾಂ ತೂಕದ ಹಶೀಶ್, 874ಗ್ರಾಂ ಎಲ್‍ಎಸ್‍ಡಿ ಪೇಪರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ನೈಜೀರಿಯಾದ ಯುಗೋ ಚುಕ್‍ವ್ ವಿಕ್ಟರ್ ನೌಸು (32), ಜೆ.ಪಿ.ನಗರದ ಜಾನ್ ಮೈಸನ್ ಸಿಮೋನ್ (26), ಒರಿಸ್ಸಾ ಮೂಲದ ಉಮೇಶ್‍ಕುಮಾರ್ ಗಹನ್(25) ಬಂಧಿತರು.  ಕೋರಮಂಗಲದ 5ನೆ ಕ್ರಾಸ್, 4ನೆ ಬ್ಲಾಕ್‍ನಲ್ಲಿರುವ ಸ್ವಾಭಿಮಾನಿ ಕಾರಂಜಿ ಪಾರ್ಕ್ ಬಳಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಸಂಪತ್‍ಕುಮಾರ್, ಇನ್ಸ್‍ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಸಂಬಂಧ ವಿಶೇಷ ತಂಡವನ್ನು ನೇಮಕ ಮಾಡಲಾಗಿತ್ತು.

ಈ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಅವರ ಬಳಿ ಇದ್ದ ಮಾದಕ ವಸ್ತುಗಳಾದ ಗಾಂಜಾ, ಹಶೀಶ್, ಎಲ್‍ಎಸ್‍ಡಿ ಪೇಪರ್‍ಗಳು, ನಾಲ್ಕು ಮೊಬೈಲ್, 3700 ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.  ನೈಜೀರಿಯಾದ ಆರೋಪಿ ವ್ಯಾಪಾರದ ವೀಸಾ ಮೇಲೆ ಭಾರತಕ್ಕೆ ಆಗಸ್ಟ್‍ನಲ್ಲಿ ಬಂದು ಮುಂಬೈನಲ್ಲಿ ಉಳಿದುಕೊಂಡಿದ್ದು, ತದನಂತರ ನವೆಂಬರ್‍ನಲ್ಲಿ ಬೆಂಗಳೂರಿಗೆ ಬಂದು ಮಾದಕ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇನ್ನಿಬ್ಬರು ಆರೋಪಿಗಳು ಈತನೊಂದಿಗೆ ಸೇರಿ ಗಾಂಜಾ ಮಾರಾಟದಲ್ಲಿ ತೊಡಗಿದ್ದುದನ್ನು ಒಪ್ಪಿಕೊಂಡಿ ದ್ದಾರೆ. ಆರೋಪಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ವಿದೇಶಿ ಪ್ರಜೆ ಸಮೇತ ಹಾಗೂ ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ತನಿಖೆ ಮುಂದುವರೆದಿದೆ.

Facebook Comments

Sri Raghav

Admin