ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕದನ ಕುತೂಹಲ, ಬಿಜೆಪಿಗೆ-ಜೆಡಿಎಸ್, ಕಾಂಗ್ರೆಸ್ ಸವಾಲ್

Tumakuru--01

– ಸಿ.ಎಸ್.ಕುಮಾರ್/ ಉಮೇಶ್ ಕೋಲಿಗೆರೆ
ತುಮಕೂರು, ಜ.11- ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲೇ ಅತ್ಯಂತ ಜಿದ್ದಾಜಿದ್ದಿನ ಕಣವೆಂದು ಪರಿಗಣಿಸಲಾಗುವ ತುಮಕೂರು ಗ್ರಾಮಾಂತರ ಕ್ಷೇತ್ರ ಚುನಾವಣೆ ಸಮೀಪಿಸುತ್ತಿದ್ದಂತೆ ಕದನ ಕುತೂಹಲ ಕೆರಳಿಸಲಾರಂಭಿಸಿದೆ.  ಬಿಜೆಪಿಯ ಸುರೇಶ್ ಗೌಡ 2013ರ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಬಾರಿ ಆಯ್ಕೆಯಾಗಿ 2018ರ ಚುನಾವಣೆಯಲ್ಲಿ ಮತ್ತೊಮ್ಮೆ ಈ ಕ್ಷೇತ್ರವನ್ನು ಪ್ರತಿನಿಧಿಸುವ ಉಮೇದಿನಲ್ಲಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಮಾಜಿ ಸಚಿವ ಸಿ.ಚನ್ನಿಗಪ್ಪ ಅವರ ಪುತ್ರ ಹಾಗೂ ಜೆಡಿಎಸ್‍ನ ಮುಖಂಡ ಗೌರಿಶಂಕರ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಬಿಜೆಪಿ ಜೆಡಿಎಸ್‍ನಲ್ಲಿ ಚುನಾವಣೆಯ ಗೆಲುವಿಗೆ ಹೋರಾಟ ನಡೆಯುತ್ತಿದ್ದರೆ. ಆಡಳಿತಾರೂಢ ಕಾಂಗ್ರೆಸ್‍ನಲ್ಲಿ ಬಿ ಫಾರಂಗಾಗಿ ಹಾರಾಟ ನಡೆಯುತ್ತಿದೆ. ಕಳೆದ ಎರಡು ಚುನಾವಣೆಗಳಿಂದಲೂ ಇಲ್ಲಿ ಪ್ರಬಲ ಅಭ್ಯರ್ಥಿ ಇಲ್ಲಿದೆ. ಕಾಂಗ್ರೆಸ್ ಕ್ಷೇತ್ರವನ್ನು ಕಳೆದುಕೊಂಡಿತ್ತು. ಸತತವಾಗಿ ಎರಡನೇ ಅವಧಿಗೆ ಕೆಪಿಸಿಸಿಅಧ್ಯಕ್ಷರಾಗಿ ಮುಂದುವರೆದಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಈ ಚುನಾವಣೆಯಲ್ಲಿ ಜಿಲ್ಲೆಯ ಪ್ರತಿಯೊಂದು ಕ್ಷೇತ್ರವೂ ಅತ್ಯಂತ ಪ್ರತಿಷ್ಠಿತವಾಗಿವೆ. ಅದರಲ್ಲೂ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿದೆ.  ಸುರೇಶ್‍ಗೌಡ ತಾನು ನಂಬಿದ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ತೆರಳಲು ಮುಂದಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸುರೇಶ್ ಗೌಡ ಈ ಬಾರಿ ನಾನು ಗೆದ್ದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ.   ಇನ್ನೂ 2008ರ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಆಯ್ಕೆಯಾಗಿ ಆಪರೇಷನ್ ಕಮಲದಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜೆಡಿಎಸ್‍ನ ಗೌರಿಶಂಕರ್ ಅವರು 2018ರಲ್ಲಿ ಗೆದ್ದು ಮತ್ತೊಮ್ಮೆ ವಿಧಾನಸಭೆಯ ಮೆಟ್ಟಿಲು ತುಳಿಯಲು ಹವಣಿಸುತ್ತಿದ್ದಾರೆ.2013ರ ಚುನಾವಣೆಯಲ್ಲಿ 53457 ಮತಗಳನ್ನು ಪಡೆದು 1572 ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಇವರು ಈ ಬಾರಿ ಮತ್ತೆ ಜೆಡಿಎಸ್‍ನಿಂದ ಸ್ಪರ್ಧಿಸುತ್ತೇನೆ, ಗೆದ್ದೆ ಗೆಲ್ಲುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲು ಕಂಡರೂ ಕ್ಷೇತ್ರದ ನಂಟು ಬಿಡದೆ ನಿರಂತರ ಸಂಪರ್ಕದಲ್ಲಿ ಇರುವುದು ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಜೆಡಿಎಸ್ ವರಿಷ್ಠರ ಆಪ್ತರಾಗಿರುವುದು ಗೌರಿ ಶಂಕರ ಅವರಿಗೆ ಪಕ್ಷ ಸಂಘಟನೆಗೆ ಸಹಕಾರಿಯಾಗಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಶೋಚನೀಯವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಯಲಚವಾಡಿ ನಾಗರಾಜ್ 8599 ಮತಗಳನ್ನು ಪಡೆದು ನಾಲ್ಕನೆ ಸ್ಥಾನ ಗಳಿಸಿದ್ದರು.
ಚುನಾವಣೆ ಬಂದಾಗಲಷ್ಟೇ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸಕ್ರಿಯವಾಗಲಿದೆ. ಉಳಿದಂತೆ ಜನರ ಕೈಗೆ ಕಾಂಗ್ರೆಸ್ ನಾಯಕರು ಸಿಗುವುದಿಲ್ಲ ಎಂಬ ಆರೋಪಗಳಿವೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಪ್ರಭಾವಿ ಮುಖಂಡರಾಗಿರುವ ಮಧುಗಿರಿ ಕ್ಷೇತ್ರದ ಶಾಸಕ ಕೆ ಎನ್ ರಾಜಣ್ಣ ಅವರ ಪುತ್ರ ಆರ್. ರಾಜೇಂದ್ರ ತುಮಕೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್‍ಅಕಾಂಕ್ಷಿಯಾಗಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರಾಗಿ ಕೆಲಸ ಮಾಡಿರುವ ರಾಜೇಂದ್ರ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾಂತರಾಜ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿ, ಕೊನೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಕಳೆದ ಚುನಾವಣೆಯಲ್ಲಿ ಜೆಡಿಎಸ್ ತೂರೆದು ಕೆಜೆಪಿ ಸೇರಿದ್ದ ಮಾಜಿ ಶಾಸಕ ಹೆಚ್ ನಿಂಗಪ್ಪ ಅವರು ಸರಳ ಸಜ್ಜನಿಕೆಯ ವ್ಯಕ್ತಿ ಎಂದೇಗುರುತಿಸಿಕೊಂಡಿದ್ದಾರೆ. ಈಗ ಕಾಂಗ್ರೆಸ್ ಸೇರಿರುವ ನಿಂಗಪ್ಪ ಟಿಕೆಟ್‍ಗಾಗಿ ಲಾಬಿ ಮಾಡುತ್ತಿದ್ದಾರೆ.

ಬಯಲು ಸೀಮೆಯ ನಿಗಮ ಮಂಡಳಿಯ ಅಧ್ಯಕ್ಷರಾದ ಕಲ್ಲಹಳ್ಳಿಯ ದೇವರಾಜ್, ತುಮಕೂರು ಜಿಲ್ಲೆಯ ಜಯಕಾರ್ನಾಟಕ ಸಂಘಟನೆ ಅಧ್ಯಕ್ಷರಾಗಿದ್ದ ಕ್ಯಾತ್ಸಂದ್ರ ನಿವಾಸಿ ಹೆಚ್.ಎನ್.ದೀಪಕ್ ಅವರು ಕೂಡ ಟಿಕೆಟ್‍ಗಾಗಿ ಮುಖಂಡರಿಗೆ ದುಂಬಾಲು ಬಿದಿದ್ದಾರೆ. ಹಲವಾರು ವೈಶಿಷ್ಠ್ಯಗಳಿಗೆ ಹೆಸರಾಗಿರುವ ತುಮಕೂರು ಗ್ರಾಮಾಂತರ ಕ್ಷೇತ್ರ ಈ ಬಾರಿ ಯಾರಿಗೆ ಒಲಿಯಲಿದೆ ಎಂದು ಕಾದು ನೋಡ ಬೇಕಿದೆ. ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಹೋರಾಟ-ಹಾರಾಟ ಇನ್ನಷ್ಟು ಕುತೂಹಲ ಕೆರಳಿಸಿದೆ.

Facebook Comments

Sri Raghav

Admin