ಬಿಜೆಪಿ, ಭಜರಂಗದಳ,ವಿಹೆಚ್‌ಪಿ, ಆರ್‍ಎಸ್‍ಎಸ್’ನವರೆಲ್ಲಾ ಜಿಹಾದಿಗಳು : ದಿನೇಶ್ ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

Dinesh-Gundurao

ಬೆಂಗಳೂರು, ಜ.11- ಬಿಜೆಪಿ, ಭಜರಂಗದಳ, ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಹೀಗಿದ್ದಾಗ ಅವರನ್ನು ಜಿಹಾದಿಗಳೆನ್ನದೆ ಏನೆಂದು ಕರೆಯಬೇಕು. ನಿನ್ನೆ ನೀಡಿದ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.  ನರೇಶ್ ಮೇಸ್ತಾ ಪ್ರಕರಣದಲ್ಲಿ ಬೀದಿಗಿಳಿಯುವ ಬಿಜೆಪಿಯವರು ಧನ್ಯಶ್ರೀ ಸಾವಿನ ಬಗ್ಗೆ ಏಕೆ ಬೀದಿಗಿಳಿಯಲಿಲ್ಲ. ಅವರು ಹಿಂದೂಗಳಲ್ಲವೇ? ನಿಮ್ಮ ಕ್ಷೇತ್ರದವರಲ್ಲವೆ? ಆ ವಿಚಾರದ ಬಗ್ಗೆ ಏಕೆ ಮಾತನಾಡಲ್ಲ. ದ್ವೇಷಕ್ಕೆ ಕುಮ್ಮಕ್ಕು ಕೊಡುವುದೇ ನಿಮ್ಮ ಕೆಲಸ. ನಿಮ್ಮ ಹಿಂದುತ್ವದ ಐಡಿಯಾಲಜಿ ದೇಶವನ್ನು ಬದಲಾಯಿಸುತ್ತಿದೆ. ಇದು ಖಂಡನೀಯ ಎಂದು ಹೇಳಿದರು.

ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಮುಂದೈತೆ ಮಾರಿಹಬ್ಬ ಅಂತಾರೆ. ಇವರಿಗೆ ಏನೆನ್ನಬೇಕು. ಕೋಮು ಕಿಚ್ಚು ಹಚ್ಚುತ್ತಿರುವ ಶೋಭಾ ಕರಂದ್ಲಾಜೆಗೆ ಏನೆಂದು ಕರೆಯಬೇಕು. ಧನ್ಯಶ್ರೀ ತೀರಿ ಹೋದಾಗ ಶೋಭಾ ಕರಂದ್ಲಾಜೆಯವರು ಏಕೆ ಬೀದಿಗಿಳಿಯಲಿಲ್ಲ. ಧನ್ಯಶ್ರೀ ಅವರ ಕ್ಷೇತ್ರದ ಹೆಣ್ಣು ಮಗಳಲ್ಲವೆ? ಅವಳು ಹಿಂದೂ ಅಲ್ಲವೆ? ಅವರ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಅವರ ಪಕ್ಷದ ಸಿದ್ಧಾಂತ ಕೂಡ ದ್ವೇಷ ಬಿತ್ತುವುದಾಗಿದೆ. ಹೀಗಿದ್ದಾಗ ಇಂಥವರಿಗೆ ಏನೆನ್ನಬೇಕು. ಪಿಎಫ್‍ಐ ವಿರುದ್ಧ ಆರೋಪ ಮಾಡುತ್ತೀರ. ಅವರ ಹಾಗೆಯೇ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.  ಪಿಎಫ್‍ಐ ಬ್ಯಾನ್ ಮಾಡುವುದು ಕೇಂದ್ರಕ್ಕೆ ಬಿಟ್ಟಿದ್ದು. ಶೋಭಾ, ಅನಂತ್‍ಕುಮಾರ್ ಹೆಗಡೆ, ಪ್ರಧಾನಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳಲಿ. ಬ್ಯಾನ್ ಮಾಡುವ ಅಧಿಕಾರವಿರುವುದು ಕೇಂದ್ರಕ್ಕೆ ಎಂದು ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧವೂ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್ ಅವರು ಕರ್ನಾಟಕದಿಂದ ಗೋವಾಗೆ ಬರುವ ದನದ ಮಾಂಸದ ತಡೆಗೆ ಯಾರಾದರೂ ಮುಂದಾದರೆ ಕಠಿಣ ಕ್ರಮ ಅಂತ ಪರಿಕ್ಕರ್ ಹೇಳಿದ್ದಾರೆ. ಯೋಗಿ ಅವರು ಮೊದಲು ಪರಿಕ್ಕರ್ ಬಗ್ಗೆ ಮಾತನಾಡಲಿ. ನಂತರ ನಮ್ಮ ರಾಜ್ಯದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರಸ್ತಾಪಿಸಿದ ಡೈರಿ ವಿಷಯಕ್ಕೆ ದಿನೇಶ್ ಗುಂಡೂರಾವ್ ದಿಗ್ಭ್ರಮೆ ವ್ಯಕ್ತಪಡಿಸಿದರು.

ಯಾವುದೋ ಡೈರಿ ಇಟ್ಟುಕೊಂಡು ಅಮಿತ್ ಷಾ ಅವರು ಇಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿಯವರ ಹೆಸರು ಕೂಡ ಡೈರಿಯಲ್ಲಿ ಉಲ್ಲೇಖಿಸಲಾಗಿತ್ತು. 50 ಕೋಟಿ ಎಂದು ಬರೆಯಲಾಗಿತ್ತು. ಈ ಬಗ್ಗೆ ಅಮಿತ್ ಷಾ ಅವರು ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.  ಗಣೇಶ ಹಬ್ಬ ಆಚರಣೆಗೆ 10 ಲಕ್ಷ ಬಾಂಡ್ ವಿಚಾರವನ್ನು ಅಮಿತ್ ಷಾ ಅವರು ಪ್ರಸ್ತಾಪಿಸಿರುವುದು ಶುದ್ಧ ಸುಳ್ಳು.ಆ ವಿಷಯದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಲಾಗಿದೆ. ಮತ್ತೆ ಅದೇ ಸುಳ್ಳನ್ನೇ ಅಮಿತ್ ಷಾ ಅವರು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.  ಕೇಂದ್ರದ ಅನುದಾನದ ಬಗ್ಗೆ ಕೇಳಲು ಅಮಿತ್ ಷಾ ಅವರು ಯಾರು, ಇವರೇನು ಹಣಕಾಸು ಮಂತ್ರಿಯೇ. ನ್ಯಾಯಬದ್ಧವಾಗಿ ಕೇಂದ್ರದಿಂದ ರಾಜ್ಯ ತನ್ನ ಪಾಲನ್ನು ಪಡೆಯುತ್ತಿದೆ. ಜನರ ತೆರಿಗೆ ಹಣದ ಪಾಲು ಕೇಂದ್ರದಿಂದ ಬಂದಿದೆ ಎಂದು ಹೇಳಿದರು.  ಅಮಿತ್ ಷಾ ಅವರು ಪ್ರಸ್ತಾಪಿಸಿರುವ ಡೈರಿ ಎರಡು ವರ್ಷದಿಂದ ಐಟಿ ಕಚೇರಿಯಲ್ಲಿಯೇ ಬಿದ್ದಿದೆ. ಬಿಜೆಪಿಯವರು ಸುಳ್ಳು ಹೇಳುವುದಕ್ಕೆ ಶುರು ಮಾಡಿದ್ದಾರೆ ಎಂದರು.

ದಲಿತರ ಅಭಿವೃದ್ಧಿಗೆ ನಮ್ಮ ಸರ್ಕಾರ ಖರ್ಚು ಮಾಡಿರುವಷ್ಟು ಹಣವನ್ನು ದೇಶದಲ್ಲಿ ಯಾವ ಸರ್ಕಾರವೂ ಖರ್ಚು ಮಾಡಿಲ್ಲ. ನಾವು ಒಂದೇ ವರ್ಷದಲ್ಲಿ 26 ಸಾವಿರ ಕೋಟಿ ಹಣ ನೀಡಿದ್ದೇವೆ. ದಲಿತರು ಹಿಂದೂಗಳಲ್ಲವೇ? ಮುಸಲ್ಮಾನರೆಲ್ಲ ಕೆಟ್ಟವರು ಎಂದು ಬಿಂಬಿಸುವುದಷ್ಟೆ ಬಿಜೆಪಿಯ ಕೆಲಸವಾಗಿದೆ ಎಂದು ಅಮಿತ್ ಷಾ ವಿರುದ್ಧ ದಿನೇಶ್ ವಾಗ್ದಾಳಿ ಮಾಡಿದರು. ಮಹದಾಯಿ ವಿಚಾರದಲ್ಲಿ ಏನಾಗಿದೆ ಎಂಬುದು ನಾಡಿನ ಜನರಿಗೆ ಗೊತ್ತಾಗಿದೆ. ಬಿಎಸ್‍ವೈ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈ ವಿಚಾರದಲ್ಲಿ ಜನರಿಗೆ ಯಾವ ರೀತಿ ಮೋಸ ಮಾಡಿದರು, ಏನು ನಾಟಕ ಮಾಡಿದರು, ನಮ್ಮ ಜನರನ್ನು ಹೇಗೆ ವಂಚನೆ ಮಾಡಿದರೆಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ತಿಳಿಸಿದರು.

ನಿನ್ನೆ ಮನೋಹರ್ ಪರಿಕ್ಕರ್ ಅವರು ಮಹದಾಯಿ ವಿವಾದ ನ್ಯಾಯಾಧಿಕರಣದ ಮುಂದೆಯೇ ಇತ್ಯರ್ಥವಾಗಬೇಕೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಬಿ.ಎಸ್.ಯಡಿಯೂರಪ್ಪ ಅವರು ಭಗೀರಥ ಎಂದು ಶೋಭಾ ಕರಂದ್ಲಾಜೆಯವರು ಹೊಗಳಿದ್ದೇ ಹೊಗಳಿದ್ದು. ಮಹದಾಯಿ ವಿಚಾರದಲ್ಲಿ ಸಾಕಷ್ಟು ಮೋಸವಾಗಿದೆ. ಪ್ರಧಾನಿ ನರೇಂದ್ರಮೋದಿಯವರು ಮಧ್ಯ ಪ್ರವೇಶಿಸಿ ಮುತ್ಸದ್ಧಿತನ ತೋರಬೇಕು. ಧಾರವಾಡ, ಗದಗ, ಬೆಳಗಾವಿ ಜನರಿಗೆ ಬಿ.ಎಸ್.ಯಡಿಯೂರಪ್ಪ ಕ್ಷಮೆ ಕೇಳಬೇಕು. ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಬೇಕೆಂದು ಗುಂಡೂರಾವ್ ಹೇಳಿದರು.

 

Facebook Comments

Sri Raghav

Admin