ಮ್ಯಾಕ್ಸ್ ಮುಲ್ಲರ್ ಶಾಲೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಪಪ್ರಚಾರ, ಸೈಬರ್‍ಕ್ರೈಮ್‍ಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

School--01

ಬೆಂಗಳೂರು,ಜ.11-ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರಿನ ಬಸವೇಶ್ವರನಗರದ ಪ್ರತಿಷ್ಠಿತ ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಶಾಲೆಯ ಹೆಸರಿಗೆ ಕಳಂಕ ತರುವ ಕೆಲಸವನ್ನು ಹಲವು ಕಿಡಿಗೇಡಿಗಳು ಮಾಡುತ್ತಿರುವವರ ವಿರುದ್ಧ ಶಾಲಾ ಆಡಳಿತ ಮಂಡಳಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.  2016 ಫೆಬ್ರವರಿ 13ರಂದು ಮ್ಯಾಕ್ಸ್ ಮುಲ್ಲರ್ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಕಂಬ ಬಿದ್ದು ಸಣ್ಣ ಅನಾಹುತವೊಂದು ಸಂಭವಿಸಿತ್ತು. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಈ ಸಂದರ್ಭದಲ್ಲಿ ಯಾರೂ ಕೂಡ ಸಾವನ್ನಪ್ಪಿರಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಂದಿನ ಘಟನೆ ಬಗ್ಗೆ ನ್ಯಾಯಾಲಯಕ್ಕೆ ಮತ್ತು ಶಿಕ್ಷಣ ಇಲಾಖೆಗೆ ವರದಿ ಕೂಡ ಸಲ್ಲಿಸಲಾಗಿತ್ತು.

ಆದರೆ ಕೆಲವು ವ್ಯಕ್ತಿಗಳು ನಮ್ಮ ಶಾಲೆಗೆ ಕೆಟ್ಟ ಹೆಸರು ತರುವ ದುರದ್ದೇಶದಿಂದ ಈ ಕಾರ್ಯಕ್ರಮದಲ್ಲಿ 9 ಜನ ಮೃತಪಟ್ಟಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ ಎಂದು ವಾಟ್ಸಪ್ ಮತ್ತು ಫೇಸ್‍ಬುಕ್‍ಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾದ ಹೇಮಲತಾ ಜನಾರ್ಧನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

school
ಹೇಮಲತಾ ಜನಾರ್ಧನ್ – ಶಾಲಾ ಮುಖ್ಯಸ್ಥೆ

ಕಳೆದ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಶಾಲೆಯಲ್ಲಿ ಬಡ ಮತ್ತು ಮಧ್ಯಮವರ್ಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಉನ್ನತ ಉದ್ಯೋಗದಲ್ಲಿದ್ದಾರೆ. ರಾಷ್ಟ್ರಮಟ್ಟದ ಕ್ರೀಡೆ, ಯೋಗ ಮುಂತಾದವುಗಳಲ್ಲಿ ಹೆಸರು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ನಮ್ಮ ಶಾಲೆಯ ಅಭಿವೃದ್ದಿಯನ್ನು ಸಹಿಸದೆ ಕೆಲವು ಸಮಾಜಘಾತುಕ ಶಕ್ತಿಗಳು ಅಪಪ್ರಚಾರ ಮಾಡುತ್ತಿರುವ ಬಗ್ಗೆ ಪೋಷಕರು, ತಂದೆತಾಯಿಗಳು ಎಚ್ಚರದಿಂದ ಇರಬೇಕೆಂದು ಮನವಿ ಮಾಡಿರುವ ಅವರು, ಇಂತಹ ಯಾವುದೇ ಅವಘಡಗಳು ನಮ್ಮ ಶಾಲೆಯಲ್ಲಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin