ಅಂತರಿಕ್ಷದಲ್ಲಿ ಇಸ್ರೋ ಸೆಂಚುರಿ : 31 ಉಪಗ್ರಹಗಳೊಂದಿಗೆ 100ನೇ ಉಡಾವಣೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Isro--02

ಚೆನ್ನೈ, ಜ.12-ಅನೇಕ ವಿಶ್ವ ವಿಕ್ರಮಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇಂದು ಉಪಗ್ರಹ ಉಡಾವಣೆಯಲ್ಲಿ ಶತಕದ ಮಹತ್ಸಾಧನೆ ಮೂಲಕ ಹೊಸ ಐತಿಹಾಸಿಕ ದಾಖಲೆಗೆ ಪಾತ್ರವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ (ಚೆನ್ನೈನಿಂದ 110 ಕಿ.ಮೀ.) ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಒಂದೇ ಬಾರಿಗೆ 31 ಉಪಗ್ರಹಗಳು ನಭಕ್ಕೆ ಚಿಮ್ಮಿದ್ದು, ಅಂತರಿಕ್ಷದಲ್ಲಿ ಇಸ್ರೋದ 100ನೇ ಉಡಾವಣೆ ಅತ್ಯಂತ ಯಶಸ್ವಿಯಾಗಿ ಇಡೀ ವಿಶ್ವವೇ ಭಾರತದ ಶತಕ ದಾಖಲೆಗೆ ತಲೆದೂಗಿದೆ.

ಈ ಮೂಲಕ ಇಸ್ರೋದ 42ನೇ ಪಿಎಸ್‍ಎಲ್‍ವಿ ಯೋಜನೆಯೂ ಸಫಲತೆಯ ಹೆಗ್ಗಳಿಕೆ ಪಡೆದಿದ್ದು, ಮತ್ತೊಂದು ಸಾಧನೆಯ ಮೈಲಿಗಲ್ಲು ಸ್ಥಾಪಿಸಿದೆ. ಇಸ್ರೋದ ಅತ್ಯಂತ ವಿಶ್ವಾಸಾರ್ಹ ಪಿಎಸ್‍ಎಲ್‍ವಿ-ಸಿ40 ಗಗನನೌಕೆಯು ವಾತಾವರಣ ವೀಕ್ಷಣೆಯ ಕಾರ್ಟೊಸ್ಯಾಟ್-2 ಸರಣಿಯ ಉಪಗ್ರಹ(710 ಕೆಜಿ) ಮತ್ತು 30 ಸಹ ಉಪಗ್ರಹಗಳನ್ನು(ಒಟ್ಟು 613 ಕೆಜಿ) ಇಂದು ಬೆಳಗ್ಗೆ 9.30ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿತು.

ಇಸ್ರೋದ 100ನೇ ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಕೇಂದ್ರದಲ್ಲಿದ್ದ ಬಾಹ್ಯಾಕಾಶ ವಿಜ್ಞಾನಿಗಳು ಪರಸ್ಪರ ಅಭಿನಂದಿಸಿ ಶುಭಕೋರಿದರು. ಇಸ್ರೋದ ಮಹತ್ವಾಕಾಂಕ್ಷಿ ಭೂ ಪರಿವೀಕ್ಷಣೆ ಮತ್ತು ಹವಾಮಾನ ಮುನ್ಸೂಚನೆ ಉದ್ದೇಶದ ಕಾರ್ಟೋಸ್ಯಾಟ್-2 ಉಪಗ್ರಹ ಸೇರಿದಂತೆ ಒಟ್ಟು 31 ಸ್ಯಾಟಲೈಟ್‍ಗಳನ್ನು ಹೊತ್ತು ಪಿಎಸ್‍ಎಲ್‍ವಿ-ಸಿ40 ರಾಕೆಟ್ ಯಶ್ವಸಿಯಾಗಿ ನಭಕ್ಕೆ ಚಿಮ್ಮುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳನ್ನು ಅಭಿನಂದಿಸಿದರು.
ಪಿಎಸ್‍ಎಲ್‍ವಿ-40 ರಾಕೆಟ್ ಮೈಕ್ರೋ, ನ್ಯಾನೋ ಉಪಗ್ರಹಗಳು ಹಾಗೂ ಕೆನಡಾ, ಫ್ರಾನ್ಸ್, ಫಿನ್‍ಲೆಂಡ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕದ 28 ಸ್ಯಾಟಲೈಟ್‍ಗಳನ್ನು ಸಹ ನಭಕ್ಕೆ ಹೊತ್ತೊಯ್ದಿದೆ. ಕಾರ್ಟೋಸ್ಯಾಟ್-2 ಉಪಗ್ರಹವನ್ನು ನಿಗದಿತ ಸೌರ ಕಕ್ಷೆಯಲ್ಲಿ ಇರಿಸುವಲ್ಲಿ ಪಿಎಸ್‍ಎಲ್‍ವಿ ರಾಕೆಟ್ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.

ಇದೇ ರೀತಿ ಇತರ ಉಪಗ್ರಹಗಳನ್ನೂ ಕಕ್ಷೆಗೆ ಸೇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್ 31ರಂದು ಪಿಎಸ್‍ಎಲ್‍ವಿ ಮೂಲಕ ಇಸ್ರೋ ನಡೆಸಿದ್ದ ಕಾರ್ಟೋಸ್ಯಾಟ್ ಉಡಾವಣೆ ವಿಫಲಗೊಂಡಿತ್ತು. ಆ ಬಳಿಕ ಅದೇ ಸರಣಿಯ ರಾಕೆಟ್‍ನಲ್ಲೇ ಉಡ್ಡಯನಕ್ಕೆ ಮುಂದಾಗಿದ್ದರಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ವಾತಾವರಣದ ಮೇಲೆ ನಿಗಾ ವಹಿಸುವ ಕಾರ್ಟೋಸ್ಯಾಟ್-2 ಉಡಾವಣೆಯಾಗಿರುವ ಏಳನೇ ಉಪಗ್ರಹವಾಗಿದೆ.

ಕಾರ್ಟೋಸ್ಯಾಟ್-2 ವಿಶೇಷತೆ:
ಯಶಸ್ವಿಯಾಗಿ ಕಕ್ಷೆ ಸೇರಿರುವ ಕಾರ್ಟೋಸ್ಯಾಟ್-2 ಉಪಗ್ರಹವು 710 ಕೆ.ಜಿ ತೂಕದ್ದಾಗಿದ್ದು. ಭೂ ರೇಖಾಚಿತ್ರ, ನಕ್ಷೆ, ದೇಶ ನಗರ ಮತ್ತು ಗ್ರಾಮೀಣ ಪ್ರದೇಶದ ಚಿತ್ರಣ, ಕರಾವಳಿ ಅಂಚಿನ ಭೂಮಿಯನ್ನು ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡುವ ಉದ್ದೇಶದ ಭೂನಕ್ಷೆ ಚಿತ್ರಗಳನ್ನು ಅತ್ಯಾಧುನಿಕ (ಹೈಭೀಮ್) ತಂತ್ರಜ್ಞಾನದಲ್ಲಿ ಸೆರೆಹಿಡಿದು ರವಾನಿಸಲಿದೆ. ಹವಾಮಾನ ಮುನ್ಸೂಚನೆ ಬಗ್ಗೆ ಅತ್ಯಂತ ಉಪಯುಕ್ತ ಮಾಹಿತಿಯನ್ನೂ ಈ ಉಪಗ್ರಹ ರವಾನಿಸಲಿದೆ.

Facebook Comments

Sri Raghav

Admin