ಅಪಘಾತ ರಹಿತ ಚಾಲಕರಿಗೆ ಸಾರಿಗೆ ಸಚಿವ ರೇವಣ್ಣ ಪ್ರಶಂಸೆ

ಈ ಸುದ್ದಿಯನ್ನು ಶೇರ್ ಮಾಡಿ

Revanna--02

ಬೆಂಗಳೂರು, ಜ.12- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಪಘಾತ ರಹಿತ ಚಾಲಕರನ್ನು ಪ್ರೋತ್ಸಾಹಿಲು ಮತ್ತು ಇತರ ಚಾಲಕರಿಗೆ ಮಾದರಿಯಾಗಿ ಅಪಘಾತಗಳನ್ನು ಕಡಿಮೆಗೊಳಿಸಿ ಉತ್ತಮ ಚಾಲನಾ ಹವ್ಯಾಸವನ್ನು ಅಭಿವೃದ್ಧಿಪಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.  ಶಾಂತಿನಗರದ ಕೇಂದ್ರೀಯ ವಿಭಾಗದ 4ನೆ ಘಟಕದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮತ್ತು ಗೋಲ್ಡನ್ ಅವರ್ ಟ್ರಸ್ಟ್ ನವರೊಂದಿಗೆ ಒಡಂಬಡಿಕೆ ಸಹಿ ಮತ್ತು ಪ್ರಥಮ ಚಿಕಿತ್ಸಾ ಕಿಟ್‍ಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬೆಳ್ಳಿ ಪದಕ ವಿತರಣಾ ಯೋಜನೆಯನ್ನು ಐದು ವರ್ಷಗಳಿಂದ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದರು. ಗಂಡಭೇರುಂಡ ಚಿಹ್ನೆಯುಳ್ಳ 32 ಗ್ರಾಂ ಬೆಳ್ಳಿ ಪದಕವನ್ನು ಬೆಂಗಳೂರು ಕೇಂದ್ರೀಯ ವಿಭಾಗದ 2013 ರಿಂದ 2016ರ ಸಾಲಿನಲ್ಲಿ ಒಟ್ಟು 86 ಚಾಲಕ ಮತ್ತು ನಿರ್ವಾಹಕರಿಗೆ ವಿತರಿಸಲಾಗಿದೆ ಎಂದರು. ಬಹು ಹಾಸಿಗೆಯುಳ್ಳ ಆ್ಯಂಬುಲೆನ್ಸ್‍ಅನ್ನು ನಿಗಮದ ಕಾರ್ಯಗಾರದಲ್ಲಿ ನಿರ್ಮಿಸಲಾಗುತ್ತಿದ್ದು, ಗೋಲ್ಡನ್ ಅವರ್ ಟ್ರಸ್ಟ್‍ನವರೊಂದಿಗೆ ಬಹು ಹಾಸಿಗೆಗಳ ಅಪಘಾತ ಸುರಕ್ಷಿತ ವಾಹನದ ಒಡಂಬಡಿಕೆಗೆ ಸಹಿ ಮಾಡುತ್ತಿರುವುದು ಮಹತ್ವದ ಸಂಗತಿಯಾಗಿದೆ ಎಂದರು.

ಕೆಎಸ್‍ಆರ್‍ಟಿಸಿಯಿಂದ ನಿರ್ಮಿಸಲಾಗಿರುವ ಬಹು ಹಾಸಿಗೆಯುಳ್ಳ ಒಂದು ಆ್ಯಂಬುಲೆನ್ಸ್ ವಾಹನವು 10 ಆ್ಯಂಬುಲೆನ್ಸ್‍ಗಳಿಗೆ ಸಮನಾಗಿದ್ದು, ಏಕಕಾಲಕ್ಕೆ ತೀವ್ರ ಸ್ವರೂಪದ 8 ಗಂಭೀರ ಗಾಯಗಳನ್ನು 16 ಸಣ್ಣಪುಟ್ಟ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವಿದ್ದು, ಆವಶ್ಯಕವಾದ ಎಲ್ಲ ವೈದ್ಯಕೀಯ ಉಪಕರಣಗಳನ್ನು ಆ್ಯಂಬುಲೆನ್ಸ್‍ಗಳಲ್ಲಿ ಅಳವಡಿಸಲಾಗಿದೆ ಎಂದರು. ವಾಹನದಲ್ಲಿ ತಕ್ಷಣದ ಚಿಕಿತ್ಸೆ ನೀಡಲು ಬೇಕಾಗುವ ದಾದಿಯರನ್ನು ನಿಯೋಜಿಸಲಾಗಿದೆ ಎಂದರು.ಸದರಿ ವಾಹನವನ್ನು ಹೆಬ್ಬಾಳದ ವೆಟರ್ನರಿ ಕಾಲೇಜು ಸಮೀಪ ನಿಲುಗಡೆಗೊಳಿಸಿದ್ದು, ಅಪಘಾತ ಸುದ್ದಿ ತಿಳಿದ ತಕ್ಷಣ ಆ ಸ್ತಳಕ್ಕೆ ದಾವಿಸಿ ಗಾಯಾಳುಗಳಿಗೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ನಂತರ ಸಮೀಪದ ಆಸ್ಪತ್ರೆಗೆ ಜಿಪಿಎಸ್ ಮೂಲಕ ದಾಖಲಿಸುವ ವ್ಯವಸ್ಥೆ ಮಾಡಲಾಗಿದ್ದು, ತುರ್ತು ಸೇವೆ ಪಡೆಯಲಿಚ್ಚಿಸುವವರು 1062ಕ್ಕೆ ಕರೆ ಮಾಡಬಹುದಾಗಿದೆ ಎಂದರು.

ಗೋಲ್ಡನ್ ಅವರ್ ಟ್ರಸ್ಟ್ ಸಹಯೋಗದೊಂದಿಗೆ ನಿಗಮದ ಸಿಬ್ಬಂದಿಗಳಿಗೆ ತರಬೇತಿ ನೀಡುವ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗಿದೆ. ಒಟ್ಟು 36,781 ಸಿಬ್ಬಂದಿಗಳು ತರಬೇತಿ ಪಡೆಯುತ್ತಿದ್ದಾರೆ. ನಿಗಮದ ಕೇಂದ್ರೀಯ ತರಬೇತಿ ಕೇಂದ್ರ, ಬೆಂಗಳೂರು ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ, ಚಿಕ್ಕಮಗಳೂರು, ಮಳವಳ್ಳಿಯಲ್ಲಿ ಹಂತ ಹಂತವಾಗಿ ತರಬೇತಿ ನೀಡಲಾಗುತ್ತದೆ. ತರಬೇತಿ ಸಿಬ್ಬಂದಿಗಳಿಗೆ ಟ್ರೈನಿಂಗ್ ಅಕಾಡೆಮಿ ಪ್ರಶಸ್ತಿ ಪತ್ರದೊಂದಿಗೆ ನಾನು ಜೀವ ರಕ್ಷಕ ಎಂಬ ಬ್ಯಾಡ್ಜ್‍ಅನ್ನು ನೀಡಲಾಗುವುದು ಎಂದರು. ಗೋಲ್ಡನ್ ಅವರ ಟ್ರಸ್ಟ್ ಅವರಿಂದ ಉಚಿತ 400 ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್, ಭದ್ರತಾ ಮತ್ತು ಜಾಗೃತ ನಿರ್ದೇಶಕ ರವಿ ಎಸ್., ಕೆಎಸ್‍ಆರ್‍ಟಿಸಿ ಅಧ್ಯಕ್ಷರಾದ ಗೋಪಾಲ ಪೂಜಾರಿ, ಬ್ರೈನ್ ಸ್ಪರ್ಶ ಆಸ್ಪತ್ರೆಯ ನರರೋಗ ತಜ್ಞ ಡಾ.ಎನ್.ಕೆ.ವೆಂಕಟರಮಣ ಮುಂತಾದವರು ಉಪಸ್ಥಿತರಿದ್ದರು.

Facebook Comments

Sri Raghav

Admin