ಇಸ್ರೇಲ್‍ನ ದಢೂತಿ ಮುಳ್ಳುಹಂದಿಗಳು ಸ್ಲಿಮ್ ಆಗ್ತಾ ಇರೋದು ಯಾಕೆ ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

rat-4
ಪ್ರಾಣಿಗಳಿಗೂ ಸ್ಥೂಲಕಾಯದ ಸಮಸ್ಯೆ ತಪ್ಪಿದ್ದಲ್ಲ. ಸದಾ ಚಟುವಟಿಕೆಯಿಂದ ಇರುವ ಜೀವಿಗಳ ದೇಹ ತೂಕ ಹೆಚ್ಚಾದರೆ ಅವು ನಡೆದಾಡುವುದಕ್ಕೂ ಕಷ್ಟವಾಗುತ್ತದೆ. ಇಸ್ರೇಲ್‍ನ ಶೇರ್ಮನ್ ಎಂಬ ಮುಳ್ಳುಹಂದಿಗೂ ಈ ಸಮಸ್ಯೆ ಗಂಭೀರವಾಗಿ ಕಾಡಿತ್ತು. ವನ್ಯಜೀವಿ ಆಸ್ಪತ್ರೆಯ ಸಿಬ್ಬಂದಿ ಕಟ್ಟುನಿಟ್ಟಿನ ಪಥ್ಯಾಹಾರದ ಮೂಲಕ ಅದರ ತೂಕವನ್ನು ಕಡಿಮೆ ಮಾಡುತ್ತಿದ್ದಾರೆ. ಶೇರ್ಮನ್ ಎಂಬ ವಯಸ್ಕ ಮುಳ್ಳುಹಂದಿಗೆ ಕಳೆದ ಎರಡು ತಿಂಗಳಿನಿಂದಲೂ ನಡೆದಾಡಲು ಆಗುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಈ ಗಂಡು ಬೇಲಿ ಹಂದಿಯನ್ನು ಇಸ್ರೇಲ್‍ನ ರಮತ್ ಗ್ಯಾನ್ ಸಫಾರಿ ಮೃಗಾಲಯದ ವನ್ಯಜೀವಿ ಆಸ್ಪತ್ರೆಗೆ ಕರೆತರಲಾಗಿತ್ತು.
ವೈದ್ಯಕೀಯ ತಂಡ ಇದರ ಕಾಲುಗಳನ್ನು ಪರೀಕ್ಷಿಸಿದಾಗ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಆದರೆ ಇದು ದಢೂತಿಯಾಗಿರುವುದರಿಂದಲೇ ನಡೆದಾಡಲು ಕಷ್ಟವಾಗುತ್ತಿದೆ ಎಂಬುದನ್ನು ಪಶುವೈದ್ಯರಿಗೆ ಮನವರಿಕೆಯಾಯಿತು. ಶೇರ್ಮನ್ ತೂಕ 1.6 ಕೆಜಿ ಇತ್ತು. ಇದು 600 ರಿಂದ 900 ಗ್ರಾಂಗಳ ನಡುವೆ ಸರಾಸರಿ ತೂಕ ಹೊಂದಿರುವ ಸಾಮಾನ್ಯ ಮುಳ್ಳು ಹಂದಿಗಿಂತಲೂ ಬಹುತೇಕ ಎರಡರಷ್ಟು ತೂಕ ಹೊಂದಿತ್ತು.

rat-1

ಶೇರ್ಮನ್‍ಗೂ ಮುನ್ನ ಇದೇ ಆಸ್ಪತ್ರೆಗೆ ಕೆಲವು ತಿಂಗಳಿನಿಂದ ಅಪಾಯಕಾರಿ ಯಾಗಿ ಸ್ಥೂಲಕಾಯವಾಗಿದ್ದ 10ಕ್ಕೂ ಹೆಚ್ಚು ಮುಳ್ಳುಹಂದಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಅದೇ ರೀತಿ ಈತನಿಗೂ ವೈಯಕ್ತಿ ವ್ಯಾಯಾಮ ಮತ್ತು ಕಠಿಣ ಪಥ್ಯಾಹಾರದ ಮೂಲಕ ತೂಕ ಇಳಿಸುವ ಕ್ರಮಗಳನ್ನು ಸಿಬ್ಬಂದಿ ಕೈಗೊಂಡರು. ಆಸ್ಪತ್ರೆಗೆ ಬಂದಾಗಿನಿಂದ ಇದು 120 ಗ್ರಾಂ ತೂಕ ಕಳೆದುಕೊಂಡಿದ್ದು, ಬೇಸಿಗೆ ವೇಳೆಗೆ ಸಾಮಾನ್ಯ ಗಾತ್ರಕ್ಕೆ ಇಳಿದು ಅದನ್ನು ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್‍ನಲ್ಲಿ ಸ್ಥೂಲಕಾಯ ಮುಳ್ಳುಹಂದಿಗಳ ಸಮಸ್ಯೆ ವ್ಯಾಪಕವಾಗುತ್ತಿದೆ. ವಸತಿ ಪ್ರದೇಶಗಳು ಮತ್ತು ಸಾರ್ವಜನಿಕ ಉದ್ಯಾನಗಳಲ್ಲಿ ಬೀದಿ ಬೆಕ್ಕುಗಳಿಗೆ ಇರಿಸಲಾಗುವ ಆಹಾರವು ಈ ಮುಳ್ಳು ಹಂದಿಗಳಿಗೆ ಸುಲಭವಾಗಿ ಲಭಿಸುವುದರಿಂದ ಅವುಗಳನ್ನು ಭಕ್ಷಿಸಿ ಸ್ಥೂಲಕಾಯವಾಗಿ ಅಪಾಯಕ್ಕೆ ಸಿಲುಕುತ್ತವೆ. ಏಕೆಂದರೆ ಇವು ಅತಿಯಾದ ತೂಕ ಹೊಂದಿರುವುದರಿಂದ ಕ್ಷಿಪ್ರವಾಗಿ ಚಲಿಸಲು ಸಾಧ್ಯವಾಗುವುದಿಲ್ಲ ಹಾಗೂ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಪ್ರಾಣಿ ತಜ್ಞ ವೈದ್ಯರು.

rat-2

ಮುಳ್ಳು ಹಂದಿಗಳು ವಿಸ್ಮಯ ಜೀವಿಗಳು. ವೈರಿಯನ್ನು ಕಂಡೊಡಣೆ ಜೀವರಕ್ಷಣೆಗಾಗಿ ಮುದುರಿಕೊಂಡು ಚೆಂಡಿನಂತೆ ಗುಂಡಾಗಿ ಮೈಮೇಲಿನ ಮುಳ್ಳುಗಳನ್ನು ಚಾಚುತ್ತವೆ. ಹಂದಿಯಂಥ ಮೂತಿ ಮತ್ತು ಚರ್ಮದ ಮೇಲೆ ಚೂಪಾದ ಮುಳ್ಳುಗಳನ್ನು ಹೊಂದಿರುವ ಎರಿನೇಷನ್ ಕುಲಕ್ಕೆ ಸೇರಿದ ಸಣ್ಣ ಗಾತ್ರದ ರಾತ್ರಿ ಸಂಚಾರಿ ಕೀಟಭಕ್ಷಕ ಜೀವಿಗಳಿವು.

Facebook Comments

Sri Raghav

Admin