ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಜತೆ ರಾಮಲಿಂಗಾರೆಡ್ಡಿ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Mangalore--02

ಮಂಗಳೂರು, ಜ.12- ಕರಾವಳಿ ಭಾಗದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಕೋಮು ಸಾಮರಸ್ಯಕ್ಕೆ ಧಕ್ಕೆ, ಇತ್ತೀಚೆಗೆ ನಡೆದಿರುವ ಹಲವು ಘಟನೆಗಳ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ವ್ಯಾಪ್ತಿ ಜಿಲ್ಲೆಯ  ಪೊಲೀಸ್ ಅಧಿಕಾರಿಗಳು ಹಾಗೂ ಮಂಗಳೂರು ನಗರ ಪೊಲೀಸ್ ಅಧಿಕಾರಿಗಳ ಜತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದು ಮಹತ್ವದ ಸಭೆ ನಡೆಸಿದರು. ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪಶ್ಚಿಮ ವಲಯ ವ್ಯಾಪ್ತಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ ಅವರು, ಇತ್ತೀಚೆಗೆ ನಡೆದ ಘಟನಾವಳಿಗಳ ಬಗ್ಗೆ ಮಾಹಿತಿ ಪಡೆದರು.

ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದು, ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತಿರುವುದು, ಪೊಲೀಸರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ನಡೆದಿರುವ ಘಟನೆಗಳ ಬಗ್ಗೆ ಪೊಲೀಸರು ಕೈಗೊಂಡಿರುವ ಕ್ರಮಗಳು, ಸಂಭಾವ್ಯ ಘಟನೆಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಸೂಚನೆ ನೀಡಿದರು. ಮಂಗಳೂರಿನಲ್ಲಿ ನಡೆದ ದೀಪಕ್ ರಾವ್, ಬಷೀರ್ ಹತ್ಯೆ ಪ್ರಕರಣ, ಮೂಡಿಗೆರೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸೇರಿದಂತೆ ಕರಾವಳಿ ಭಾಗದಲ್ಲಿ ನಡೆದ ಘಟನೆಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಗೃಹ ಸಚಿವರಿಗೆ ಮಾಹಿತಿ ನೀಡಿದರು. ಚುನಾವಣಾ ಸಂದರ್ಭವಿರುವುದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಹೆಚ್ಚಿನ ನಿಗಾ ವಹಿಸಬೇಕು ಎಂಬ ಸೂಚನೆಯನ್ನು ಗೃಹ ಸಚಿವರು ಪೊಲೀಸ್ ಅಧಿಕಾರಿಗಳಿಗೆ ನೀಡಿದರು. ಕೋಮುಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.

Facebook Comments

Sri Raghav

Admin