ಮೈಸೂರಿನಲ್ಲಿ ಆರಂಭವಾಯ್ತು ಇಂದಿರಾ ಕ್ಯಾಂಟಿನ್ ಸೇವೆ : ಮೆನು ಏನೇನಿರುತ್ತೆ ಗೊತ್ತೇ…?
ಮೈಸೂರು, ಜ.12- ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮೈಸೂರು ಅರಮನೆಯ ಕಾಡಾ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾಂಟಿನ್ ಉದ್ಘಾಟಿಸಿದರು. ಮೈಸೂರಿನಾದ್ಯಂತ 11 ಕ್ಯಾಂಟಿನ್ಗಳು ಇಂದಿನಿಂದಲೇ ಸೇವೆ ಆರಂಭಿಸಲಿವೆ. ಕಾಡಾ ಕಚೇರಿ, ಇರ್ವಿನ್ ರಸ್ತೆ, ಕೆಆರ್ ಆಸ್ಪತ್ರೆ ಆವರಣ, ಸಬರ್ಬನ್ ಬಸ್ ನಿಲ್ದಾಣ, ಅಜಿತ್ ಸೇಠ್ ನಗರದ ಡಬಲ್ ರಸ್ತೆ, ಅಶೋಕಪುರಂನ ಅಂಬೇಡ್ಕರ್ ಪಾರ್ಕ್ ಬಳಿ, ಕುಂಬಾರ ಕೊಪ್ಪಲು ಗೇಟ್ ಬಳಿ, ಎರಗನಹಳ್ಳಿ ವೃತ್ತದ ಸಮೀಪ, ಜೋಡಿ ತೆಂಗಿನ ಮರ ರಸ್ತೆ, ಶಾರದಾ ದೇವಿ ವೃತ್ತದ ಬಳಿ ಹಾಗೂ ಹಾಲನಹಳ್ಳಿ, ಟಿಎನ್ ಪುರ ಜಂಕ್ಷನ್, ವಿದ್ಯಾರಣ್ಯಪುರಂನ ಸುಯೇಜ್ ಫಾರಂ ಬಳಿ ಇಂದಿರಾ ಕ್ಯಾಂಟಿನ್ ಇಂದಿನಿಂದ ಆರಂಭವಾಯಿತು.
ಕೆಇಎಫ್ ಇನ್ಫ್ರಾ ಸಂಸ್ಥೆ ಬೆಂಗಳೂರು ಮಾದರಿಯಲ್ಲಿ ಪ್ರತಿ ಕ್ಯಾಂಟಿನ್ಗೆ 40 ಲಕ್ಷ ರೂ. ವೆಚ್ಚದಲ್ಲಿ ಪ್ರಿಪ್ರೆಸ್ಡ್ ಸಿಮೆಂಟ್ ಕಾಂಕ್ರಿಟ್ ಸ್ಟ್ರಕ್ಚರ್ ಜೋಡಿಸಿ ಇಂದಿರಾ ಕ್ಯಾಂಟಿನ್ಗಳನ್ನು ನಿರ್ಮಿಸಲಾಗಿದೆ. ಇಂದಿರಾ ಕ್ಯಾಂಟಿನ್ಗಳಿಗೆ ನೀರು, ವಿದ್ಯುತ್, ಚರಂಡಿ ಮೂಲ ಸೌಲಭ್ಯವನ್ನು 20 ಲಕ್ಷ ರೂ. ವೆಚ್ಚವನ್ನು ಮೈಸೂರು ಮಹಾನಗರ ಪಾಲಿಕೆ ಒದಗಿಸಲಿದೆ. ದೆಹಲಿ ಮೂಲದ ರೂರನ್ ಎನ್ವಿರಾನ್ಮೆಂಟ್ ಅಂಡ್ ವಾಟರ್ ಅಸೆಕ್ಟ್ ರೀ ಪ್ರೊಡೆಕ್ಟಿವ್ ಡೆವಲಪ್ಮೆಂಟ್ ಸೊಸೈಟಿಯ ಇಂದಿರಾ ಕ್ಯಾಂಟಿನ್ಗಳಿಗೆ ಆಹಾರ ಸರಬರಾಜು ಮಾಡಲಾಗಿದೆ.
ಮೆನು:
ಇಂದಿರಾ ಕ್ಯಾಂಟಿನ್ನಲ್ಲಿ ಸೋಮವಾರ ಬೆಳಗ್ಗೆ ಇಡ್ಲಿ, ಸಾಂಬಾರು-ಚಟ್ನಿ ಅಥವಾ ಪುಳಿಯೊಗರೆ, ಮಧ್ಯಾಹ್ನ ಮತ್ತು ರಾತ್ರಿ ಅನ್ನ-ಸಾಂಬಾರ್, ಮೊಸರನ್ನ ಅಥವಾ ಟೊಮ್ಯಾಟೋ ಬಾತ್-ಮೊಸರನ್ನ, ಮಂಗಳವಾರ ಇಡ್ಲಿ ಸಾಂಬಾರ್ ಅಥವಾ ಕಾರಾಬಾತ್, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರ್ ಅಥವಾ ಚಿತ್ರನ್ನ-ಮೊಸರನ್ನ, ಬುಧವಾರ ಇಡ್ಲಿ ಸಾಂಬಾರ್ ಅಥವಾ ಪೊಂಗಲ್ , ಮಧ್ಯಾಹ್ನ ಮತ್ತು ರಾತ್ರಿ ಅನ್ನ-ಸಾಂಬಾರ್-ಮೊಸರನ್ನ ಅಥವಾ ವಾಂಗಿಬಾತ್ ಮತ್ತು ಮೊಸರನ್ನ, ಗುರುವಾರ ಬೆಳಗ್ಗೆ ಇಡ್ಲಿ, ಸಾಂಬಾರ್-ಚಟ್ನಿ, ರವಾ ಕಿಚಡಿ, ಮಧ್ಯಾಹ್ನ ಮತ್ತು ರಾತ್ರಿ ಅನ್ನ-ಸಾಂಬಾರ್ ಮತ್ತು ಮೊಸರನ್ನ ಅಥವಾ ಬಿಸಿಬೇಳೆ ಬಾತ್, ಮೊಸರನ್ನ.
ಶುಕ್ರವಾರ ಇಡ್ಲಿ, ಸಾಂಬಾರ್ ಅಥವಾ ಚಿತ್ರಾನ್ನ, ಚಟ್ನಿ. ಮಧ್ಯಾಹ್ನ ರಾತ್ರಿ ಅನ್ನ ಸಾಂಬಾರ್-ಮೊಸರನ್ನ ಅಥವಾ ಮೆಂತ್ಯ ಪಲಾವ್-ಮೊಸರನ್ನ. ಶನಿವಾರ ಬೆಳಗ್ಗೆ ಇಡ್ಲಿ-ಸಾಂಬಾರ್-ಚಟ್ನಿ ಅಥವಾ ವಾಂಗಿಬಾತ್, ಮಧ್ಯಾಹ್ನ-ರಾತ್ರಿ ಅನ್ನ-ಸಾಂಬಾರ್ ಮತ್ತು ಮೊಸರನ್ನ ಅಥವಾ ಪುಳಿಯೊಗರೆ ಮತ್ತು ಮೊಸರನ್ನ. ಭಾನುವಾರ ಬೆಳಗ್ಗೆ ಇಡ್ಲಿ-ಸಾಂಬಾರ್-ಚಟ್ನಿ ಅಥವಾ ಕೇಸರಿ ಬಾತ್-ಖಾರಾಬಾತ್. ಮಧ್ಯಾಹ್ನ-ರಾತ್ರಿ ಅನ್ನ-ಸಾಂಬಾರ್-ಮೊಸರನ್ನ ಅಥವಾ ತರಕಾರಿ ಪಲಾವ್ ಮತ್ತು ಮೊಸರನ್ನ ನೀಡಲಾಗುತ್ತದೆ.