ಸಿಎಂ ಸಿದ್ದರಾಮಯ್ಯ ಅಖಾಡಕ್ಕಿಳಿದರೆ ಹೈವೋಲ್ಟೇಜ್ ಕ್ಷೇತ್ರವಾಗಲಿದೆ ಹೆಬ್ಬಾಳ..!

Hebbala--01-ರವೀಂದ್ರ.ವೈ.ಎಸ್

ಬೆಂಗಳೂರು,ಜ.11-ರಾಜಧಾನಿ ಬೆಂಗಳೂರಿನ ಮಧ್ಯಭಾಗದಲ್ಲಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಈ ಬಾರಿ ಅತ್ಯಂತ ಪ್ರತಿಷ್ಠೆಯ ಕಣವಾಗುವ ಲಕ್ಷಣ ಗೋಚರಿಸುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಈ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಟಕೆಟ್ ಪಡೆಯಲು ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಯಾರೊಬ್ಬರಿಗೂ ಟಿಕೆಟ್ ಖಾತ್ರಿ ಇಲ್ಲದಿದ್ದರೂ ಮನಸ್ಸಿನಲ್ಲೇ ಮಂಡಿಗೆ ಮೇಯ್ದರು ಎಂಬ ನಾಣ್ಣುಡಿಯಂತೆ ಈಗಾಗಲೇ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಗರಿಗರಿಯಾದ ಬಟ್ಟೆ ಹಾಕಿಕೊಂಡು ಮತ ಬೇಟೆ ಆರಂಭಿಸಿದ್ದಾರೆ.

ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ವೈ.ಎ.ನಾರಾಯಣಸ್ವಾಮಿಗೆ ಬಹುತೇಕ ಟಿಕೆಟ್ ಸಿಗುವುದು ಖಚಿತವಾಗಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಯಾರೂ ಕಣಕ್ಕಿಳಿಯಲ್ಲಿದ್ದಾರೆ ಎಂಬುದು ನಿಗೂಢವಾಗಿದೆ. ಈ ನಡುವೆ ಹೆಬ್ಬಾಳದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸಬಹುದೆಂಬ ಮಾತು ಕಾಂಗ್ರೆಸ್‍ನಲ್ಲಿ ಹಬ್ಬಿದೆ. ಆದರೆ ಇದನ್ನು ಸ್ವತಃ ಅವರೇ ನಿರಾಕರಿಸಿದ್ದಾರೆ. ಜೀವನದ ಕೊನೆಯ ಚುನಾವಣೆಯನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಎದುರಿಸಿ ಪುನಃ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆಂಬ ಶಪಥ ಮಾಡಿದ್ದಾರೆ.

ಆದರೂ ಬೆಂಬಲಿಗರು ಮಾತ್ರ ಸಿದ್ದರಾಮಯ್ಯನವರು ಹೆಬ್ಬಾಳದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ಒಂದು ವೇಳೆ ಅವರು ಸ್ಪರ್ಧಿಸಿದರೆ ಈ ಕ್ಷೇತ್ರ ರಾಜ್ಯದಲ್ಲೇ ಹೈವೋಲ್ಟೇಜ್ ಎನಿಸಲಿದೆ. 2008ರ ಕ್ಷೇತ್ರ ಪುನರ್‍ವಿಂಗಡಣೆ ಬಳಿಕ ಹೊಸದಾಗಿ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ಹೆಬ್ಬಾಳ ಬಿಜೆಪಿಯ ಭದ್ರಕೋಟೆಯಾಗಿದೆ. ಮೊದಲು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸೇರ್ಪಡೆಯಾಗಿದ್ದ ಇದು ಒಂದು ಕಾಲದಲ್ಲಿ ಕಾಂಗ್ರೆಸ್‍ನ ಕೋಟೆಯಾಗಿತ್ತು.

ಕ್ಷೇತ್ರ ಮರುವಿಂಗಡಣೆ ನಂತರ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಇಲ್ಲಿ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾದರು. ಶಿವಾಜಿನಗರ ಕ್ಷೇತ್ರದಿಂದ ವಲಸೆ ಬಂದ ನಾಯ್ಡು ಹೆಬ್ಬಾಳದಲ್ಲಿ ತಮ್ಮ ಆದಿಪತ್ಯ ಸಾಧಿಸಿದ್ದರು.  ಈವರೆಗೂ ನಡೆದಿರುವ ಮೂರು ಚುನಾವಣೆಯಲ್ಲಿ ಕಮಲದ ಜೈತ್ರ ಯಾತ್ರೆಯನ್ನು ಕಟ್ಟಿಹಾಕಲು ಕಾಂಗ್ರೆಸ್ ಅಥವಾ ಜೆಡಿಎಸ್‍ನಿಂದ ಸಾಧ್ಯವಾಗಿಲ್ಲ. ಹಾಗಾಗಿ 2018ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಈಗಾಗಲೇ ಅಭ್ಯರ್ಥಿಗಳು ತೆರೆಮರೆಯಲ್ಲಿ ಮತದಾರರನ್ನು ಓಲೈಸಲು ನಾನಾ ರೀತಿಯ ಸರ್ಕಸ್ ನಡೆಸುತ್ತಿದ್ದಾರೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ  ಜಗದೀಶ್ ಕುಮಾರ್ ಎದುರಿಸಿದ ಮೊದಲ ಚುನಾವಣೆಯಲ್ಲಿ ವಿಜಯ ಮಾಲೆ ಧರಿಸಿದರು. ಆದರೆ ಅನಾರೋಗ್ಯದ ಕಾರಣ ಹಠಾತ್ತನೆ ನಿಧನರಾದ ಕಾರಣ ಮತ್ತೆ 2016ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಬಿಜೆಪಿ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಂದು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಿಧಾನಪರಿಷತ್ ಸದಸ್ಯರಾಗಿದ್ದ ವೈ.ಎ.ನಾರಾಯಣಸ್ವಾಮಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿ, ಹೆಬ್ಬಾಳ ಬಿಜೆಪಿಯ ಭದ್ರ ಕೋಟೆ ಎಂಬುದನ್ನು ರುಜುವಾತು ಮಾಡಿದರು. ಉಪಚುನಾವಣೆಯಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ 60367 ಮತಗಳನ್ನು ಪಡೆದರೆ, ಕಾಂಗ್ರೆಸ್‍ನ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್ 41218, ಜೆಡಿಎಸ್‍ನ ಇಸ್ಮಾಯಿಲ್ ಷರೀಫ್ 3666 ಮತಗಳನ್ನು ಪಡೆದಿದ್ದರು.

ಹೇಗಿದೆ ಕ್ಷೇತ್ರ:

ನಗರ ಹಾಗೂ ಅರೆನಗರ ಲಕ್ಷಣ ಹೊಂದಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರ 2018ರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ರಾಜ್ಯದಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ. ಆದರೆ ಇದನ್ನು ಸಿದ್ದರಾಮಯ್ಯ ನಿರಾಕರಿಸಿದರಾದರೂ ರಾಜಧಾನಿಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಕ್ಷೇತ್ರದಲ್ಲಿ ಕುರುಬ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ/ವರ್ಗದ ಮತಗಳು ಹೆಚ್ಚಾಗಿರುವುದರಿಂದ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸಿದರೆ ಗೆಲುವು ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‍ನದ್ದು.  ಒಂದು ವೇಳೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಿದರೆ ಈ ಕ್ಷೇತ್ರದಿಂದ ಹಾಲಿ ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಅಖಾಡಕ್ಕಿಳಿಯುವ ಸಾಧ್ಯತೆ ಇದೆ.

ಈಗಾಗಲೇ ಕ್ಷೇತ್ರದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಸಮಾಜ ಸೇವೆ ಮೂಲಕ ಉಚಿತ ವೈದ್ಯಕೀಯ ಸೇವೆ, ಕುಡಿಯುವ ನೀರು, ಯುವಕರ ಕ್ರೀಡೆಗಳಿಗೆ ಆರ್ಥಿಕ ನೆರವು, ಮಹಿಳೆಯರಿಗೆ ಪ್ರವಾಸ ಭಾಗ್ಯ, ಬಿಪಿಎಲ್ ಕುಟುಂಬಗಳಿಗೆ ಪಡಿತರ ಚೀಟಿ ನೀಡುವುದು, ಚರಂಡಿ ದುರಸ್ತಿ, ಬೀದಿದೀಪ ಅಳವಡಿಕೆ ಸೇರಿದಂತೆ ಹಲವು ರೀತಿಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡಿದ್ದ ಭೈರತಿ ಸುರೇಶ್ ಈಗಾಗಲೇ ಕ್ಷೇತ್ರದಲ್ಲಿ ಕಚೇರಿ ತೆರೆದಿದ್ದಾರೆ. ಮತ್ತೊಂದೆಡೆ ಕೇಂದ್ರದ ಮಾಜಿ ಸಚಿವ ಜಾಫರ್ ಶರೀಫ್ ತಮ್ಮ ಮೊಮ್ಮಗನಿಗೆ ಇದೊಂದು ಬಾರಿ ಟಿಕೆಟ್ ನೀಡುವಂತೆ ಒತ್ತಡ ಹಾಕಿದ್ದಾರೆ.

ಇನ್ನು ಬಿಜೆಪಿಯಿಂದ ಹಾಲಿ ಶಾಸಕ ವೈ.ಎ.ನಾರಾಯಣಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅವರಿಗೆ ಶಿವಾಜಿನಗರದಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‍ನಿಂದ ಮುಖಂಡ ಹನುಮಂತೇಗೌಡ ಕಣಕ್ಕಿಳಿಯಲು ಸಿದ್ದತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಅವರು ಕೂಡ ತೆರೆಮರೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಈವರೆಗೂ ಯಾವುದೇ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿಲ್ಲವಾದರೂ ಆಕಾಂಕ್ಷಿಗಳು ಮಾತ್ರ ತಾವೇ ಹುರಿಯಾಳುಗಳೆಂಬ ಭಾವನೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರು ಬಿಬಿಎಂಪಿಯ ಹೆಬ್ಬಾಳ, ಸಂಜಯನಗರ, ರಾಧಾಕೃಷ್ಣನಗರ, ಗಂಗಾನಗರ, ಗಂಗೇನಹಳ್ಳಿ ಹಾಗೂ ವಿ.ನಾಗೇನಹಳ್ಳಿ ವಾರ್ಡ್‍ಗಳನ್ನು ಒಳಗೊಂಡಿದೆ.

Facebook Comments

Sri Raghav

Admin